Advertisement

ಕರಾವಳಿಯಲ್ಲಿ ಕೋವಿಡ್‌ ಮುನ್ನೆಚ್ಚರಿಕೆ; ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ

02:10 AM Dec 27, 2022 | Team Udayavani |

ಮಂಗಳೂರು: ಕೊರೊನಾ ರೂಪಾಂತರಿ ಬಿಎಫ್‌ 7 ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಕೋವಿಡ್‌ ಹೈರಿಸ್ಕ್ ದೇಶಗಳಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

Advertisement

ವಿಮಾನ ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯಿಂದ ಹೆಚ್ಚುವರಿ ಸಿಬಂದಿ ನಿಯೋಜಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಈ ಹಿಂದೆಯೇ ವಿದೇಶಿ ಪ್ರಯಾಣಿಕರ ಮೇಲೆ ನಿಗಾ ಇಡಲಾಗುತ್ತಿತ್ತು. ಅದನ್ನು ಸದ್ಯ ಮುಂದುವರಿಸಲಾಗಿದ್ದು, ಪ್ರಯಾಣಿಕರ ಪೈಕಿ ಶೇ. 2ರಷ್ಟು ಮಂದಿಗೆ ಕೋವಿಡ್‌ ತಪಾಸಣೆ ನಡೆಸಲಾಗುತ್ತಿದೆ. ಕೋವಿಡ್‌ ಪ್ರಕರಣ ದಾಖಲಾದರೆ ಹೆಚ್ಚಿನ ಪರೀಕ್ಷೆಗೆಂದು ಜಿನೋಮಿಕ್‌ ಸೀಕ್ವೆನ್ಸಿಂಗ್‌ ಲ್ಯಾಬ್‌ಗ ಕಳುಹಿಸಲಾಗುತ್ತಿದೆ. ದ.ಕ.ದಲ್ಲಿ ಕಳೆದ ಐದು ದಿನಗಳಿಂದ ಯಾವುದೇ ಹೊಸ ಕೋವಿಡ್‌ ಪ್ರಕರಣಗಳಿರಲಿಲ್ಲ. ಆದರೂ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಕ್ಕೆ ಮುಂದಾಗಿದೆ.

ವೆನ್ಲಾಕ್‌ ಆಸ್ಪತ್ರೆಯಲ್ಲಿ
ಐಸೋಲೇಶನ್‌ ವಾರ್ಡ್‌?
ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡಲು ರಾಜ್ಯ ಸರಕಾರ ನಿರ್ಧರಿಸಿದ್ದು, ಅದರಂತೆ ವೆನ್ಲಾಕ್‌ ಆಸ್ಪತ್ರೆಯಲ್ಲಿ ಪ್ರತ್ಯೇಕ ಐಸೋಲೇಶನ್‌ ವಾರ್ಡ್‌ ತೆರೆಯಲು ಸಿದ್ದತೆ ನಡೆಯುತ್ತಿದೆ. ವಿಮಾನದಲ್ಲಿ ಆಗ ಮಿಸುವ ಅಂತಾರಾಷ್ಟ್ರೀಯ ಪ್ರಯಾ ಣಿಕರಿಗೆ ಕೋವಿಡ್‌ ಲಕ್ಷಣ ಇದ್ದರೆ ಅವರನ್ನು ಈ ಐಸೋಲೇಶನ್‌ ವಾರ್ಡ್‌ಗೆ ದಾಖಲಿಸಲಾಗುತ್ತದೆ. ಕೋವಿಡ್‌ ದೃಢಪಟ್ಟರೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.
ಶಾಪಿಂಗ್‌ ಮಾಲ್‌, ಕಚೇರಿಗಳು, ಸಿನೆಮಾ ಹಾಲ್‌, ಪಬ್‌, ಬಾರ್‌, ರೆಸ್ಟೋರೆಂಟ್‌, ಬಸ್‌, ರೈಲು, ವಿಮಾನ ಯಾನದ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಅಗತ್ಯ. ಆರೋಗ್ಯ ಸಮಸ್ಯೆ ಇರುವವರು, ವೃದ್ಧರು ಒಳಾಂಗಣದಲ್ಲಿದ್ದಾಗಲೂ ಮಾಸ್ಕ್ ಧರಿಸುವುದು ಉತ್ತಮ. ಅರ್ಹರೆಲ್ಲರೂ ಕೋವಿಡ್‌ 19 ಲಸಿಕೆಯ ಮುನ್ನೆಚ್ಚರಿಕೆ ಡೋಸ್‌ ಶೀಘ್ರ ಪಡೆಯಿರಿ.

ಸಾರ್ವಜನಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಆದಷ್ಟು ಹೊರಾಂಗಣದಲ್ಲಿ ಆಯೋಜಿಸ
ಬೇಕು. ಕೈಗಾರಿಕೆ ಸಹಿತ ಇತರ ಕಾರ್ಖಾನೆ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬಂದಿ ಕಡ್ಡಾಯವಾಗಿ ಸುರಕ್ಷಿತ ಅಂತರ ಕಾಯ್ದುಕೊಳ್ಳ ಬೇಕು ಮತ್ತು ಮಾಸ್ಕ್ ಧರಿಸಬೇಕು. ಹೆಚ್ಚಿನ ಜನರು ಗುಂಪುಗೂಡುವಿಕೆಯನ್ನು, ವಿಶೇಷವಾಗಿ ಒಳಾಂಗಣಗಳಲ್ಲಿ ಗುಂಪು ಗೂಡುವಿಕೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟ ಬೇಕು ಎಂದು ಸೂಚಿಸಿದ್ದಾರೆ.

ಮುನ್ನೆಚ್ಚರಿಕೆ: ಡಿಸಿ ಸೂಚನೆ
ದ.ಕ. ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣದಲ್ಲಿದ್ದು, ಕೆಲವು ದೇಶಗಳಲ್ಲಿ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಸೂಚಿಸಿದ್ದಾರೆ.

Advertisement

18 ವರ್ಷ ಮೇಲ್ಪಟ್ಟವರಿಗೆ
ಮುಂಜಾಗ್ರತೆ ಲಸಿಕೆ ಕಡ್ಡಾಯ
ಉಡುಪಿ: ಸಂಭಾವ್ಯ ಕೋವಿಡ್‌ 4ನೇ ಅಲೆಯ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಮುಂಜಾಗ್ರತೆ ಲಸಿಕೆ ಪಡೆಯುವುದು ಕಡ್ಡಾಯವಾಗಿದೆ.

18 ವರ್ಷ ಮೇಲ್ಪಟ್ಟವರಲ್ಲಿ 2ನೇ ಡೋಸ್‌ ಕೋವ್ಯಾಕ್ಸಿನ್‌ ಲಸಿಕೆ ಪಡೆದು 6 ತಿಂಗಳು ದಾಟಿದವರು ಹಾಗೂ 15ರಿಂದ 17 ವರ್ಷ ಪ್ರಾಯದ ಶಾಲಾ ಮಕ್ಕಳಲ್ಲಿ ಕೋವ್ಯಾಕ್ಸಿನ್‌ ಎರಡನೇ ಡೋಸ್‌ ಲಸಿಕೆ ಪಡೆಯಲು ಬಾಕಿ ಇದ್ದಲ್ಲಿ ಸಮೀಪದ ಸರಕಾರಿ ಆಸ್ಪತ್ರೆಯನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯ ಬಗ್ಗೆ ಖಚಿತಪಡಿಸಿಕೊಂಡು ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ ಲಸಿಕೆ ಪಡೆಯಬಹುದಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಕೋವ್ಯಾಕ್ಸಿನ್‌ ಲಸಿಕೆ ಮಾತ್ರ ಲಭ್ಯವಿದ್ದು, ಕೊವಿಶೀಲ್ಡ್‌ ಲಭ್ಯವಿರುವುದಿಲ್ಲ. ಕೊವಿಶೀಲ್ಡ್‌ ಲಸಿಕೆಯು ಜಿಲ್ಲೆಗೆ ಸರಬರಾಜಾದ ತತ್‌ಕ್ಷಣ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ, ರಾಜ್ಯ ಸರಕಾರದ ಮಾರ್ಗಸೂಚಿಯೇ ಅನ್ವಯ
ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಹೊರಡಿಸಿರುವ ಮಾರ್ಗಸೂಚಿ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗುವುದು. ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು, ಕಾರ್ಯಕ್ರಮ ಆಯೋಜನೆ ಇತ್ಯಾದಿಗಳ ಕುರಿತು ರಾಜ್ಯ ಸರಕಾರ ಸೋಮವಾರ ಹೊರಡಿಸುವ ಮಾರ್ಗಸೂಚಿಯನ್ನು ಜಿಲ್ಲೆಯಲ್ಲಿ ಪಾಲಿಸಲಾಗುತ್ತದೆ. ಡಿ. 31ರ ವಾರ್ಷಾಂತ್ಯದ ಸಂಭ್ರಮ ಆಚರಣೆಗೆ ವಿಧಿಸಬಹುದಾದ ನಿರ್ಬಂಧ ಮತ್ತು ಕಾರ್ಯಕ್ರಮ ಹೇಗೆ ನಡೆಸಬೇಕು ಎಂಬಿತ್ಯಾದಿ ವಿಷಯಗಳ ಕುರಿತು ಮಾರ್ಗಸೂಚಿ ನೀಡಲು ಒಂದೆರಡು ದಿನಗಳಲ್ಲಿ ಅಧಿಕಾರಿಗಳು ಹಾಗೂ ವಿವಿಧ ಸ್ಟೇಕ್‌ ಹೋಲ್ಡರ್ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ಮಾಹಿತಿ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next