Advertisement

ಆಶ್ರಯ ಫಲಾನುಭವಿಗಳಿಗೂ ಕೋವಿಡ್ 19 ಕಾಟ

01:48 PM Apr 07, 2020 | Suhan S |

ಬೆಂಗಳೂರು: ಬಡವರಿಗೆ ಸೂರು ಕಲ್ಪಿಸಲು ನಿಯಮ ಪಾಲಿಸದ ಫಲಾನುಭವಿಗಳಿಗೆ ಒಂದು ಬಾರಿ ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ನೀಡಿದ್ದ ಸಮಯವನ್ನು ಕೋವಿಡ್ 19 ಲಾಕ್‌ ಡೌನ್‌ ಅವಧಿ ನುಂಗಿ ಹಾಕಿರುವುದರಿಂದ ಫಲಾನುಭವಿಗಳು ಮನೆ ವಂಚಿತರಾಗುವ ಆತಂಕ ಎದುರಿಸುವಂತಾಗಿದೆ.

Advertisement

ಹಿಂದಿನ ಕಾಂಗ್ರೆಸ್‌ ಸರ್ಕಾರ ಹಾಗೂ ಕಾಂಗ್ರೆಸ್‌ -ಜೆಡಿಎಸ್‌ ಸರ್ಕಾರದ ಅವಧಿಯಲ್ಲಿ ಕೆಲವು ಫಲಾನುಭವಿಗಳು ನಿಗದಿತ ಸಮಯದಲ್ಲಿ ಮನೆ ಕಟ್ಟಿಕೊಳ್ಳದೆ, ಕಟ್ಟಲು ಪ್ರಾರಂಭಿಸಿದ್ದ ಮನೆ ಸರಿಯಾದ ಸಮಯಕ್ಕೆ ಜಿಪಿಎಸ್‌ ಮಾಡಿ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಕಳುಹಿಸಲಾಗದೆ ಹಾಗೂ ಫಲಾನುಭವಿ ಹೆಸರು ಬ್ಯಾಂಕ್‌ ಖಾತೆಗೂ ಆಧಾರ್‌ ನಂಬರ್‌ಗೂ ಹೊಂದಾಣಿಕೆಯಾಗದೆ ಸುಮಾರು 2.63 ಲಕ್ಷ ಮನೆಗಳನ್ನು ತಡೆ ಹಿಡಿಯಲಾಗಿತ್ತು. ಇದರಿಂದ ಫಲಾನುಭವಿಗಳು ತಮ್ಮದಲ್ಲದ ತಪ್ಪಿಗೆ ಆಶ್ರಯ ಮನೆ ಮಂಜೂರಾಗಿದ್ದರೂ ಕಟ್ಟಿಕೊಳ್ಳಲಾಗದೆ ಸಂಕಷ್ಟ ಎದುರಿಸುವಂತಾಗಿತ್ತು. ಮನೆ ವಂಚಿತ ಗ್ರಾಮೀಣ ಜನರು ತಮಗಾಗಿರುವ ಅನ್ಯಾಯವನ್ನು ತಮ್ಮ ಶಾಸಕರ ಮೂಲಕ ಸರ್ಕಾರದ ಮೇಲೆ ಒತ್ತಡ ತಂದಿದ್ದರು.

ಮನೆ ಕಟ್ಟಿಕೊಳ್ಳಲು ಅವಕಾಶ: ಶಾಸಕರ ಒತ್ತಾಯದ ಮೇರೆಗೆ ರಾಜ್ಯ ಸರ್ಕಾರ ತಾಂತ್ರಿಕ ಕಾರಣಗಳಿಂದ ತಡೆ ಹಿಡಿದಿರುವ ಮನೆಗಳನ್ನು ಕಟ್ಟಿಕೊಳ್ಳಲು ಒಂದು ಬಾರಿ ಅವಕಾಶ ಕಲ್ಪಿಸಿ ಫೆ.28ರಂದು ಆದೇಶ ಹೊರಡಿಸಿತ್ತು. ಮಾರ್ಚ್‌ 14 ರೊಳಗೆ ಮನೆಯ ತಳಪಾಯ ಹಾಕಿ ಜಿಪಿಎಸ್‌ ಮೂಲಕ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಫೋಟೋ ಅಪ್‌ಲೋಡ್‌ ಮಾಡಿದರೆ ಅಂತಹವರ ಖಾತೆಗೆ ನೇರ ಹಣ ವರ್ಗಾವಣೆ ಮಾಡುವುದಾಗಿ ತಿಳಿಸಲಾಗಿತ್ತು. ಕೇವಲ 15 ದಿನದಲ್ಲಿ ಮನೆ ಪಾಯ ತೆಗೆದು ತಳಪಾಯ ಹಾಕಲು ಸಮಯ ಸಾಲುವುದಿಲ್ಲ ಎನ್ನುವ ಕಾರಣಕ್ಕೆ ಮಾ.31 ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಬಹುತೇಕ ಫಲಾನುಭವಿಗಳು ಮನೆ ನಿರ್ಮಾಣ ಆರಂಭಿಸಿದ್ದರೂ ಇನ್ನೂ ಜಿಪಿಎಸ್‌ ಮಾಡಿಲ್ಲ.

ಕೋವಿಡ್ 19  ಎಫೆಕ್ಟ್: ಮಾ.23 ರಿಂದಲೇ ಲಾಕ್‌ ಡೌನ್‌ ಘೋಷಣೆಯಾಗಿರುವುದರಿಂದ ಯಾವುದೇ ರೀತಿಯ ಕಾಮಗಾರಿ ನಡೆಸಲು ಅವಕಾಶವಿಲ್ಲ. ಕೆಲವು ಫಲಾನುಭವಿಗಳು ಮನೆಯ ಬುನಾದಿ ತುಂಬಿದ್ದರೂ ತಳಪಾಯ ಹಾಕುವಷ್ಟರಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಿರುವುದರಿಂದ ಸರ್ಕಾರ ನಿಗದಿ ಪಡಿಸಿದ್ದ ಗುರಿ ತಲುಪಲು ಆಗಿಲ್ಲ.

ಇನ್ನು ಕೆಲವು ಫಲಾನುಭವಿಗಳು ಸರ್ಕಾರದ ಸೂಚನೆಯಂತೆ ತಳಪಾಯ ತುಂಬಿ ಮಾ.31ರೊಳಗೆ ಸಿದ್ಧಪಡಿಸಿಕೊಂಡಿದ್ದರೂ ಜಿಪಿಎಸ್‌ ಮಾಡಲು ಸಾಧ್ಯವಾಗಿಲ್ಲ. ಕಾರಣ ಲಾಕ್‌ ಡೌನ್‌ ಘೋಷಣೆಯಾಗಿ ರುವುದರಿಂದ ಮನೆಗಳ ಜಿಪಿಎಸ್‌ ಮಾಡ ಬೇಕಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೋವಿಡ್ 19 ನಿಯಂತ್ರಣದ ಅಗತ್ಯ ಸೇವೆ ಉಸ್ತುವಾರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಜಿಪಿಎಸ್‌ ಮಾಡದೇ ಹಾಗೆ ಉಳಿದುಕೊಂಡಿವೆ.

Advertisement

ಆತಂಕದಲ್ಲಿ ಫಲಾನುಭವಿಗಳು: ರಾಜ್ಯ ಸರ್ಕಾರ ಒಂದು ಬಾರಿ ನೀಡಿದ್ದ ಕೊನೆಯ ಅವಕಾಶದಲ್ಲಿ ಮನೆ ಕಟ್ಟಿಕೊಳ್ಳಲು ಕೊರೊನಾ ಅಡ್ಡಿಯಾಗಿದ್ದು, ಈಗ ರಾಜ್ಯ ಸರ್ಕಾರ ನೀಡಿರುವ ಗಡುವು ಮುಕ್ತಾಯವಾ ಗಿರುವುದ ರಿಂದ ಮತ್ತೆ ಎಲ್ಲಿ ಸರ್ಕಾರಿ ಯೋಜನೆಯಿಂದ ಅವಕಾಶ ವಂಚಿತರಾಗುತ್ತೇವೆಯೋ ಎನ್ನುವ ಆತಂಕ ಫಲಾನುಭವಿಗಳನ್ನು ಕಾಡುತ್ತಿದೆ.

‌ಸರ್ಕಾರಕ್ಕೆ ತೀರ್ಮಾನ ಸಾಧ್ಯವಾಗಿಲ್ಲ :  ಕೋವಿಡ್ 19  ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ವಸತಿ ಇಲಾಖೆ ಅಗತ್ಯ ಸೇವೆ ಸಲ್ಲಿಸುವ ವ್ಯಾಪ್ತಿಯಿಂದ ಹೊರಗಿಡಲಾಗುವುದರಿಂದ ಸದ್ಯಕ್ಕೆ ವಸತಿ ಇಲಾಖೆಯ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿವೆ. ಹೀಗಾಗಿ ರಾಜೀವ್‌ ಗಾಂಧಿ ನಿಗಮದ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್‌ 14 ರ ನಂತರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಆಶ್ರಯ ಮನೆ ಫಲಾನುಭವಿಗಳ ಭವಿಷ್ಯ ನಿಂತಿದೆ.

 

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next