Advertisement

ಕೋವಿಡ್-19 ವೀರರು: ಹಂಪಿಯಲ್ಲಿ ಮಿಡಿದ ಹೃದಯಗಳು

11:49 AM Apr 21, 2020 | mahesh |

ಲಾಕ್‌ಡೌನ್‌ ಪರಿಣಾಮ ಹಂಪಿಯಲ್ಲಿ ಪ್ರವಾಸಿಗರೇ ಇಲ್ಲ. ಅವರನ್ನೇ ನಂಬಿಕೊಂಡಿದ್ದ ಪ್ರಾಣಿ- ಪಕ್ಷಿಗಳಿಗೆ ಊಟವೂ ಇಲ್ಲ. ವಿರೂಪಾಕ್ಷ ದೇವಾಲಯ, ಸಾಸಿವೆ ಕಾಳು
ಗಣಪ… ಹೀಗೆ ಎಲ್ಲೇ ಓಡಾಡಿದರೂ, ಊಟ, ನೀರು ಸಿಗುತ್ತಿಲ್ಲ. ರಣ ಬಿಸಿಲು ಬೇರೆ. ವಸ್ತುಸ್ಥಿತಿ ಹೀಗಿರುವಾಗಲೇ, ಸ್ಥಳೀಯ ಯುವ ತಂಡದ ಸದಸ್ಯರೆಲ್ಲಾ ಒಟ್ಟಾಗಿ ರಂಗಕ್ಕೆ
ಇಳಿದಿದ್ದಾರೆ. ಪ್ರಾಣಿ ಪಕ್ಷಿಗಳ ಜೊತೆಗೆ, ಭಿಕ್ಷುಕರಿಗೂ ಊಟ ಹಾಕುವ ಪುಣ್ಯದ ಕೆಲಸ ಮಾಡುತ್ತಿದ್ದಾರೆ.

Advertisement

ಹಂಪಿ, ಕಲಾರಾಧಕರ- ಪ್ರವಾಸಿಗರ ಸ್ವರ್ಗ. ಟೂರಿಸ್ಟ್ ಗಳು ಇಲ್ಲದಿದ್ದರೆ ಹಂಪಿ ಅಕ್ಷರಶಃ ಭಣಭಣ ಅನ್ನುತ್ತೆ. ಈ ಲಾಕ್‌ಡೌನ್‌ನಿಂದ, ಪ್ರವಾಸಿಗರನ್ನು ನೆಚ್ಚಿಕೊಂಡವರ ಬದುಕು ನೆಲಕಚ್ಚಿದೆ. ಈ ಲಾಕ್‌ಡೌನ್‌ ಸೈಡ್‌ ಎಫೆಕ್ಟ್ ಬಿಸಿ, ಇಲ್ಲಿನ ಪ್ರಾಣಿಗಳಿಗೂ ತಟ್ಟಿದೆ!. ಕೋತಿಗಳು, ಮೀನುಗಳು, ನಾಯಿಗಳು, ಬಿಡಾಡಿ ದನಗಳು.. ಹೀಗೆ ನೂರಾರು
ಪ್ರಾಣಿಗಳು ಹಸಿವಿನಿಂದ ಕಂಗೆಟ್ಟಿವೆ. ಇಡೀ ಹಂಪಿಯನ್ನು ಪ್ರದಕ್ಷಿಣೆ ಹಾಕಿದರೂ ಆಹಾರ ಸಿಗುತ್ತಿಲ್ಲ. ಇವುಗಳೆಲ್ಲ ಇಷ್ಟು ದಿನ ಆಹಾರಕ್ಕಾಗಿ ಪ್ರವಾಸಿಗರನ್ನೇ ಅವಲಂಬಿಸಿದ್ದವು. ಅವರು ನೀಡುವ ಬ್ರೆಡ್‌, ಬಾಳೆಹಣ್ಣು, ಮಂಡಕ್ಕಿ, ಬಿಸ್ಕತ್ತು ತಿಂದು ನಿಶ್ಚಿಂತೆಯಿಂದ ಜೀವಿಸಿದ್ದವು. ಆದರೆ ಈಗ..? ಆಹಾರವಿಲ್ಲದೆ ಕಂಗೆಟ್ಟಿವೆ. ಇದನ್ನು ಕಂಡು, ಮರುಗಿದ ಕಮಲಾಪುರದ ಯುವಕರ ತಂಡ, (ಇವರು ಯುವ ಬ್ರಿಗೇಡ್‌ನ‌ ಸದಸ್ಯರು ಕೂಡ.) ಹಿಂಡಿ ಕಾಳು, ಬಾಳೆಹಣ್ಣು… ಹೊಟ್ಟೆ ತುಂಬಾ ಹಣ್ಣು- ಹಂಪಲು, ಆಹಾರ ಧಾನ್ಯಗಳನ್ನು ಪ್ರಾಣಿಗಳಿಗೆ ಪೂರೈಸುವ ಕೆಲಸ ಮಾಡುತ್ತಿದೆ. ಇವರ  ಪ್ರಯತ್ನವನ್ನು ನೋಡಿ, ಒಂದಷ್ಟು ಮಂದಿ ದಾನಿಗಳು ತಾವೂ ಕೈ ಜೋಡಿಸಿದ್ದಾರೆ. “ಇವುಗಳು ಆಹಾರ ಸಿಗದೇ ಅಲೆಯುತ್ತಿದ್ದುದನ್ನು ನೋಡಿ, ಕರುಳು ಚುರ್ರ ಅಂದಿತು. ಕೂಡಲೇ ಸ್ನೇಹಿತರನ್ನು ಸಂಪರ್ಕಿಸಿ, ಆಹಾರ ಸೇವೆಗೈಯುವ ಇಂಗಿತ ವ್ಯಕ್ತಪಡಿಸಿದೆ. ಓಕೆ ಅಂದ್ರು. ಫೇಸ್‌ಬುಕ್‌ನಲ್ಲಿ ಪ್ರಾಣಿಗಳ ದಯನೀಯ ಸ್ಥಿತಿಯನ್ನು ಫೋಟೊ ಸಮೇತ ಪೋಸ್ಟ್‌ ಮಾಡಿ, ಇಚ್ಛೆ ಉಳ್ಳವರು ಸಹಾಯ ಹಸ್ತ ಚಾಚಿ ಎಂದೆ.

ಅಭೂತಪೂರ್ವ ಸ್ಪಂದನೆ ಸಿಕ್ಕಿತು’ ಎನ್ನುತ್ತಾರೆ ತಂಡದ ರಾಚಯ್ಯ ಎಸ್‌. ತಾವರಿಮಠ ಈ ಯುವ ಬ್ರಿಗೇಡ್‌ನ‌ಲ್ಲಿ ಒಟ್ಟು 12 ಮಂದಿ ಇದ್ದಾರೆ. ಒಬ್ಬೊಬ್ಬರು ಒಂದೊಂದು ಕೆಲಸ ಹಂಚಿಕೊಂಡು, ತಮ್ಮ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ನಸುಕಿನ ಜಾವದಿಂದ ಅರಂಭವಾಗುವ ಇವರ ಸೇವೆಯ ಅಂತ್ಯ ಸೂರ್ಯಾಸ್ತದೊಂದಿಗೆ!

ಬೆಳ್ಳಂಬೆಳಗ್ಗೆ ಒಂದಿಬ್ಬರು ಯುವಕರು ತುರ್ತು ಕಾಲುವೆ, ಬಸವಣ್ಣ ಕಾಲುವೆ ಆಸುಪಾಸಿನಲ್ಲಿ ಹೋಗಿ, ಮೂರು ನಾಲ್ಕು ಹೊರೆಯಷ್ಟು ಹಸಿ ಹುಲ್ಲನ್ನು ಕೊಯ್ದು ತರುತ್ತಾರೆ. ಇದನ್ನು
ಸಾಸಿವೆ ಕಾಳು ಗಣೇಶನ ಮುಂಭಾಗದಲ್ಲಿ ನಿಂತಿರುವ ಬಿಡಾಡಿ ದನಗಳಿಗೆ ಹಾಕುತ್ತಾರೆ. ನಿತ್ಯವೂ ಬೆಳಗ್ಗೆ ಮತ್ತು ಸಂಜೆ ವಿರೂಪಾಕ್ಷ ದೇವರ ಮುಖ್ಯ ದೇಗುಲ, ಕೊದಂಡರಾಮ
ಗುಡಿ, ಹೇಮಕೂಟ.. ಇತರೆಡೆಯಲ್ಲಿರುವ ಹಿಂಡುಹಿಂಡು ಕಪಿ ಸೈನ್ಯಕ್ಕೆ 30-40 ಕೆ.ಜಿ.ಯಷ್ಟು ಕರಬೂಜ, ಕಲ್ಲಂಗಡಿ ಹಣ್ಣು ಹಾಕುತ್ತಾರೆ. ಹಂಪಿಯ ಸುತ್ತಮುತ್ತ ಇರುವ ತೋಟಗಳಲ್ಲಿ ಬಾಳೆಹಣ್ಣು ತಿಂದು ಬರುವ ಕೋತಿಗಳು, ಮತ್ತೆ ಅದನ್ನೇ ಕೊಟ್ಟರೆ, ತಿನ್ನುವುದಿಲ್ಲವಂತೆ. ಹಾಗಾಗಿ ಅವುಗಳಿಗೆ ಕರಬೂಜ ಮತ್ತು ಕಲ್ಲಂಗಡಿ ಹಣ್ಣು ಕೊಡ್ತೇವೆ ಅಂತಾರೆ ಕಡ್ಡಿರಾಂಪುರದ
ರಾಮು.

ಇದೇ ರೀತಿ, ಮನ್ಮಥ ಹೊಂಡದಲ್ಲಿರುವ ಸಾವಿರಾರು ಮೀನುಗಳಿಗೆ ಆಹಾರವೆಂದು ದಿನಕ್ಕೆ 20 ಲೀಟರ್‌ನಷ್ಟು ಮಂಡಕ್ಕಿ ಹಾಕಲಾಗುತ್ತಿದೆ. ಹಂಪಿಯ ವಿರೂಪಾಕ್ಷ
ದೇಗುಲದಲ್ಲಿ 200-300 ಪಾರಿವಾಳಗಳಿವೆ. ಅವಕ್ಕೆ ಅಕ್ಕಿ, ಗೋಧಿಯ ವ್ಯವಸ್ಥೆ ಮಾಡುತ್ತಿದ್ದಾರೆ. ಬಿಡಾಡಿ ದನಗಳು, ಕೋತಿಗಳಿಗೆ ಅಲ್ಲಲ್ಲಿ ಕೃತಕವಾಗಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಇಷ್ಟಾಗುತ್ತಿದ್ದಂತೆಯೇ ಈ ತಂಡಕ್ಕೆ ಎದುರಾಗಿದ್ದು ಭಿಕ್ಷುಕರು. ಅವರು ಕೂಡ ಪ್ರಾಣಿಗಳಂತೆ ತುತ್ತು ಅನ್ನಕ್ಕೆ ಪರಿತಪಿಸುತ್ತಿದ್ದರು. ಹೀಗಾಗಿ, ದಿನಂಪ್ರತಿ 18 ಜನ ಭಿಕ್ಷುಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿರುವವರು ತಂಡದ ರಾಚಯ್ಯ. ಅವರು ತಮ್ಮ ಮನೆಯಲ್ಲೇ ಅಡುಗೆ ಮಾಡಿಸುತ್ತಿದ್ದಾರೆ. ಇದಕ್ಕಾಗಿ, ದಿನಕ್ಕೆ ನಾಲ್ಕೈದು ಕೆ.ಜಿ. ಅಕ್ಕಿ, ಎಣ್ಣೆ ಖರ್ಚಾಗುತ್ತಿದೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ, ದಾನದ ರೂಪದಲ್ಲಿ ಬಂದ ಹಣವನ್ನು ಬಳಸಿಕೊಂಡು, ಸಾಲದಿದ್ದರೆ ಕೈಯಿಂದ ಹಣ ಹಾಕಿ, ಭಿಕ್ಷುಕರ ಹೊಟ್ಟೆ ತುಂಬಿಸುತ್ತಿದ್ದಾರೆ. ಪ್ರತಿದಿನ ಕನಿಷ್ಠ 1200ರೂ. ಈ ಪ್ರಾಣಿಗಳ ಆಹಾರಕ್ಕೆ ಬೇಕು. ಸಾಮಾಜಿಕ ಜಾಲತಾಣದಲ್ಲಿ ಪ್ರಕಟ ಮಾಡಿದ್ದರಿಂದ ದಾನಿಗಳು ಹಣ ಕೊಟ್ಟಿದ್ದರು. ಹೀಗೆ, ಸಂಗ್ರಹವಾಗಿದ್ದ 17 ಸಾವಿರ ರೂ.ನಲ್ಲಿ 15 ಸಾವಿರ ಖಾಲಿಯಾಗಿದೆ. ಹಾಗಂತ ನಿಲ್ಲಿಸೋದಿಲ್ಲ. ಏನಾದರೂ ಮಾಡಿ, ಲಾಕ್‌ ಡೌನ್‌ ಮುಗಿಯುವ ತನಕ ಇವುಗಳ ಊಟ ಒದಗಿಸುವ ಜವಾಬ್ದಾರಿಯನ್ನು ಯುವ ತಂಡ ಹೊತ್ತಿಕೊಂಡಿದೆ.

Advertisement

“ನಾವು ಬರುವ ಸಮಯಕ್ಕೆ ಸರಿಯಾಗಿ ಪ್ರಾಣಿಗಳು ನಿಗದಿತ ಸ್ಥಳಗಳಲ್ಲಿ ಜಮಾವಣೆ ಆಗಿ, ನಮ್ಮ ದಾರಿ ಎದುರು ನೋಡುತ್ತಿರುತ್ತವೆ. ಆಹಾರವನ್ನು ಒಂಚೂರೂ ಬಿಡದೇ ತಿನ್ನುತ್ತವೆ. ಅವುಗಳೊಂದಿಗೆ ಭಾವನಾತ್ಮಕ ಸಂಬಂಧ ಬೆಸೆದುಬಿಟ್ಟಿದೆ. ಅವುಗಳು ತೋರಿಸುವ ಪ್ರೀತಿಗೆ ಮೂಕರಾಗಿದ್ದೇವೆ..’ ಎನ್ನುತ್ತಾರೆ ಸಂಗಮೇಶ್‌, ವಿರುಪಾಕ್ಷಿ ಮತ್ತು ಪ್ರಮೋದ.

ನಾವು ಬರುವ ಸಮಯಕ್ಕೆ ಸರಿಯಾಗಿ ಪ್ರಾಣಿಗಳು ಜಮಾವಣೆ ಆಗಿ, ನಮ್ಮ ದಾರಿಯನ್ನೇ ಎದುರು ನೋಡುತ್ತಿರುತ್ತವೆ. ಹೀಗಾಗಿ, ಅವುಗಳೊಂದಿಗೆ ಭಾವನಾತ್ಮಕ ಸಂಬಂಧ ಬೆಳೆದುಬಿಟ್ಟಿದೆ.
 ರಾಚಯ್ಯ ಎಸ್‌. ತಾವರಿಮಠ

Advertisement

Udayavani is now on Telegram. Click here to join our channel and stay updated with the latest news.

Next