Advertisement

ಕಲಬುರಗಿಗೆ ‘ಬಟ್ಟೆ ವ್ಯಾಪಾರಿ’ಕಂಟಕ: ಒಬ್ಬನಿಂದಲೇ 28 ಜನರಿಗೆ ಸೋಂಕು

08:25 AM May 04, 2020 | keerthan |

ಕಲಬುರಗಿ: ಕೋವಿಡ್-19 ಸೋಂಕಿನ ಹಾಟ್ ಸ್ಪಾಟ್ ಆಗಿರುವ ಕಲಬುರಗಿಗೆ ಮಹಾಮಾರಿ‌ ಸೋಂಕಿನಿಂದಲೇ ಮೃತಪಟ್ಟ 55 ವರ್ಷದ ಬಟ್ಟೆ ವ್ಯಾಪಾರಿ ಕಂಟಕವಾಗಿ ಪರಿಣಮಿಸಿದ್ದು, ಇದುವರೆಗೂ ಈತನೊಬ್ಬನ ಸಂಪರ್ಕದಿಂದ ಒಟ್ಟು 28 ಜನ ಸೋಂಕಿಗೆ ಈಡಾಗುವಂತೆ ಆಗಿದೆ

Advertisement

ಬಟ್ಟೆ ವ್ಯಾಪಾರಿ (ಪಿ-205) ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಈತನ ಪ್ರಥಮ ಸಂಪರ್ಕಿತರು ಮತ್ತು ದ್ವಿತೀಯ ಸಂಪರ್ಕಿತರಿಗೆ ಸೋಂಕು ಪತ್ತೆಯಾಗುತ್ತಲೇ ಇದೆ.‌ ಈ ಸೋಂಕಿತರ ಸಂಪರ್ಕಕ್ಕೆ ಬಂದವರಿಗೂ ಹೆಮ್ಮಾರಿ ಸೋಂಕು ಕಾಣಿಸಿಕೊಳ್ಳುತ್ತಿದೆ. ರವಿವಾರ ಕೂಡ ಈತನ ಸೋಂಕು ಮತ್ತಿಬ್ಬರಿಗೆ ಹರಡಿರುವುದು ಖಚಿತವಾಗಿದೆ.

ರವಿವಾರ ಜಿಲ್ಲೆಯ ಮೂವರಿಗೆ ಸೋಂಕು ದೃಢವಾಗಿದ್ದು, ಇದರಲ್ಲಿ 13 ವರ್ಷದ ಬಾಲಕಿ (ಪಿ-602) ಮತ್ತು 54 ವರ್ಷದ ವ್ಯಕ್ತಿ (ಪಿ-603) ಗೆ ಸೋಂಕು ದೃಢಪಟ್ಟಿದೆ. ಇವರು ಬಟ್ಟೆ ವ್ಯಾಪಾರಿ ಸೋಂಕಿನ ‘ಚೈನ್’ ಗೆ ಒಳಪಟ್ಟಿದ್ದಾರೆ.

ಮತ್ತೊಬ್ಬ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 41 ವರ್ಷದ ವ್ಯಕ್ತಿ (ಪಿ-604) ಗೂ ಸೋಂಕು ಪತ್ತೆಯಾಗಿದ್ದು, ಇತನ ಟ್ರಾವೆಲ್ ಹಿಸ್ಟರಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.

ಭಯ ಹುಟ್ಟಿಸುವ ‘ಚೈನ್’: ಜಿಲ್ಲೆಯಲ್ಲಿ ದೆಹಲಿ ಮಸೀದಿಗೆ ಹೋದವರ್ಯಾರಿಗೂ ಕೋವಿಡ್ ಸೋಂಕು ದೃಢಪಟ್ಟಿಲ್ಲ. ಆದರೆ, ದೆಹಲಿಗೆ ಹೋದವರ ಸಂಪರ್ಕಕ್ಕೆ ಬಂದಿದ್ದ ಬಟ್ಟೆ ವ್ಯಾಪಾರಿ ತಾನೇ ಸ್ವತಃ ಹೋಗಿ ತಪಾಸಣೆಗೊಳಗಾಗಿದ್ದ. ಆಗ ದೆಹಲಿಗೆ ಹೋದವರ ಸಂಪರ್ಕದಿಂದ ಕೋವಿಡ್‌ -19 ಸೋಂಕು ಹರಡಿರುವುದು ಪತ್ತೆಯಾಗಿತ್ತು. ಕೊನೆಗೆ ಏ.13ರಂದು ಚಿಕಿತ್ಸೆ ‌ಫಲಕಾರಿಯಾಗದೆ ಬಟ್ಟೆ ವ್ಯಾಪಾರಿ ಅಸುನೀಗಿದ್ದ.

Advertisement

ಆದರೆ, ಈತನ ಸೋಂಕಿನ‌ ನಂಜಿಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಒಬ್ಬರಿಂದ‌ ಇನ್ನೊಬ್ಬರಿಗೆ, ಮತ್ತೊಬ್ಬರಿಗೆ ಸೋಂಕು ಹರಡುತ್ತಲೇ ಇದೆ.  ರವಿವಾರ ಇಬ್ಬರಿಗೆ ಹರಡಿರುವ ಸೋಂಕಿನ ಚೈನ್ ನಾಲ್ಕು ಜನರಿಂದ ಕೂಡಿದೆ.

ಬಟ್ಟೆ ವ್ಯಾಪಾರಿ (ಪಿ-205) ಸಂಪರ್ಕಕ್ಕೆ ಬಂದಿದ್ದ 19 ವರ್ಷದ ಯುವಕ (ಪಿ-395) ನಿಗೆ ಸೋಂಕು ಹರಡಿತ್ತು. ಈ ಯುವಕನಿಂದ 26 ವರ್ಷದ ಮಹಿಳೆ (ಪಿ-425) ಯಲ್ಲಿ ಸೋಂಕು ಪತ್ತೆಯಾಗಿತ್ತು. ಈಕೆಯಿಂದ 12 ವರ್ಷದ ಬಾಲಕಿ (ಪಿ-532) ಗೆ ಕಾಣಿಸಿಕೊಂಡಿತ್ತು. ಈಗ ಈ ಬಾಲಕಿಯಿಂದ ಮತ್ತೊಬ್ಬ ಬಾಲಕಿ (ಪಿ-602) ಹಾಗೂ 54 ವರ್ಷದ ವ್ಯಕ್ತಿ (ಪಿ-603) ಗೆ ಕೋವಿಡ್ ಸೋಂಕು ವ್ಯಾಪಿಸಿದೆ.

ಇನ್ನು, ಜಿಲ್ಲೆಯಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ.‌ ಇದರಲ್ಲಿ 18 ಜನ ರೋಗಿಗಳು ಸೋಂಕಿನಿಂದ ಗುಣಮುಖರಾಗಿದ್ದಾರೆ.‌ ಉಳಿದಂತೆ ಐವರು ಸೋಂಕಿಗೆ ಬಲಿಯಾಗಿದ್ದಾರೆ. ಉಳಿದ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌

Advertisement

Udayavani is now on Telegram. Click here to join our channel and stay updated with the latest news.

Next