ನವದೆಹಲಿ: ದಿಲ್ಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ತಬ್ಲಿಘೀ ಜಮಾತ್ ನ ಆರು ಮಂದಿಯನ್ನು ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿರುವ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಆದರೆ ಆರು ಮಂದಿ ಮಹಿಳಾ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸಿದ್ದರಿಂದ ಎನ್ ಎಸ್ ಎ(ರಾಷ್ಟ್ರೀಯ ಭದ್ರತಾ ಕಾಯ್ದೆ)ಯಡಿ ಪ್ರಕರಣ ದಾಖಲಿಸುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ.
ಅವರು ಕಾನೂನನ್ನು ಪಾಲಿಸಿಲ್ಲ ಅಥವಾ ಆದೇಶವನ್ನು ಸ್ವೀಕರಿಸಿಲ್ಲ. ಇವರು ಮಾನವೀಯತೆಯ ಶತ್ರುಗಳು. ಮಹಿಳಾ ಸಿಬ್ಬಂದಿಗಳ ಜತೆ ನಡೆದುಕೊಂಡ ರೀತಿ ಕ್ಷಮಿಸಲಾರದ ಅಪರಾಧವಾಗಿದೆ. ಅದಕ್ಕಾಗಿಯೇ ಎನ್ ಎಸ್ ಎ ಕಾಯ್ದೆಯಡಿ ದೂರು ದಾಖಲಿಸಿದ್ದೇವೆ. ನಾವು ಅವರನ್ನು ಕ್ಷಮಿಸುವುದಿಲ್ಲ ಎಂದು ಯೋಗಿ ತಿಳಿಸಿದ್ದಾರೆ.
ಇಂದೋರ್ ನಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಯಂತಹ ಘಟನೆ ಉತ್ತರಪ್ರದೇಶದಲ್ಲಿ ಎಲ್ಲಿಯೂ ನಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಕಾನೂನಿನ ಪ್ರಕಾರ ನಾವು ಎಂತಹ ಕ್ರಮವನ್ನು ಬೇಕಾದರೂ ತೆಗೆದುಕೊಳ್ಳಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.
ತಬ್ಲಿಘೀ ಸದಸ್ಯರು ಗಾಜಿಯಾಬಾದ್ ನ ಎಂಎಂಜಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿ ಇದ್ದರು. ಮಹಿಳಾ ಸಿಬ್ಬಂದಿಗಳು ಕೋವಿಡ್ ವೈರಸ್ ಗೆ ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ತಿಳಿಸಿದಾಗ, ಅಶ್ಲೀಲವಾಗಿ ಟೀಕಿಸಿ, ತಮ್ಮ ಪ್ಯಾಂಟ್ ಗಳನ್ನು ಕಳಚಿ ಬಿಸಾಡಿದ್ದರು. ಮೆಡಿಸಿನ್ ತೆಗೆದುಕೊಳ್ಳಲು ನಿರಾಕರಿಸಿದ್ದರು. ಅಷ್ಟೇ ಅಲ್ಲ ಬೀಡಿ, ಸಿಗರೇಟ್ ಕೊಡುವಂತೆ ಒತ್ತಾಯಿಸಿರುವುದಾಗಿ ಮುಖ್ಯ ಮೆಡಿಕಲ್ ಅಧಿಕಾರಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಜಮಾತ್ ನ ತಬ್ಲಿಘೀ ಸದಸ್ಯರು ಮಹಿಳಾ ಸಿಬ್ಬಂದಿಗಳ ವಿರುದ್ಧ ಅಶ್ಲೀಲವಾಗಿ ಪ್ರತಿಕ್ರಿಯೆ ನೀಡಿ, ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಇವರ ವಿರುದ್ಧ ಮುಖ್ಯ ಮೆಡಿಕಲ್ ಅಧಿಕಾರಿ ದೂರು ನೀಡಿದ್ದಾರೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಅಮಾನವೀಯವಾಗಿ ವರ್ತಿಸಿದ ಇವರ ವಿರುದ್ಧ ಐಪಿಸಿ ಸೆಕ್ಷನ್ 269, 270, 271, 294 ಮತ್ತು 354ರ ಪ್ರಕಾರ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.