Advertisement

ಬಯಲಾಟ ಕಲಾವಿದರಿಗೆ ಕೋವಿಡ್ 19 ಸಂಕಷ್ಟ

03:46 PM Apr 17, 2020 | Suhan S |

ಲೋಕಾಪುರ: ಗ್ರಾಮ ಕಲಾವಿದರ ತವರೂರು. ಕಲೆ ನಂಬಿ ಬದುಕುವ ಇಲ್ಲಿಯ ಬಡಕಲಾವಿದರು ಲಾಕ್‌ಡೌನ್‌ ನಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ.  ದೀಪಾವಳಿಯಿಂದ ಕಾರಹುಣ್ಣಿಮೆವರೆಗೆ ಜಾತ್ರೆ, ಉತ್ಸವ, ಓಕಳಿ, ಕಂಬಿ ಐದೇಶಿ ಹಬ್ಬದ ದಿನಗಳಲ್ಲಿ ನಾಟಕ, ಬಯಲಾಟ, ಭಜನೆ , ಚೌಡಕಿ ಪದಗಳ ಪ್ರದರ್ಶನದಿಂದ ಕಲಾವಿದರು, ಜೀವನ ಸಾಗಿಸುತ್ತಿದ್ದರು. ಈಗ ಪ್ರದರ್ಶನಗಳು ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿರುವುದರಿಂದ ಬದುಕು ಸಾಗಿಸುವುದು ಕಷ್ಟಕರವಾಗಿದೆ.

Advertisement

ಲೋಕಾಪುರ ಬಯಲಾಟದ ಕೇಂದ್ರವನ್ನಾಗಿ ಮಾಡಿಕೊಂಡು ಈ ಭಾಗದ ಶ್ರೀಕೃಷ್ಣ ಪಾರಿಜಾತ, ಸಂಗ್ಯಾಬಾಳ್ಯಾ ರೇಣುಕಾ, ಹೇಮರಡ್ಡಿ ಮಲ್ಲಮ್ಮ ಸೇರಿದಂತೆ ಮುಂತಾದ ಬಯಲಾಟಗಳು ಈ ಭಾಗದಲ್ಲಿ ಹಾಸುಹೊಕ್ಕಾಗಿವೆ. ಎಲ್ಲ ಬಯಲಾಟಗಳ ಪ್ರದರ್ಶನಗಳು ಸ್ಥಗಿತಗೊಂಡಿವೆ. ಲೋಕಾಪುರ, ದಾದನಟ್ಟಿ, ಕನಸಗೇರಿ, ಜಾಲಿಕಟ್ಟಿ, ಚಿತ್ರಭಾನಕೋಟಿ, ಯಂಡಿಗೇರಿ ಗ್ರಾಮಗಳಲ್ಲಿ ವಿವಿಧ ಬಯಲಾಟ ಕಂಪನಿಗಳು ಇದ್ದು ಇಲ್ಲದಂತಾಗಿವೆ. ಬಯಲಾಟ ಕಲೆಯನ್ನು ನಂಬಿ ಬದುಕುತ್ತಿರುವ ಬಡ ಕಲಾವಿದರಿಗೆ ಸರ್ಕಾರ ನೆರವು ನೀಡಬೇಕಿದೆ. ಕಲಾವಿದರಿಗೆ ಸಹಾಯ -ಸಹಕಾರ ನೀಡುವುದರ ಜತೆಗೆ ಅವರ ಜೀವನಕ್ಕೆ ನೆರವು ಕಲ್ಪಿಸುವ ಅಗತ್ಯವಿದೆ.

ನಾಡೋಜ ಪ್ರಶಸ್ತಿ ಪುರಸ್ಕೃತೆ ಯಲ್ಲವ್ವ ರೊಡ್ಡಪ್ಪನವರ, ಜಾನಪದ ಪ್ರಶಸ್ತಿ ಪುರಸ್ಕೃತೆ ಕಾಶಿಬಾಯಿ ದಾದನಟ್ಟಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊಳಬಸಯ್ಯ ಸಂಬಾಳದ, ಕಮಲಸಾಬ ಡಂಗಿ, ನಾರಾಯಣ ಪತ್ತಾರ, ಸಿದ್ದಪ್ಪ ಕುರಿ, ಮಲ್ಲಪ್ಪ ಚೌಧರಿ, ಶಾಂತವ್ವ ಮಾದರ, ಗಂಗವ್ವ ಮುಧೋಳ, ದುರಗವ್ವ ಮುಧೋಳ, ಸುನಂದಾ ಮ್ಯಾಗೇರಿ, ಪಾರ್ವತಿ ರೊಡ್ಡಪ್ಪನವರ, ಸತ್ಯವ್ವ ಮಾದರ, ಚಿದಾನಂದ ಹಲಗಲಿ, ಮಲ್ಲಿಕಾರ್ಜುನ ಕುಂದರಗಿ, ಮಲ್ಲಿಕಾರ್ಜುನ ಮುದಕವಿ, ಭೀಮಸಿ ಕಂಬಾರ ಸೇರಿದಂತೆ ಹಲವಾರು ಕಲಾವಿದರು ಲಾಕ್‌ಡೌನ್‌ನಿಂದ ಬದುಕು ಕಟ್ಟಿಕೊಳ್ಳಲು ಪರದಾಡುವಂತಾಗಿದೆ.

ಕಲಾವಿದರು ಸಾಂಸ್ಕೃತಿಕ ಲೋಕದ ವಾರಸುದಾರರು. ಅವರು ಉಳಿದರೆ ಸಂಸ್ಕೃತಿ ಉಳಿಯುತ್ತದೆ. ಅವರನ್ನು ರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿ. ಸಂಕಷ್ಟಕ್ಕೆ ಒಳಗಾಗಿರುವ ಕಲಾವಿದರಿಗೆ ನೆರವು ನೀಡಬೇಕಾಗಿದೆ.  ಶಿವಾನಂದ ಶೆಲ್ಲಿಕೇರಿ, ಕರ್ನಾಟಕ ಜಾನಪದ ಪರಿಷತ್‌ ಜಿಲ್ಲಾಧ್ಯಕ್ಷ

ಕೋವಿಡ್ 19 ದಿಂದ ಕಲಾವಿದರು. ಸಂಗೀತಗಾರರು ಜೀವನ ನಡೆಸುವುದು ಕಷ್ಟಕರವಾಗಿದೆ. ಮುಂದುವರಿದರೆ ಕಲಾವಿದರು ಬೀದಿ ಪಾಲಾಗುತ್ತಾರೆ. ಆದ್ದರಿಂದ ಅವರಿಗೆ ನೆರವಿನ ಉರುಗೋಲು ಅವಶ್ಯಕವಾಗಿದೆ.  ಕೃಷ್ಣಾ ಭಜಂತ್ರಿ, ಲೋಕಾಪುರ ಕಲಾವಿದ

Advertisement

 

-ಸಲೀಮ ಐ. ಕೊಪ್ಪದ

Advertisement

Udayavani is now on Telegram. Click here to join our channel and stay updated with the latest news.

Next