Advertisement

ಮುಹೂರ್ತ ಸಿಕ್ಕಿದರೂ ಮದುಮಕ್ಕಳ ಪರದಾಟ…

10:50 PM Apr 22, 2021 | Team Udayavani |

ಉಡುಪಿ: ಕಳೆದೆರಡು ತಿಂಗಳಿಂದ ಶುಕ್ರಾಸ್ತ ಇರುವು ದರಿಂದ ಪರದಾಡುತ್ತಿದ್ದ ಮದು ಮಕ್ಕಳು, ಪೋಷಕರು ಶುಕ್ರಾಸ್ತ ಮುಗಿದಿರುವುದರಿಂದ ಭಾರೀ ಸಂಭ್ರಮದಲ್ಲಿ ಕರಿಮಣಿ ಕಟ್ಟುವ ಕನಸಿನಲ್ಲಿ ನೆಮ್ಮದಿಯಿಂದ ಇದ್ದರು. ಇದೀಗ ಕೋವಿಡ್ ಎರಡನೇ ಅಲೆ ಬಂದು ಮದುವೆ ಮಾಡಿಕೊಳ್ಳು ವವರಿಗೆ ಮುಹೂರ್ತ ಕೈಗೆ ಸಿಕ್ಕಿದರೂ ಪ್ರಯೋಜನವಿಲ್ಲದಂತಾಗಿದೆ.

Advertisement

ಯಾರಿಗೆ ಹಂಚುವುದು? :

ಎರಡು ತಿಂಗಳಿಂದಲೇ ಮದುವೆ ತಯಾರಿ ಮಾಡಿಕೊಂಡು ಸಾವಿರಾರು ಪ್ರತಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದ್ದು ಇದನ್ನು ಯಾರಿಗೆ ಹಂಚುವುದು ಎಂಬ ಚಿಂತೆ ಪೋಷಕರಿಗೆ ಉಂಟಾಗಿದೆ. ಇದು ಕೇವಲ ಮದುವೆಗೆ ಮಾತ್ರವಲ್ಲದೆ ಗೃಹ ಪ್ರವೇಶ, ಉಪನಯನಾದಿಗಳಿಗೂ ಅನ್ವಯವಾಗಿದೆ.

ವೀಕೆಂಡ್‌ ಕರ್ಫ್ಯೂ ಇರುವುದರಿಂದ ಸಂಚರಿಸಲು ಅವಕಾಶ ಇಲ್ಲ. ಸಮಯಾವಕಾಶ ಇರುವುದೇ ಶನಿವಾರ, ರವಿವಾರ. ಈ ದಿನಗಳಲ್ಲಿ ಕರ್ಫ್ಯೂ ಇರುವುದರಿಂದ ಸಂಚರಿಸುವಂತಿಲ್ಲ. ಆಮಂತ್ರಣ ಪತ್ರಿಕೆಗಳು ಮನೆಯಲ್ಲಿ ಮೂಲೆ ಸೇರಲಿದೆ.

ಕೇವಲ ವೀಕೆಂಡ್‌ ಮದುವೆಗಳಿಗೆ ಮಾತ್ರವಲ್ಲದೆ ಮೇ 4ರ ವರೆಗೆ ಯಾವುದೇ ದಿನದ ಮದುವೆಯಲ್ಲಿಯೂ 50 ಜನರಿಗಿಂತ ಹೆಚ್ಚಿಗೆ ಸೇರುವಂತಿಲ್ಲ ಎಂದು ಸರಕಾರ ಹೇಳಿದ್ದಾರೆ. ಈ ಆದೇಶ ಮೇ 4ಕ್ಕೆ ಕೊನೆಗೊಳ್ಳುತ್ತದೆ ಎಂಬ ಖಾತ್ರಿಯೂ ಇಲ್ಲ. ಕೊರೊನಾ ಅಟ್ಟಹಾಸ ಹೆಚ್ಚಿದರೆ ಸರಕಾರದ ಆದೇಶಗಳೂ ಮುಂದುವರಿಯಲಿದೆ. 50 ಜನರಲ್ಲಿ ಛಾಯಾಚಿತ್ರಗ್ರಾಹಕರು, ಪುರೋಹಿತರು, ಅಡುಗೆಯವರು ಸೇರಿರಬೇಕು. ಇವರೇ ಹೆಚ್ಚಾ ಕಡಿಮೆ 10-15 ಜನರಾಗುತ್ತಾರೆ. ಮನೆಯ ಎಲ್ಲ ಸದಸ್ಯರೂ ಪಾಲ್ಗೊ ಳ್ಳದಂತಹ ಸ್ಥಿತಿ ಇದೆ. ಮದುವೆ ಆಯೋಜಕರು ಆಯಾ ತಹಶೀಲ್ದಾರರಿಗೆ ಪಾಲ್ಗೊಳ್ಳುವವರ ಪಟ್ಟಿ ಕಳುಹಿಸಿ ಅವರಿಂದ ಪಾಸ್‌ ಪಡೆದವರು ಮಾತ್ರ ಸಭಾಂಗಣ ಪ್ರವೇಶಿಸಲು ಅವಕಾಶವಿದೆ. ತಪ್ಪಿದಲ್ಲಿ ಸಭಾಂಗಣ ಮಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

Advertisement

ಮದುವೆಗೆ 50 ಜನರೊಳಗೆ ಮಾಡುವುದು ಹೇಗೆಂಬ ಚಿಂತೆ ಆಯೋಜಕರಿಗೆ ಉಂಟಾಗಿದೆ. ಚಿರ ಪರಿಚಿತರು, ಸಂಬಂಧಿಕರಿಗೆ ಮದುವೆಗೆ ಹೇಳದೆ ಇರುವುದು ಹೇಗೆಂಬ ಚಿಂತೆ ಇದೆ. ಬಹುತೇಕ ಮದುವೆಗಳಿಗಿಂತ ಮೆಹಂದಿಯ ವೈಭವವೇ ಜಾಸ್ತಿ ಯಾಗಿರುತ್ತದೆ. ಈಗ ಮೆಹಂದಿಗೂ ನಿಷೇಧವಿದೆ.

ಇದೇ ಸಂದರ್ಭ ಸಭಾಂಗಣದವರಿಗೆ  ಇಷ್ಟು ದಿನ ಪಟ್ಟ ಕಷ್ಟ (ನಷ್ಟ) ನೀಗಿ ಸಿಕ್ಕಿದ ಮದುವೆ ಮುಹೂರ್ತಗಳಿಂದ ಸ್ವಲ್ಪ ಆದಾಯ ಬರಬಹುದು ಎಂಬ ಸಮಾಧಾನ ಮಾಯವಾಗಿದೆ. ಮದುವೆ ಗಳಲ್ಲಿ ಜನರು ಹೆಚ್ಚಿಗೆ ಕಂಡುಬಂದರೆ ಪೊಲೀಸರು ದಾಳಿ ಮಾಡಿದರೆ ಏನು ಮಾಡುವುದೆಂಬ ಚಿಂತೆ ಸಭಾಂ ಗಣದವರಿಗೆ ಇದೆ.

ಯಾವ ದಿನ ಶುಭ ಮುಹೂರ್ತಗಳು? :

ಈಗ ಪಂಚಾಂಗಗಳಲ್ಲಿ ಹಾಕುವ ಮುಹೂರ್ತಗಳು ಬಹಳ ಶ್ರೇಷ್ಠವೆಂದೇನೂ ಅಲ್ಲ. ಇದಕ್ಕೆ ಕಮರ್ಶಿಯಲ್‌ ಕಾರಣವೂ ಇದೆ. ಕೇವಲ ಒಳ್ಳೆಯ ಮುಹೂರ್ತಗಳನ್ನು ಕಾಣಿಸಿದ ಪಂಚಾಂಗಗಳನ್ನು ಕಲ್ಯಾಣ ಮಂಟಪಗಳು ಖರೀದಿಸುವುದಿಲ್ಲ ಎಂಬುದೇ ಆ ಕಾರಣ. ಹೀಗಾಗಿ ಎರಡನೆಯ ದರ್ಜೆ ಮುಹೂರ್ತಗಳನ್ನೂ ಪಂಚಾಂಗಕರ್ತರು ಕಾಣಿಸುತ್ತಾರೆ. ಶುಕ್ರಾಸ್ತದ ಬಳಿಕ ಕೆಲವು ಮುಹೂರ್ತಗಳು ಈ ಕೆಳಗಿನಂತಿವೆ.

ಮದುವೆ ಮುಹೂರ್ತ: ಎ. 25, 26, 29, ಮೇ 2, 3, 13, 20, 23, 24, 26, 28, 30, 31, ಜೂ. 4, 16, 18, 20, 23, 24, 27, 28, ಜು. 1, 2, 7, 15

ಉಪನಯನ ಮುಹೂರ್ತ: ಎ. 25, 29, ಮೇ 2, 3, 5, 6, 13, 17, 23, 24, 30, 31, ಜೂ. 4, 13, 14, 20

ಗೃಹಪ್ರವೇಶ ಮುಹೂರ್ತ: ಎ. 25, 26, 29, ಮೇ 1, 3, 9, 13, 20, 21, 22, 24, 26, 28, 29, 31, ಜೂ. 4, 13, 16, 18, 23, 26, 28, ಜು. 1, 2, 7, 15.

ಸಮಾಧಾನ  ಪಡುವಂತಿಲ್ಲ  :

ಮೆಹಂದಿ ಖರ್ಚು, ಮದುವೆ ಖರ್ಚು ಉಳಿತಾಯವಾಗಲಿದೆ ಎಂಬ ಸಮಾಧಾನ ಪಟ್ಟುಕೊಳ್ಳುವಂತಿದ್ದರೂ ಇದು ಮದುಮಕ್ಕಳ ಕಡೆಯವರ ಪ್ರತಿಷ್ಠೆಯ ವಿಷಯವಾದ್ದರಿಂದ ಆ ಸಮಾಧಾನವನ್ನೂ ಪಡುತ್ತಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next