Advertisement
ಶುಕ್ರವಾರ 2,366 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 78 ಮಂದಿಯಲ್ಲಿ ಸೋಂಕು ದೃಢವಾಗಿದೆ. ಆ ಮೂಲಕ ಸಕ್ರಿಯ ಸೋಂಕಿನ ಪ್ರಕರಣ 175ಕ್ಕೆ ಏರಿಕೆಯಾಗಿದೆ. 162 ಮಂದಿ ಹೋಂ ಐಸೊಲೇಶನ್ ಹಾಗೂ 13 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ ಆರು ಮಂದಿ ಸೋಂಕಿತರು ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಹಾವಳಿ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಅದರ ನಿಯಂತ್ರಣ ಮತ್ತು ಪರಾಮರ್ಶೆಗೆ ಸಚಿವ ಸಂಪುಟ ಉಪಸಮಿತಿ ರಚಿಸಿ ಶುಕ್ರವಾರ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಈ ಉಪಸಮಿತಿಯಲ್ಲಿ ಸಚಿವರಾದ ಡಾ| ಎಚ್.ಸಿ. ಮಹದೇವಪ್ಪ, ಶರಣಪ್ರಕಾಶ ಪಾಟೀಲ್, ಡಾ| ಎಂ.ಸಿ.ಸುಧಾಕರ್ ಸದಸ್ಯರಾಗಿದ್ದಾರೆ. ಮೂವರೂ ಮೂಲತಃ ವೈದ್ಯರಾಗಿದ್ದಾರೆ. ಈ ಸಮಿತಿಯು ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿ ನಿಯಮಿತವಾಗಿ ಸಭೆಗಳನ್ನು ನಡೆಸಿ, ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲಿದೆ.
Related Articles
Advertisement
ಸಾಂಕ್ರಾಮಿಕ ರೋಗ ತೀವ್ರಗೊಳ್ಳದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳು, ಒಂದು ವೇಳೆ ತೀವ್ರಗೊಂಡರೆ ಮಾರ್ಗೋಪಾಯಗಳು, ಹಾಸಿಗೆ, ಆಕ್ಸಿಜನ್ ಮತ್ತಿತರ ಸೌಲಭ್ಯಗಳು ಇದೆಲ್ಲವನ್ನೂ ಉಪಸಮಿತಿ ಮೇಲುಸ್ತುವಾರಿ ಮತ್ತು ಪರಾಮರ್ಶೆ ಮಾಡಲಿದೆ. ಇದಕ್ಕೆ ಪೂರಕವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ನೆರವು ನೀಡಲಿದೆ.