Advertisement
ಗೋವಾ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಜೆಎನ್.1 ಪ್ರಕರಣಗಳಿದ್ದು, ಈ ಪೈಕಿ ಗೋವಾದಲ್ಲಿ 19, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ತಲಾ 1 ಕೇಸು ದೃಢಪಟ್ಟಿವೆ ಎಂದೂ ಅವರು ತಿಳಿಸಿದ್ದಾರೆ. ಆದರೆ ಯಾರೂ ಕೂಡ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ತತ್‌ಕ್ಷಣಕ್ಕೆ ಈ ಹೊಸ ತಳಿ ಕಳವಳಕಾರಿಯೇನೂ ಅಲ್ಲ. ಸದ್ಯ ದೃಢಪಟ್ಟಿರುವ ಶೇ.91ರಿಂದ ಶೇ.92 ಪ್ರಕರಣಗಳಲ್ಲಿ ಸೋಂಕಿತರು ಮನೆಯಲ್ಲಿಯೇ ಇದ್ದು ಆರೈಕೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ರಾಜ್ಯಗಳಲ್ಲಿ ಕೊರೊನಾ ಪತ್ತೆ ಪರೀಕ್ಷೆ ಮತ್ತು ನಿಗಾ ವ್ಯವಸ್ಥೆ ಮತ್ತಷ್ಟು ಬಲಪಡಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಪೌಲ್ ಸ್ಪಷ್ಟಪಡಿಸಿದ್ದಾರೆ.
Related Articles
Advertisement
ಎಚ್ಚರದಿಂದ ಇರೋಣ; ಆರೋಗ್ಯ ವಿಚಾರದಲ್ಲಿ ರಾಜಕೀಯ ಬೇಡ: ಸಚಿವ ಮಾಂಡವಿಯಾ
“ಕೊರೊನಾ ಮತ್ತೆ ಹೆಚ್ಚಾಗುತ್ತಿರುವ ವಿಚಾರದಲ್ಲಿ ರಾಜಕೀಯ ಬೇಡ. ಎಲ್ಲರೂ ಎಚ್ಚರಿಕೆಯಿಂದ ಇರೋಣ. ಆತಂಕಪಡುವ ಅಗತ್ಯ ಇಲ್ಲ” ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್‌ಸುಖ್‌ಮಾಂಡವಿಯಾ ಹೇಳಿದ್ದಾರೆ. ರಾಜ್ಯಗಳ ಆರೋಗ್ಯ ಸಚಿವರ ಜತೆಗೆ ಬುಧವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನ ಸಭೆ ನಡೆಸಿದ ಸಂದರ್ಭದಲ್ಲಿ ಅವರು ಈ ಸಲಹೆ ನೀಡಿದ್ದಾರೆ. ಕೊರೊನಾ ಸಮಸ್ಯೆ ಪೂರ್ತಿಯಾಗಿ ನಿವಾರಣೆ ಆಗಿಲ್ಲ. ರಾಜ್ಯಗಳು ಹೆಚ್ಚಿನ ನಿಗಾ ಇರಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದೇ ತಂಡದ ರೀತಿಯಲ್ಲಿ ಕೆಲಸ ಮಾಡಬೇಕು. ಆಸ್ಪತ್ರೆಗಳು ಸನ್ನದ್ಧ ಸ್ಥಿತಿಯಲ್ಲಿ ಇರುವ ಬಗ್ಗೆ ಪ್ರಾಯೋಗಿಕ ಪ್ರಯೋಗವೂ ನಡೆಯಬೇಕಾಗಿದೆ” ಎಂದು ಮಾಂಡವೀಯಾ ಹೇಳಿದ್ದಾರೆ. ಕೇಂದ್ರದಿಂದ ರಾಜ್ಯ ಸರಕಾರಗಳಿಗೆ ಎಲ್ಲ ರೀತಿಯ ನೆರವನ್ನೂ ನೀಡಲಾಗುತ್ತದೆ ಎಂದೂ ಸಚಿವರು ಹೇಳಿದ್ದಾರೆ.
ಆರೋಗ್ಯ ಸಚಿವರ ಸಲಹೆಗಳೇನು?
-ನಾವೆಲ್ಲರೂ ಅಲರ್ಟ್ ಆಗಿರಬೇಕು, ಹಾಗಂತ ಆತಂಕದ ಅಗತ್ಯವಿಲ್ಲ
-ಎಲ್ಲ ರಾಜ್ಯಗಳು ಕೊರೊನಾ ಸೋಂಕಿನ ಕುರಿತ ಹೆಚ್ಚಿನ ನಿಗಾ ವಹಿಸಬೇಕು
-ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಿ
-ಪಾಸಿಟಿವ್ ಸ್ಯಾಂಪಲ್‌ಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬ್‌ಗ ಕಳುಹಿಸಿಕೊಡಿ
-ಔಷಧ, ಆಮ್ಲಜನಕ ಸಿಲಿಂಡರ್‌ಗಳು, ವೆಂಟಿಲೇಟರ್‌ಗಳು, ಲಸಿಕೆಗಳು ಸಾಕಷ್ಟು ಲಭ್ಯವಿರುವಂತೆ ನೋಡಿಕೊಳ್ಳಿ
-ಪ್ರತೀ ಮೂರು ತಿಂಗಳಿಗೊಮ್ಮೆ ಎಲ್ಲ ಆಸ್ಪತ್ರೆಗಳಲ್ಲಿ ಮಾಕ್ ಡ್ರಿಲ್ ನಡೆಸಿ
-ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ನಾಗರಿಕರಲ್ಲಿ ಜಾಗೃತಿ ಮೂಡಿಸಿ