Advertisement

ಕೋವಿಡ್‌-19 ಲಸಿಕೆ ತಪ್ಪು ತಿಳುವಳಿಕೆಗಳು ಹಾಗೂ  ವೈಜ್ಞಾನಿಕ  ಉತ್ತರಗಳು

01:10 PM Jul 25, 2021 | Team Udayavani |

ಭಾರತದಲ್ಲಿ ಸದ್ಯ ಕೋವಿಡ್‌-19ರ ಎರಡನೇ ಅಲೆಯು ಇಳಿಮುಖವಾಗುತ್ತಿದೆ. ಅದರ ಜತೆಗೆ ದೇಶದ ಜನರಿಗೆ ಲಸಿಕೆ ನೀಡುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಎರಡನೇ ಅಲೆ ಕಡಿಮೆಯಾಗುವುದರಲ್ಲಿ ದೇಶಾದ್ಯಂತ ನಡೆಯುತ್ತಿರುವ ಲಸಿಕಾಕರಣದ ಪಾತ್ರ ಮುಖ್ಯವಾಗಿದೆ. ವಿಶ್ವದ ಎಲ್ಲ ಲಸಿಕೆಗಳು ಕೋವಿಡ್‌ ರೋಗವನ್ನು ತಡೆಯುತ್ತವೆ. ಭಾರತದಲ್ಲಿ ಲಭ್ಯವಿರುವ ಲಸಿಕೆಗಳು ಕೂಡ ಕೊರೊನಾ ವೈರಸ್‌ ಹರಡುವಿಕೆಯನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿವೆ. ಶೇ. 60-ಶೇ. 70 ಜನರು ಎರಡೂ ಡೋಸ್‌ ಲಸಿಕೆ ಪಡೆದರೆ, ವೈರಸ್‌ ಹರಡುವಿಕೆಯನ್ನು ತಡೆಯಬಹುದು. ಲಸಿಕೆಯ ಅನಂತರ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಲಸಿಕೆ ಪಡೆದ ಜನರು ಕೋವಿಡ್‌ಗೆ ಸೋಂಕಿಗೆ ಒಳಗಾದರೂ ರೋಗದ ತೀವ್ರತೆ ಕಡಿಮೆಯಿರುತ್ತದೆ.

Advertisement

ಕೋವಿಡ್‌-19 ಸಾಮಾನ್ಯ ಜ್ವರ. ಅದಕ್ಕೆ ಲಸಿಕೆಯ ಅಗತ್ಯವಿಲ್ಲ

ಬಹಳಷ್ಟು ಜನರು ಕೋವಿಡ್‌ಅನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಅದನ್ನು ಸಾಮಾನ್ಯ ಜ್ವರವೆಂದು ತಿಳಿಯುತ್ತಾರೆ. ಅನೇಕ ಸಂದರ್ಭಗಳಲ್ಲಿ ಕೋವಿಡ್‌ನ‌ ತೀವ್ರತೆ ಕಡಿಮೆಯಾಗಿರಬಹುದು. ಆದರೆ ಅದು ತೀವ್ರ ಸ್ವರೂಪಕ್ಕೆ ಬಂದಾಗ, ಆರೋಗ್ಯ ಸಮಸ್ಯೆಗಳೊಂದಿಗೆ ಜೀವ ಹಾನಿಗೂ ಕಾರಣವಾಗಬಹುದು. ಆದ್ದರಿಂದ ಕೋವಿಡ್‌ ಲಸಿಕೆಗಳನ್ನು ತಪ್ಪದೇ ಹಾಕಿಸಿಕೊಳ್ಳಬೇಕು.

ಕೋವಿಡ್ಲಸಿಕೆಯಿಂದಾಗಿ ತೀವ್ರ ಅಡ್ಡಪರಿಣಾಮ ಉಂಟಾಗುತ್ತದೆ.

ಯಾವುದೇ ರಿತಿಯ ಲಸಿಕೆಯನ್ನು ಪಡೆದ ಬಳಿಕ ಜ್ವರ, ಆಯಾಸ, ಚುಚ್ಚುಮದ್ದಿನ ಸ್ಥಳದಲ್ಲಿ ನೋವು -ಹೀಗೆ ಸ್ವಲ್ಪ ಮಟ್ಟಿನ ಅಡ್ಡ ಪರಿಣಾಮ ಕಂಡುಬರುತ್ತದೆ. ಕೋವಿಡ್‌ ಲಸಿಕೆ ಪಡೆದ ಬಳಿಕವೂ ಜ್ವರ, ಆಯಾಸ, ವಾಂತಿ, ಭೇದಿ, ತಲೆನೋವಿನಂತಹ ಅಡ್ಡಪರಿಣಾಮಗಳು ಒಂದೆರಡು ದಿನ ಇರುತ್ತವೆ. ಕೆಲವರಲ್ಲಿ ಲಸಿಕೆ ಪಡೆದ ಬಳಿಕ ಯಾವುದೇ ರೀತಿಯ ಅಡ್ಡಪರಿಣಾಮ ಕಂಡುಬರುವುದಿಲ್ಲ. ಹಾಗೆಂದ ಮಾತ್ರಕ್ಕೆ ಆ ಲಸಿಕೆಗಳು ಪರಿಣಾಮಕಾರಿಯಾಗಿಲ್ಲ ಎಂದು ಅರ್ಥವಲ್ಲ. ಒಂದು ವೇಳೆ ಮೊದಲ ಡೋಸ್‌ ಪಡೆದ ಬಳಿಕ ತೀವ್ರ ಆರೋಗ್ಯ ತೊಂದರೆ ಆಗಿದ್ದಲ್ಲಿ ಎರಡನೇ ಡೋಸ್‌ ಪಡೆಯುವ ಮೊದಲು ವೈದ್ಯರ ಸಲಹೆ ಪಡೆಯಬೇಕು.

Advertisement

ಕೋವಿಡ್ಲಸಿಕೆ ಪಡೆದ ಬಳಿಕ ಕೋವಿಡ್ಸೋಂಕಿನ ಅಪಾಯ ಇಲ್ಲ.

ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದ ಅನಂತರವೂ ಸೋಂಕು ಉಂಟಾಗಬಹುದು. ಆದರೆ, ಅಂತಹ ಸಂದರ್ಭಗಳಲ್ಲಿ, ರೋಗದ ತೀವ್ರತೆ ಕಡಿಮೆಯಾಗಿರುತ್ತದೆ. ಗಂಭೀರ ಕಾಯಿಲೆಯ ಸಾಧ್ಯತೆಗಳು, ಆಸ್ಪತ್ರೆಗೆ, ಐ.ಸಿ.ಯು.ಗೆ ದಾಖಲಾಗುವ ಸಾಧ್ಯತೆ ಬಹುತೇಕ ಕಡಿಮೆ ಇರುತ್ತದೆ.

ಒಂದು ಬಾರಿ ಕೋವಿಡ್ಲಸಿಕೆ ಪಡೆದರೆ ಜೀವನಪೂರ್ತಿ ಸುರಕ್ಷಿತವಾಗಿರಬಹುದು.

ಕೋವಿಡ್‌-19 ಒಂದು ಹೊಸ ರೋಗ. ಇದು ಕೇವಲ ಒಂದೂವರೆ ವರ್ಷಗಳ ಹಿಂದಷ್ಟೇ ಕಾಣಿಸಿಕೊಂಡಿದೆ. ಲಸಿಕೆ ನೀಡಿಕೆಯೂ ಕೇವಲ 6 ತಿಂಗಳಿಂದ ಈಚೆಗಷ್ಟೇ ಆರಂಭವಾಗಿದೆ. ಇತರ ಎಲ್ಲ ಲಸಿಕೆಗಳಂತೆ, ಇದರ ರೋಗನಿರೋಧ  ಕತೆಯೂ ಕನಿಷ್ಠ ಆರು ತಿಂಗಳಿನಿಂದ ಒಂದು ವರ್ಷದವರೆಗೆ ಇದ್ದು, ಲಸಿಕೆಪಡೆದ ಎಲ್ಲ ವ್ಯಕ್ತಿಗಳು ಆರು ತಿಂಗಳಿನಿಂದ ಒಂದು ವರ್ಷದವರೆಗೆ ಸುರಕ್ಷಿತವಾಗಿರುತ್ತಾರೆ ಎಂಬುದು ಈ ವರೆಗಿನ ವೈಜ್ಞಾನಿಕ ಅಧ್ಯಯನದಲ್ಲಿ ಕಂಡುಬಂದಿದೆ.

ಮಕ್ಕಳು ಕೋವಿಡ್ಸೋಂಕಿಗೆ ತುತ್ತಾಗುವುದಿಲ್ಲ, ಹಾಗಾಗಿ ಅವರಿಗೆ ಲಸಿಕೆಯ ಅಗತ್ಯವಿಲ್ಲ.

ಮಕ್ಕಳಿಗೆ ಸೋಂಕು ಉಂಟಾಗಬಹುದು, ಆದರೆ ಅವರು ತೀವ್ರ ಅನಾರೋಗ್ಯಕ್ಕೆ ಒಳಗಾಗುವುದಿಲ್ಲ. ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ಸಂಶೋಧನೆಗಳನ್ನು ನಡೆಸಲಾಗುತ್ತಿದೆ. 2ರಿಂದ 18 ವರ್ಷ ವಯಸ್ಸಿನ ಮಕ್ಕಳ ಮೇಲೆ ಕೊವಾಕ್ಸಿನ್‌ ಲಸಿಕೆಯ ಅಧ್ಯಯನ ಪ್ರಾರಂಭಿಸಲಾಗಿದೆ. ಈ ವರ್ಷದ ಸೆಪ್ಟೆಂಬರ್‌-ಅಕ್ಟೋಬರ್‌ ವೇಳೆಗೆ ಫ‌ಲಿತಾಂಶಗಳು ಬರಲಿವೆ.

ಕೋವಿಡ್ಲಸಿಕೆ ಪಡೆಯುವುದರಿಂದ ಬಂಜೆತನ ಉಂಟಾಗುತ್ತದೆ.

ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ ಬಂಜೆತನ ಉಂಟಾಗುವುದಿಲ್ಲ.

ತೀವ್ರ ಆರೋಗ್ಯ ಸಮಸ್ಯೆ ಹೊಂದಿರುವವರು ಕೋವಿಡ್ಲಸಿಕೆ ಪಡೆಯಬಾರದು

ರಕ್ತದೊತ್ತಡ, ಮಧುಮೇಹ, ಮೂತ್ರಪಿಂಡ ಕಾಯಿಲೆ, ಹೃದಯಸಂಬಂಧಿ ಖಾಯಿಲೆ ಹೀಗೆ ದೀರ್ಘ‌ಕಾಲದ ಕಾಯಿಲೆಯಿಂದ ಬಲಳುತ್ತಿರುವವರು ತೀವ್ರ ಕೋವಿಡ್‌ ಸೋಂಕಿಗೆ ತುತ್ತಾಗುವ ಸಂಭವ ಹೆಚ್ಚಿರುವುದರಿಂದ ಕಡ್ಡಾಯವಾಗಿ ಕೋವಿಡ್‌ ಲಸಿಕೆಯನ್ನು ಪಡೆದುಕೊಳ್ಳಬೇಕು.

ಕೋವಿಡ್ಲಸಿಕೆಯ ಎರಡು ಡೋಸ್ನ್ನು ಯಾವಾಗ ಬೇಕಾದರೂ ಪಡೆಯಬಹುದು.

ಯಾವುದೇ ಲಸಿಕೆಯಾದರೂ ಡೋಸ್‌ಗಳ ನಡುವೆ ಕನಿಷ್ಟ 4 ವಾರಗಳ ಅಂತರವಿರು ತ್ತದೆ. ಅದರಂತೆ ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರ ಈ ಹಿಂದೆ 6-8 ವಾರಗಳಿದ್ದು ಪ್ರಸ್ತುತ ಲಸಿಕೆಯ ಬಗೆಗಿನ ವೈಜ್ಞಾನಿಕ ವರದಿಗಳನ್ನು ಆಧರಿಸಿ ಎರಡು ಡೋಸ್‌ಗಳ ನಡುವಿನ ಅಂತರವನ್ನು 12-16 ವಾರಗಳಿಗೆ ವಿಸ್ತರಿಸಲಾಗಿದೆ. ಕೊವ್ಯಾಕ್ಸಿನ್‌ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರ 4-6 ವಾರಗಳಾಗಿವೆ. ವಿದೇಶ ಪ್ರಯಾಣ ಮಾಡುವವರಿಗೆ ಮಾತ್ರ ಕೊವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರ 4 ವಾರಕ್ಕೆ ಇಳಿಸಲಾಗಿದೆ. ವಿದೇಶ ಪ್ರಯಾಣ ಮಾಡುವವರು ತಮ್ಮ ಸಮೀಪದ ಸರಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ದಾಖಲೆಗಳನ್ನು ತೋರಿಸಿ ಲಸಿಕೆ ಪಡೆಯಬಹುದಾಗಿದೆ. ಮೊದಲ ಬಾರಿ ಪಡೆದ ಲಸಿಕೆಯನ್ನೇ ಎರಡನೇ ಬಾರಿಯೂ ತೆಗೆದುಕೊಳ್ಳಬೇಕು. ಮೊದಲ ಬಾರಿ ಕೋವಿಶೀಲ್ಡ್‌ ಲಸಿಕೆ ಪಡೆದು ಎರಡನೇ ಡೋಸ್‌ ಕೊವಾಕ್ಸಿನ್‌ ಪಡೆಯುವಂತಿಲ್ಲ.

ಕೋವಿಡ್ಸೋಂಕಿನಿಂದ ಚೇತರಿಸಕೊಂಡ ಕೂಡಲೆ ಲಸಿಕೆ ಪಡೆಯಬಹುದು.

ಕೋವಿಡ್‌ ಸೋಂಕಿನಿಂದ ಚೇತರಿಸಿಕೊಂಡರು 90 ದಿನಗಳ ಬಳಿಕ ಕೋವಿಡ್‌ ಲಸಿಕೆ ಪಡೆಯಬಹುದಾಗಿದೆ. ಒಂದು ವೇಳೆ ಮೊದಲ ಡೋಸ್‌ ಲಸಿಕೆ ಪಡೆದ ಬಳಿಕ ಕೋವಿಡ್‌ ಸೋಂಕಿಗೆ ತುತ್ತಾದರೆ 90 ದಿನಗಳ ಬಳಿಕ 2ನೇ ಡೋಸ್‌ ಪಡೆಯಬಹುದಾಗಿದೆ.

ಕೋವಿಡ್ಲಸಿಕೆ ಪಡೆದರೆ ರಕ್ತದಾನ ಮಾಡುವಂತಿಲ್ಲ.

ಕೋವಿಡ್‌ ಲಸಿಕೆ ಪಡೆದ ಆರೋಗ್ಯವಂತ ವ್ಯಕ್ತಿಯು ಲಸಿಕೆ ಪಡೆದ 15 ದಿನಗಳ ಬಳಿಕ ರಕ್ತದಾನ ಮಾಡಬಹುದಾಗಿದೆ.

ಋತುಸ್ರಾವದ ಅಧಿಯಲ್ಲಿ ಕೋವಿಡ್ಲಸಿಕೆ ಪಡೆದರೆ ಋತುಚಕ್ರದಲ್ಲಿ ಏರುಪೇರು ಉಂಟಾಗುತ್ತದೆ.

ಮಹಿಳೆಯರು ತಮ್ಮ ಋತುಸ್ರಾವದ ಅವಧಿಯಲ್ಲೂ ಲಸಿಕೆಯನ್ನು ತೆಗೆದುಕೊಳ್ಳಬಹುದಾಗಿದೆ. ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ.

ಗರ್ಭಿಣಿ ಹಾಗೂ ಎದೆಹಾಲು ನೀಡುತ್ತಿರುವ  ಮಹಿಳೆಯರಿಗೆ ಕೋವಿಡ್ಲಸಿಕೆಗಳು

 ಗರ್ಭಿಣಿ ಮಹಿಳೆಯರು ಕೋವಿಡ್‌ ಲಸಿಕೆ ಪಡೆಯಬಾರದು.

ಗರ್ಭಿಣಿ ಮಹಿಳೆಯರು ಕೋವಿಡ್‌ ಲಸಿಕೆ ತಮ್ಮ ಗರ್ಭಾವಸ್ಥೆಯ ಯಾವುದೇ ತಿಂಗಳಿನಲ್ಲಿ ಪಡೆಯಬಹುದು.

 ಒಂದು ಡೋಸ್‌ ಲಸಿಕೆ ಪಡೆದ ಬಳಿಕ ಗರ್ಭಿಣಿಯಾದಲ್ಲಿ ಅವರು ತಮ್ಮ ಗರ್ಭಾವಸ್ಥೆಯನ್ನು ಮುಂದುವರಿಸಬಾರದು

ಮಹಿಳೆಯರು ಒಂದು ಡೋಸ್‌ ಲಸಿಕೆ ಪಡೆದ ಬಳಿಕ ಗರ್ಭಿಣಿಯಾದಲ್ಲಿ ಅವರು ತಮ್ಮ ಗರ್ಭಾವಸ್ಥೆಯನ್ನು ಮುಂದುವರೆಸಬಹುದಾಗಿದೆ. ಲಸಿಕೆಯಿಂದಾಗಿ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಯಾವುದೇ ರೀತಿಯ ತೊಂದರೆ ಉಂಟಾಗುವುದಿಲ್ಲ.

 ಹೆರಿಗೆಯಾದ ಬಳಿಕ ಬಳಿಕ ಕೋವಿಡ್‌ ಲಸಿಕೆ ಪಡೆದರೆ ಮಗುವಿಗೆ ಎದೆಹಾಲು ನೀಡುವಂತಿಲ್ಲ.

ಹೆರಿಗೆಯಾದ ಬಳಿಕ ಕೋವಿಡ್‌ ಲಸಿಕೆ ಪಡೆಯುವುದರಿಂದ ತಾಯಿಗಾಗಲೀ ಮಗುವಿಗಾಗಲೀ ಯಾವುದೇ ರೀತಿಯ ತೊಂದರೆ ಇಲ್ಲ. ಎದೆಹಾಲು ಉಣಿಸುವ ತಾಯಂದಿರು ಲಸಿಕೆಯನ್ನು ಪಡೆಯಬಹುದಾಗಿದೆ. ಲಸಿಕೆ ಪಡೆಯುವ ಸಲುವಾಗಿ ಎದೆಹಾಲು ನೀಡುವುದನ್ನು ನಿಲ್ಲಿಸಬೇಕಾಗಿಲ್ಲ. ಲಸಿಕೆ ಪಡೆದ ಬಳಿಕವೂ ಎದೆಹಾಲು ಹಾಲು ನೀಡಬಹುದಾಗಿದೆ.

 ಆರೋಗ್ಯ ಸಮಸ್ಯೆ ಹೊಂದಿರುವ ಗರ್ಭಿಣಿ ಮಹಿಳೆಯರು ಕೋವಿಡ್‌ ಲಸಿಕೆ ಪಡೆಯುವಂತಿಲ್ಲ

ಗರ್ಭಿಣಿಯರಲ್ಲಿ ಕಂಡು ಬರುವ ಅಧಿಕ ರಕ್ತದೊತ್ತಡ, ಮಧುಮೇಹ, ರಕ್ತಹೀನತೆ ಮುಂತಾದ ಹೆಚ್ಚಿನ ಅಪಾಯ ಇರುವ ಗರ್ಭಿಣಿಯರಿಗೆ ಕೊವಾಕ್ಸಿನ್‌ ಲಸಿಕೆಯನ್ನು ಶಿಫಾರಸು ಮಾಡಲಾಗಿದೆ. ಕಡಿಮೆ ಅಪಾಯ ಹೊಂದಿರುವ ಗರ್ಭಿಣಿಯರಿಗೆ ಕೊವಿಶೀಲ್ಡ್‌ ಲಸಿಕೆ ಶಿಫಾರಸು ಮಾಡಲಾಗಿದ್ದು, ಮೂಛೆìರೋಗ ಹೊಂದಿರುವ ತಾಯಂದಿರು ಮತ್ತು ಹೃದ್ರೋಗದ ಸಮಸ್ಯೆ ಇರುವ ತಾಯಂದಿರಿಗೆ ವೈದ್ಯರ ಸಲಹೆಯ ಅನಂತರ ವೈದ್ಯಕೀಯ ಕಾಲೇಜಿನಲ್ಲಿ ಲಸಿಕೆ ಹಾಕಬೇಕು. ಸಾಮಾನ್ಯ ಜನರಿಗೆ ಹಾಗೂ ಗರ್ಭಿಣಿ ಮತ್ತು ಎದೆಹಾಲು ಉಣಿಸುತ್ತಿರುವ ತಾಯಂದಿರಿಗೆ ಕೊವಿಶೀಲ್ಡ್‌ ಹಾಗೂ ಕೊವ್ಯಾಕ್ಸಿನ್‌ ಲಸಿಕೆಯ 2 ಡೋಸ್‌ಗಳ ನಡುವಿನ ಅಂತರದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ.

 ಗರ್ಭಿಣಿಯರು ಒಂದೇ ದಿನ ಟಿ.ಡಿ. ಹಾಗೂ ಕೋವಿಡ್‌ ಲಸಿಕೆ ಪಡೆಯುವಂತಿಲ್ಲ.

ಗರ್ಭಿಣಿಯರಿಗೆ ನೀಡಲಾಗುವ ಟಿ.ಡಿ ಮತ್ತು ಕೋವಿಡ್‌ ಲಸಿಕೆಗಳನ್ನು ಒಂದೇ ದಿನದಲ್ಲಿ ನೀಡಬಹುದು. ಆದರೆ ಬೇರೆ ಬೇರೆ ಕೈಗಳಿಗೆ ನೀಡಬೇಕಾಗುತ್ತದೆ.

 

ಡಾ| ಚೈತ್ರಾ ಆರ್‌. ರಾವ್

ಸಹ ಪ್ರಾಧ್ಯಾಪಕರು

ಸಮುದಾಯ ವೈದ್ಯಕೀಯ ವಿಭಾಗ ಮತ್ತು ಕೋಆರ್ಡಿನೇಟರ್‌, ಸೆಂಟರ್ಫಾರ್ಟ್ರಾವೆಲ್ಮೆಡಿಸಿನ್

ರಾಘವೇಂದ್ರ ಭಟ್ಎಂ.

ಆರೋಗ್ಯ ಸಹಾಯಕರು, ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ. ಮಣಿಪಾಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next