ವಾಷಿಂಗ್ಟನ್: ಅಮೆರಿಕದಲ್ಲಿ ಕೋವಿಡ್ ನ ಡೆಲ್ಟಾ ರೂಪಾಂತರಿ ತಳಿ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಪತ್ತೆಯಾಗಿದ್ದು, ಅಮೆರಿಕದ ಟೆಕ್ಸಾಸ್ ನ ಆಸ್ಟಿನ್ ನಗರದಲ್ಲಿನ ಆಸ್ಪತ್ರೆಯಲ್ಲಿನ ಐಸಿಯುನಲ್ಲಿ ಕೇವಲ ಆರು ಬೆಡ್ ಗಳು ಮಾತ್ರ ಇದೆ. ಆಸ್ಟಿನ್ ನಗರದಲ್ಲಿ 24 ಲಕ್ಷ ಜನಸಂಖ್ಯೆ ಇದ್ದು, ಇದರಿಂದ ಭಾರೀ ಸಂಕಷ್ಟ ತಂದೊಡ್ಡಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ:ಟೆಸ್ಟ್ ಕ್ರಿಕೆಟ್ ನಲ್ಲಿ ಅವಕಾಶಗಳ ಕೊರತೆಯಿಂದ ನಿರಾಶನಾಗಿದ್ದೆ: ಕೆ.ಎಲ್.ರಾಹುಲ್
ಡೆಲ್ಟಾ ರೂಪಾಂತರ ತಳಿ ಪ್ರಕರಣ ಹೆಚ್ಚಳವಾಗುತ್ತಿರುವಂತೆಯೇ ಆಸ್ಟಿನ್ ನಲ್ಲಿ ಐಸಿಯು ಬೆಡ್ ಗಳ ತೀವ್ರ ಸಮಸ್ಯೆ ಎದುರಾಗಿದೆ ಎಂದು ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ಕಳವಳ ವ್ಯಕ್ತಪಡಿಸಿದೆ. ಡೆಲ್ಟಾ ರೂಪಾಂತರ ತಳಿ ಕಳೆದ ವರ್ಷ ಪ್ರಥಮ ಬಾರಿ ಭಾರತದಲ್ಲಿ ಪತ್ತೆಯಾಗಿರುವುದಾಗಿ ವರದಿ ಹೇಳಿದೆ.
ಆಸ್ಟಿನ್ ನಗರದಲ್ಲಿ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ. 24 ಲಕ್ಷ ಜನಸಂಖ್ಯೆ ಹೊಂದಿರುವ ಇಲ್ಲಿ ಕೇವಲ 313 ವೆಂಟಿಲೇಟರ್ಸ್ ಹಾಗೂ ಆರು ಐಸಿಯು ಬೆಡ್ ಗಳು ಲಭ್ಯ ಇದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.
ಟೆಕ್ಸಾಸ್ ನ ಆಸ್ಟಿನ್ ನಗರದ ಪರಿಸ್ಥಿತಿ ತುಂಬಾ ಕಳವಳಕಾರಿಯಾಗಿದೆ ಎಂದು ಆಸ್ಟಿನ್ ಮೆಡಿಕಲ್ ಡೈರೆಕ್ಟರ್ ಡಾ.ಡೆಸ್ಮಾರ್ ವಾಕ್ಸ್ ತಿಳಿಸಿರುವುದಾಗಿ ವರದಿ ವಿವರಿಸಿದೆ. ಈ ಭೀಕರ ಆಪತ್ತಿನ ಕುರಿತು ಆಸ್ಟಿನ್ ನಗರದ ಆರೋಗ್ಯ ಇಲಾಖೆ ಎಚ್ಚರಿಕೆಯ ಸಂದೇಶವನ್ನು ತಮ್ಮ ನಿವಾಸಿಗಳಿಗೆ ಇ-ಮೇಲ್, ಮೆಸೇಜ್ ಮೂಲಕ ಕಳುಹಿಸಿರುವುದಾಗಿ ಹೇಳಿದೆ.
ಡೆಲ್ಟಾ ಪ್ರಕರಣ ಹೆಚ್ಚಳವಾಗುತ್ತಿದ್ದು, ನಮ್ಮಲ್ಲಿ ಈಗ ಸಮಯ ಕೈಮೀರಿ ಹೋಗುತ್ತಿದೆ, ಅಲ್ಲದೇ ಕೂಡಲೇ ಇದರ ಬಗ್ಗೆ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದು ಡಾ.ವಾಕ್ಸ್ ಸಲಹೆ ನೀಡಿದ್ದಾರೆ. ಕೋವಿಡ್ ಸೋಂಕು ಹೆಚ್ಚಳವಾಗುತ್ತಿದ್ದು, ನಮ್ಮಲ್ಲಿ ಐಸಿಯು, ವೆಂಟಿಲೇಟರ್ ಹಾಗೂ ಸಿಬಂದಿಗಳ ಕೊರತೆ ಇದ್ದಿರುವುದಾಗಿ ಆಸ್ಟಿನ್ ನಲ್ಲಿರುವ ಆಸ್ಪತ್ರೆಗಳ ಮುಖ್ಯಸ್ಥರು ಜಂಟಿ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದರು ಎಂದು ವರದಿ ತಿಳಿಸಿದೆ.