ನವದೆಹಲಿ: ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಏತನ್ಮಧ್ಯೆ ಏ.20ರಿಂದ ಇನ್ನಷ್ಟು ತುರ್ತು ಸೇವೆಗಳಿಗೆ ಅವಕಾಶ ನೀಡುವ ಮೂಲಕ ನಿರ್ಬಂಧವನ್ನು ಮತ್ತಷ್ಟು ಸಡಿಲಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯದೊಳಗಿನ(ಕೇಂದ್ರಾಡಳಿತ ಪ್ರದೇಶ) ಕೂಲಿ ಕಾರ್ಮಿಕರಿಗೆ ಕೆಲಸ ಮಾಡಲು ಅನುಕೂಲ ಮಾಡಿಕೊಡುವ ನೆಲೆಯಲ್ಲಿ ಎಸ್ ಒಪಿ(standard operation procedure-ಗುಣಮಟ್ಟದ ಕಾರ್ಯಾಚರಣೆ ನಿಯಮ) ಅನ್ನು ಜಾರಿಗೊಳಿಸಿದೆ.
ದೇಶಾದ್ಯಂತ ನಾಳೆಯಿಂದ ತುರ್ತು ಸೇವೆಗಳ ಪಟ್ಟಿಗೆ ಇನ್ನಷ್ಟು ಸೇರ್ಪಡೆಯಾಗಲಿದೆ. ದೇಶದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 15,712ಕ್ಕೆ ಏರಿಕೆಯಾಗಿದೆ, ಸಾವಿನ ಸಂಖ್ಯೆ 507ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೋವಿಡ್ 19 ವೈರಸ್ ಸಾವಿನ ಪ್ರಮಾಣದಲ್ಲಿ ವಯೋಮಾನದ ಅಂಕಿಅಂಶ 0-45 ವಯಸ್ಸಿನವರು ಶೇ.14.4ರಷ್ಟು, 45ರಿಂದ 60 ವರ್ಷದವರು ಶೇ.10.3ರಷ್ಟು, 60-75 ವರ್ಷದವರು ಶೇ.33.1ರಷ್ಟು ಹಾಗೂ 75ಕ್ಕಿಂತ ಹೆಚ್ಚು ವರ್ಷದವರು ಶೇ.42.2ರಷ್ಟು ಪ್ರಮಾಣದಲ್ಲಿ ಸಾವನ್ನಪ್ಪಿದ್ದಾರೆ ಎಂದು ವಿವರಿಸಿದೆ.
ಕೋವಿಡ್ 19 ವೈರಸ್ ಗೆ ಸಾವನ್ನಪ್ಪಿದ ಶೇ.75ರಲ್ಲಿ 60ವರ್ಷಕ್ಕಿಂತ ಮೇಲ್ಪಟ್ಟವರು ಅಧಿಕ. ಶೇ.83ರಷ್ಟು ಪ್ರಕರಣಗಳಲ್ಲಿ ಸಹ ಒಟ್ಟಿಗೆ ಇರುವವರಲ್ಲಿ ಸೋಂಕು ಹಬ್ಬಿರುವುದು ಪತ್ತೆಯಾಗಿದೆ. ಹಿರಿಯ ವಯಸ್ಸಿನ ವ್ಯಕ್ತಿಗಳಿಗೆ ಹೆಚ್ಚು ಅಪಾಯಕಾರಿಯಾಗಿದೆ ಎಂದು ತಿಳಿಸಿದೆ.