ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ವೈರಸ್ ಸೋಂಕು ನಿಯಂತ್ರಣ ಹಾಗೂ ಅದರಿಂದಾಗುವ ಪ್ರತಿಕೂಲ ಪರಿಸ್ಥಿತಿ ನಿವಾರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ಕೋವಿಡ್ 19 ಪರಿಸ್ಥಿತಿ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸಂಜೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಕೋವಿಡ್ 19 ಸೋಂಕು ಮಹಾಮಾರಿಯಾಗಿ ಕಾಡುತ್ತಿದೆ. ಇದನ್ನು ಎಲ್ಲರೂ ಒಟ್ಟಾಗಿ ಎದುರಿಸಬೇಕು. ಈಗಾಗಲೇ ಇದರಿಂದ ಸಾಕಷ್ಟು ನಷ್ಟವಾಗಿದೆ ಮುಂದಿನ ದಿನಗಳಲ್ಲಿ ಇದನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಇದೇ ಬಜೆಟ್‌ನಲ್ಲಿ ಈ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ತಿಳಿಸಿದರು.
ಸರ್ಕಾರ ಸಾಮಾನ್ಯ ಜನರ ಪರವಾಗಿ ನಿಲ್ಲಬೇಕಿದೆ. ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲವಾಗಿದೆ. ರೇಷ್ಮೆ ಬೆಲೆ ಕುಸಿದಿದೆ. 600 ಇದ್ದ ಬೆಲೆ 200ಕ್ಕೆ ಕುಸಿದಿದೆ. ಇದೇ ರೀತಿ ತರಕಾರಿ ಸೇರಿದಂತೆ ಎಲ್ಲ ಬೆಳೆಯ ಬೆಲೆ ಕುಸಿದಿದೆ.
ಕುಕ್ಕೂಟೋದ್ಯಮ, ಹೈನೊದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ರಸ್ತೆ ವ್ಯಾಪಾರಿಗಳಿಂದ ದೊಡ್ಡ ಉದ್ದಿಮೆವರೆಗೂ ಪ್ರತಿಯೋಬ್ಬರಿಗೂ ಪೆಟ್ಟು ಬಿದ್ದಿದೆ. ಸಾಮಾನ್ಯ ಜನರು, ಕಾರ್ಮಿಕರು ಹಾಗೂ ಅವರಿಗೆ ಉದ್ಯೋಗ ನೀಡಿರುವ ಉದ್ದಿಮೆದಾರರು ಎಲ್ಲರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ವಿನಮ್ರ ಮನವಿ ಮಾಡುತ್ತೇನೆ ಎಂದರು.
“ನನಗೆ ಅಭಿನಂದನೆ ಸಲ್ಲಿಸೋಕೆ ಅಂತಾ ಬೆಂಬಲಿಗರು, ಕಾರ್ಯಕರ್ತರು ಬರುತ್ತಿದ್ದಾರೆ.ಅದರಿಂದ ನನ್ನ ಮೇಲೂ ಒತ್ತಡ ಬೀಳುತ್ತಿದೆ. ಕಾರ್ಯಕರ್ತರು ಮುಂದಿನ ಒಂದು ವಾರಗಳ ಕಾಲ ಬರುವುದು ಬೇಡ ಎಂದು ಮನವಿ ಮಾಡಿಕೊಳ್ಳುತ್ತೇನೆ. ನೀವು ನಿಮ್ಮ ಸ್ಥಳಗಳಲ್ಲಿಯೇ ಇದ್ದರೆ ಉತ್ತಮ. ಆಗ ಮಾತ್ರ ಸೋಂಕು ತಡೆಯಲು ಸಾಧ್ಯ. ಈ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ನಾನು ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದರು.