ನವದೆಹಲಿ:ಭಾರತದಲ್ಲಿನ ಕೋವಿಡ್ 19 ಸೋಂಕಿಗೆ ಸಂಬಂಧಿಸಿದಂತೆ ಪಾಸಿಟಿವ್ ಬೆಳವಣಿಗೆಯಲ್ಲಿ, ದೇಶದಲ್ಲಿ ಈವರೆಗೆ 50 ಲಕ್ಷ ಮಂದಿ ಗುಣಮುಖರಾಗಿರುವುದಾಗಿ ಸೋಮವಾರ (ಸೆಪ್ಟೆಂಬರ್ 28, 2020) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಕಳೆದ ಹನ್ನೊಂದು ದಿನಗಳಲ್ಲಿ ಒಟ್ಟು 10 ಲಕ್ಷ ಮಂದಿ ಕೋವಿಡ್ 19 ಸೋಂಕಿತರು ಚೇತರಿಸಿಕೊಳ್ಳುವ ಮೂಲಕ ಭಾರತದಲ್ಲಿ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳವಾಗಿದೆ. ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶದ ಪ್ರಕಾರ, ಜೂನ್ 3ರ ನಂತರ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ನಿರಂತರವಾಗಿ ಹೆಚ್ಚಳವಾಗಿದೆ ಎಂದು ವಿವರಿಸಿದೆ.
ಇದನ್ನೂ ಓದಿ: ಗಬ್ಬುನಾರುತ್ತಿರುವ ಶೌಚಾಲಯ ಗುಂಡಿಗಳೇ ಉಗ್ರರ ಅಡಗು ತಾಣ!
ಜೂನ್ 3ರಂದು ದಾಖಲೆ ಎಂಬಂತೆ ಒಟ್ಟು ಒಂದು ಲಕ್ಷ ಮಂದಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದು, ಇದೀಗ ಸೆಪ್ಟೆಂಬರ್ 28ರವರೆಗೆ 50 ಲಕ್ಷ ಮಂದಿ ಗುಣಮುಖರಾಗಿದ್ದಾರೆ ಎಂದು ಹೇಳಿದೆ.
ಇತ್ತೀಚೆಗೆ ಭಾರತದಲ್ಲಿ ಪ್ರತಿದಿನ 90ಸಾವಿರಕ್ಕಿಂತಲೂ ಅಧಿಕ ಮಂದಿ ಚೇತರಿಕೆ ಕಾಣುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇದು ಸಕ್ರಿಯ ಪ್ರಕರಣಕ್ಕಿಂತ ಐದು ಪಟ್ಟು ಹೆಚ್ಚಳವಾದಂತಾಗಿದೆ ಎಂದು ತಿಳಿಸಿದೆ.