Advertisement

ಕೋವಿಡ್ 19 ವೈರಸ್ ನಿಯಂತ್ರಣ : ಹೊಕ್ಕೈಡೊ ಕಲಿಸುವ ಪಾಠಗಳು

09:15 AM Apr 19, 2020 | Hari Prasad |

ವೈರಾಣು ಹೊರಗಿನಿಂದ ಬಂದಿಲ್ಲ. ಹಾಗಾದರೆ ಹೊಸದಾಗಿ ಸೋಂಕು ಹೇಗೆ ಹರಡುತ್ತಿದೆ? ಈ ಪ್ರಶ್ನೆಗೆ ಸಿಗುವ ಉತ್ತರದಲ್ಲಿ ಜಗತ್ತಿನಾದ್ಯಂತ ಜಾರಿಯಲ್ಲಿರುವ ಲಾಕ್‌ ಡೌನ್‌ನ ಯಶಸ್ಸು ಅಥವಾ ವೈಫ‌ಲ್ಯದ ಉತ್ತರವೂ ಇದೆ.

Advertisement

ಟೋಕಿಯೊ: ಜಪಾನ್‌ನ ಹೊಕ್ಕೈಡೊ ಪ್ರಾಂತ ಕೋವಿಡ್‌ ಸೋಂಕು ಹರಡುವುದನ್ನು ತಡೆಗಟ್ಟಿದ ರೀತಿ ಇಡೀ ಜಪಾನ್‌ಗೆ ಒಂದು ಮಾದರಿಯಂತಿತ್ತು. ಸೋಂಕಿತರನ್ನು ಹುಡುಕಿ ಕ್ವಾರಂಟೈನ್‌ನಲ್ಲಿಟ್ಟ ಪರಿಣಾಮವಾಗಿ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಯಿತು. ಇಡೀ ಜಪಾನ್‌ ಹೊಕ್ಕೈಡೊ ಆಡಳಿತದ ಸಾಧನೆಯನ್ನು ಪ್ರಶಂಸಿತು. ಇದು ಮಾರ್ಚ್‌ ಮೊದಲಾರ್ಧದ ಕತೆ.

ಇದೀಗ ಹೊಕ್ಕೈಡೊದಲ್ಲಿ ಎರಡನೇ ಸುತ್ತಿನ ಕೋವಿಡ್‌ ಹಾವಳಿ ಶುರುವಾಗಿದೆ ಮತ್ತು ಇದು ಮೊದಲ ಸುತ್ತಿಗಿಂತ ತೀವ್ರವಾಗಿದೆ. ಒಂದು ಸಲ ಸೋಂಕು ಹರಡುವಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿದ ಪ್ರಾಂತದಲ್ಲಿ ಮತ್ತೆ ಸೋಂಕು ಉಲ್ಬಣಿಸಿರುವುದು ಜಪಾನ್‌ಗೆ ಮಾತ್ರವಲ್ಲ; ಇಡೀ ಜಗತ್ತಿಗೆ ಒಂದು ಪಾಠ ಕಲಿಸುತ್ತದೆ.

ಹೊಕ್ಕೈಡೊ ಜಪಾನ್‌ನಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ ಮೊದಲ ಪ್ರಾಂತವಾಗಿತ್ತು. ಫೆಬ್ರವರಿ ಕೊನೆಯಲ್ಲೇ ಇಲ್ಲಿ ಕರ್ಫ್ಯೂ ಜಾರಿಯಲ್ಲಿತ್ತು. ಶಾಲೆಗಳನ್ನು ಮುಚ್ಚಲಾಗಿತ್ತು. ಸಭೆ ಸಮಾರಂಭಗಳನ್ನು ರದ್ದುಪಡಿಸಲಾಗಿತ್ತು ಮತ್ತು ಜನರಿಗೆ ಮನೆಯಲ್ಲೇ ಇರುವಂತೆ ವಿನಂತಿಸಲಾಗಿತ್ತು. ಸ್ಥಳೀಯಾಡಳಿತ ವೈರಾಣು ವಿರುದ್ಧ ಸಶಕ್ತವಾದ ಹೋರಾಟವನ್ನೇ ನಡೆಸಿತು.

ಈ ಕ್ರಮ ನಿರೀಕ್ಷೆಗೂ ಮೀರಿದ ಫ‌ಲಿತಾಂಶವನ್ನು ನೀಡಿತು.ದಿನಕ್ಕೆ ಒಂದೆರಡು ಸೋಂಕಿನ ಪ್ರಕರಣವಷ್ಟೇ ವರದಿಯಾಯಿತು. ಹೀಗಾಗಿ ಮಾ.19ರಂದು ತುರ್ತು ಪರಿಸ್ಥಿತಿಯನ್ನು ಹಿಂದೆಗೆದುಕೊಳ್ಳಲಾಯಿತು ಮತ್ತು ಎಪ್ರಿಲ್‌ ಮೊದಲ ವಾರದಲ್ಲಿ ಶಾಲೆಗಳನ್ನು ತೆರೆಯಲಾಯಿತು. ಇದರೊಂದಿಗೆ ಹೊಕ್ಕೈಡೊದಲ್ಲಿ ಸಮಸ್ಯೆಗಳು ಮರಳಿ ಪ್ರಾರಂಭವಾದವು. ಈಗ ಅಲ್ಲಿ 135 ದೃಢಪಟ್ಟ ಕೋವಿಡ್‌ ಪ್ರಕರಣಗಳಿವೆ.

Advertisement

ವೈರಾಣು ಹೊರಗಿನಿಂದ ಬಂದಿಲ್ಲ. ಹಾಗಾದರೆ ಹೊಸದಾಗಿ ಸೋಂಕು ಹೇಗೆ ಹರಡುತ್ತಿದೆ? ಈ ಪ್ರಶ್ನೆಗೆ ಸಿಗುವ ಉತ್ತರದಲ್ಲಿ ಜಗತ್ತಿನಾದ್ಯಂತ ಜಾರಿಯಲ್ಲಿರುವ ಲಾಕ್‌ ಡೌನ್‌ನ ಯಶಸ್ಸು ಅಥವಾ ವೈಫ‌ಲ್ಯದ ಉತ್ತರವೂ ಇದೆ.

ಹೊಸದಾಗಿ ದೃಢಪಟ್ಟ ಸೋಂಕಿನ ಪ್ರಕರಣಗಳಲ್ಲಿ ಯಾರೂ ಹೊರಗಿನಿಂದ ಬಂದವರಲ್ಲ ಮತ್ತು ಹೊರಗೆ ಪ್ರಯಾಣಿಸಿದವರೂ ಅಲ್ಲ. ಹೀಗಾಗಿ ಹೊಸ ಪ್ರಕರಣಗಳು ಹೇಗೆ ಬಂದವು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.

ಕ್ಲಸ್ಟರ್‌ಗಳಾಗಿ ವಿಂಗಡಿಸಿ ಕೋವಿಡ್‌ ನಿಯಂತ್ರಿಸಬಹುದು ಎಂದು ತೋರಿಸಿಕೊಟ್ಟದ್ದೇ ಹೊಕ್ಕೈಡೊ. ಅನಂತರ ಹಲವು ದೇಶಗಳು ಈ ಮಾದರಿಯನ್ನು ಅನುಸರಿಸಿವೆ. ಸ್ಥಳೀಯವಾಗಿ ವೈರಸ್‌ ಪ್ರಸರಣವನ್ನು ತಡೆಯುವುದು ಸುಲಭ ಎನ್ನುವುದೂ ಹೊಕ್ಕೈಡೊದಲ್ಲಿ ಸಾಬೀತಾಗಿತ್ತು.

ಆದರೆ ಇಲ್ಲಿ ಎರಡನೇ ಸುತ್ತಿನ ವೈರಾಣು ಸೋಂಕು ಕಾಣಿಸಿಕೊಂಡಿರುವುದು ಭೀತಿಗೆ ಕಾರಣವಾಗಿದೆ. ಕೋವಿಡ್‌ ನಾವು ಎಣಿಸಿದಷ್ಟು ಸುಲಭವಾಗಿ ನಿಯಂತ್ರಣಕ್ಕೆ ಬರುವುದಿಲ್ಲ ಎಂಬ ಪಾಠ ಇಲ್ಲಿ ಸಿಗುತ್ತದೆ.

ದಕ್ಷಿಣ ಕೊರಿಯದ ಕೂಡ ಹೊಕ್ಕೈಡೊ ಮಾದರಿಯಲ್ಲಿ ವೈರಸ್‌ ನಿಯಂತ್ರಿಸಿತ್ತು. ಆದರೆ ಅಲ್ಲಿ ಒಮ್ಮೆ ನಿಯಂತ್ರಣ ಸಾಧಿಸಿದ ಬಳಿಕ ಸಾಮೂಹಿಕ ಪರೀಕ್ಷೆ ನಡೆಸಲಾಗಿತ್ತು. ಆದರೆ ಜಪಾನ್‌ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿತು. ವೈರಸ್‌ ಕಾಣಿಸಿಕೊಂಡು ಮೂರು ತಿಂಗಳಾಗಿದ್ದರೂ ಈಗಲೂ ಜಪಾನ್‌ನಲ್ಲಿ ನಿತ್ಯ ಕೆಲವೇ ಪರೀಕ್ಷೆಗಳನ್ನಷ್ಟೇ ನಡೆಸಲಾಗುತ್ತಿದೆ.

ವ್ಯಾಪಕವಾಗಿ ಪರೀಕ್ಷೆಗಳನ್ನು ನಡೆಸುವುದು ಸಂಪನ್ಮೂಲಗಳನ್ನು ವ್ಯರ್ಥಗೊಳಿಸಿದಂತೆ ಎಂದು ಆರಂಭದಲ್ಲಿ ಜಪಾನ್‌ ಸರಕಾರ ಪ್ರತಿಪಾದಿಸುತ್ತಿತ್ತು. ಹೊಕ್ಕೈಡೊ ಸ್ಥಿತಿಯನ್ನು ನೋಡಿದ ಬಳಿಕ ಅದರ ಧೋರಣೆ ಬದಲಾಗಿದೆ.

ಪರೀಕ್ಷೆ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ತನಕ ವೈರಸ್‌ ಸಾಮುದಾಯಿಕವಾಗಿ ಹರಡುವುದನ್ನು ತಡೆಯಲು ಸಾಧ್ಯವಾಗದು ಎಂಬ ಮುಖ್ಯವಾದ ಪಾಠವನ್ನು ಹೊಕ್ಕೈಡೊ ಕಲಿಸಿದೆ.ಇದೀಗ ಹೊಕ್ಕೈಡೊ ಮತ್ತೂಮ್ಮೆ ತುರ್ತು ಪರಿಸ್ಥಿತಿ ಜಾರಿಗೊಳಿಸಲು ತಯಾರಾಗುತ್ತಿದೆ.
ಜಪಾನ್‌ನಲ್ಲಿ ತುರ್ತು ಪರಿಸ್ಥಿತಿ ಇದ್ದರೂ ಅದು ಅಷ್ಟೇನೂ ಕಟ್ಟುನಿಟ್ಟಾಗಿಲ್ಲ. ಹೆಚ್ಚಿನ ಜನರು ನಿತ್ಯ ಕಾಯಕಗಳಿಗೆ ಹೋಗುತ್ತಿದ್ದಾರೆ. ಶಾಲೆಗಳು ಮತ್ತು ಅಂಗಡಿಗಳು ತೆರೆದಿವೆ. ಇಡೀ ಜಗತ್ತೇ ಕೋವಿಡ್‌ನಿಂದ ತತ್ತರಿಸುತ್ತಿದ್ದರೂ ಜಪಾನ್‌ ಇನ್ನೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದೇ ವಿಚಿತ್ರ ಸಂಗತಿ.

– ಉಮೇಶ್‌ ಕೋಟ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next