Advertisement

3ನೇ ಅಲೆ ಖಚಿತ : ಸರ್ಕಾರಗಳು ಹಾಗೂ ಜನರು ಮೈಮರೆತಿರುವುದರ ಬಗ್ಗೆ ಐಎಂಎ ಕಳವಳ

03:38 AM Jul 13, 2021 | Team Udayavani |

ಹೊಸದಿಲ್ಲಿ: ಕೊರೊನಾ ಸೋಂಕಿನ ತೀವ್ರತೆ ಕಡಿಮೆಯಾಗುತ್ತಿದ್ದಂತೆಯೇ, ಸರ್ಕಾರಗಳು ಹಾಗೂ ಜನರು ಮೈಮರೆತಿರುವುದರ ಬಗ್ಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ತೀವ್ರ ಕಳವಳ ವ್ಯಕ್ತಪಡಿಸಿದೆ. ಕೊರೊನಾ ಸೋಂಕಿನ 3ನೇ ಅಲೆ ಬರುವುದು ಖಚಿತ. ಇಂಥ ಅಪಾಯಕಾರಿ ಸನ್ನಿವೇಶವಿದ್ದರೂ ಜನರು ನಿರ್ಲಕ್ಷ್ಯ ವಹಿಸಿರುವುದು ನೋಡಿದರೆ ಆತಂಕವಾಗುತ್ತದೆ ಎಂದು ಐಎಂಎ ಹೇಳಿದೆ.

Advertisement

ನಾಗರಿಕರು ಕೊರೊನಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ, ಗುಂಪುಗೂಡಲು ಆರಂಭಿಸಿದ್ದಾರೆ. ಪ್ರವಾಸ, ಯಾತ್ರೆ, ಧಾರ್ಮಿಕ ಕಾರ್ಯಕ್ರಮಗಳೆಲ್ಲವೂ ಬೇಕು ನಿಜ. ಆದರೆ, ಅವುಗಳಿಗೆ ಕೆಲವು ತಿಂಗಳಾದರೂ ಕಾಯಬಹುದು. ಈ ಸಮಯದಲ್ಲಿ ಯಾವುದೇ ಹಬ್ಬ, ಉತ್ಸವಗಳನ್ನು ಆಚರಿಸುವುದು ಅಪಾಯಕಾರಿ ಎಂದು ಐಎಂಎ ಅಧ್ಯಕ್ಷ ಡಾ|ಜೆ.ಎ.ಜಯಲಾಲ್‌ ಹೇಳಿದ್ದಾರೆ.

ಜಾಗತಿಕ ಸಾಕ್ಷ್ಯಗಳು ಹಾಗೂ ಸಾಂಕ್ರಾಮಿಕದ ಇತಿಹಾಸವನ್ನು ನೋಡಿದರೆ, “3ನೇ ಅಲೆಯನ್ನು ತಪ್ಪಿಸಲಾಗದು. ಅದು ಬರುವುದು ಖಚಿತ’ ಎಂಬುದು ಸ್ಪಷ್ಟವಾಗುತ್ತದೆ. ಇಂತಹ ಆತಂಕಕಾರಿ ಸ್ಥಿತಿಯಲ್ಲಿ ನಾವೆಲ್ಲರೂ ಸೇರಿ 3ನೇ ಅಲೆಗೆ ಕಡಿವಾಣ ಹಾಕಲು ಪ್ರಯತ್ನಿಸಬೇಕೇ ಹೊರತು, ಸೋಂಕಿನ ಸೂಪರ್‌ ಸ್ಪ್ರೆಡರ್‌ ಆಗಬಾರದು ಎಂದೂ ಅವರು ಸಲಹೆ ನೀಡಿದ್ದಾರೆ. ಜತೆಗೆ, ಹೆಚ್ಚಿನ ಜನದಟ್ಟಣೆ ಸೇರುವ ಕಾರ್ಯಕ್ರಮಗಳಿಗೆ ಒಪ್ಪಿಗೆ ನೀಡುವ ವಿಚಾರದಲ್ಲಿ ಕೇಂದ್ರ ಸರಕಾರ ತನ್ನ ನಿರ್ಧಾರವನ್ನು ಪುನರ್‌ ಪರಿಶೀಲಿಸಬೇಕು ಎಂದೂ ಮನವಿ ಮಾಡಿದ್ದಾರೆ.

ದೇಶದ ಪ್ರತಿಯೊಬ್ಬ ನಾಗರಿಕನೂ ಕನಿಷ್ಠ 3 ತಿಂಗಳಾದರೂ ಕೊರೊನಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಸುತ್ತಮುತ್ತಲಿರುವ ಎಲ್ಲರೂ ಲಸಿಕೆ ಪಡೆಯುವಂತೆ ಉತ್ತೇಜನ ನೀಡಬೇಕು ಎಂದೂ ಡಾ|ಜಯಲಾಲ್‌ ಕೋರಿಕೊಂಡಿದ್ದಾರೆ.

37,154 ಪ್ರಕರಣ: ಭಾನುವಾರದಿಂದ ಸೋಮವಾರಕ್ಕೆ ದೇಶದಲ್ಲಿ 37,154 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಅವಧಿಯಲ್ಲಿ 724 ಮಂದಿ ಮೃತಪಟ್ಟಿದ್ದಾರೆ.

Advertisement

ಝೀಕಾ : 19ಕ್ಕೇರಿಕೆ
ಕೇರಳದಲ್ಲಿ ಕೊರೊನಾ ಜೊತೆಗೇ ಝೀಕಾ ಪ್ರಕರಣ­ಗಳ ಸಂಖ್ಯೆಯೂ ಏರುಗತಿಯಲ್ಲಿ ಸಾಗಿದೆ. ಸೋಮವಾರ 73 ವರ್ಷದ ಮಹಿಳೆಯಲ್ಲೂ ಝೀಕಾ ಕಾಣಿಸಿ ಕೊಂಡಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 19ಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next