ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೊನೆಗೂ ಎಚ್ಚೆತ್ತಿಕೊಂಡು ಜಿಲ್ಲೆಗೆ ಕೋವಿಡ್-19 ಪರೀಕ್ಷಾ ಯಂತ್ರಗಳನ್ನು ಮಂಜೂರು ಮಾಡಿದ್ದು, ಶನಿವಾರದಿಂದ ಈ ಸೇವೆ ಜಿಲ್ಲೆಯ ಜನತೆಗೆ ಲೋಕಾರ್ಪಣೆಗೊಳ್ಳಲಿದೆ. ಪ್ರಕರಣಗಳ ಪರೀಕ್ಷೆ ತ್ವರಿತಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಐಸಿಎಂಆರ್ ಅನುಮೋ ದನೆಯೊಂದಿಗೆ ರಾಜ್ಯದಲ್ಲಿ ಪ್ರಥಮ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲಿ ಸುಸಜ್ಜಿತವಾದ ಅತ್ಯಾಧುನಿಕ ಎರಡು ಕೋವಿಡ್-19 ಪರೀಕ್ಷಾ ಯಂತ್ರಗಳನ್ನು ಸ್ಥಾಪಿಸಲಾಗಿದೆ.
ನಗರದ ಜಿಲ್ಲಾಸ್ಪತ್ರೆಯ ಡಿಪಿಹೆಚ್‌ಎಲ್ ಪ್ರಯೋಗಾಲಯಲ್ಲಿ (ಕೊಠಡಿ ಸಂಖ್ಯೆ- 41-ಡಿ) ಉಚಿತವಾಗಿ ಈ ಪರೀಕ್ಷಾ ಸೌಲಭ್ಯ ವನ್ನು ದಿನದ 24 ಗಂಟೆಯೂ ಸಹ ಪಡೆದು ಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ಕೊರೊನಾ ಶಂಕಿತ ವ್ಯಕ್ತಿಗಳು ರೋಗ ಲಕ್ಷಣಗಳು ಕಂಡು ಬಂದಲ್ಲಿ ಈ ಆರೋಗ್ಯ ಸೇವೆಯನ್ನು ಉಪಯೋಗಿಸಿಕೊಂಡು ಕೋವಿಡ್ -19 ನಿಯಂತ್ರಣದಲ್ಲಿಆರೋಗ್ಯಇಲಾಖೆಯೊಂದಿಗೆ ಕೈ ಜೋಡಿಸಬೇಕಿದೆ.
ದಿನಕ್ಕೆ 20 ಪರೀಕ್ಷೆ: ಪ್ರತಿ ಯಂತ್ರದಲ್ಲಿ ಪ್ರತಿನಿತ್ಯ 20 ಪರೀಕ್ಷಾ ಮಾದರಿಗಳನ್ನು ಪರೀಕ್ಷಿಸಿ ಫಲಿತಾಂಶವನ್ನು ದೃಢಪಡಿಸಬಹುದಾಗಿದೆ. ಈ ಯಂತ್ರದಲ್ಲಿ ಕೊರೊನಾ ವೈರಸ್ ಇರುವಿಕೆಯನ್ನು 1 ರಿಂದ 2 ಗಂಟೆಯೊಳಗಾಗಿ ದೃಢಪಡಿಸಬಹುದಾಗಿದೆ. ಸರ್ಕಾರಕ್ಕೆ ಇಂತಹ ಪ್ರಯೋಗಾ ಲಯದ ಅವಶ್ಯಕತೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ತಡವಾಗಿಯಾದರೂ ರಾಜ್ಯ ಸರ್ಕಾರ ಜಿಲ್ಲೆಗೆ ಕೋವಿಡ್-19 ಪರೀಕ್ಷಾ ಯಂತ್ರಗಳನ್ನು ಒದಗಿಸಿಕೊಟ್ಟಿದೆ.
ಗಮನ ಸೆಳೆದಿದ್ದ ಉದಯವಾಣಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ವೈದ್ಯಕೀಯ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಕೋವಿಡ್-19 ಪ್ರಯೋ ಗಾಲಯ ಇಲ್ಲದ ಕುರಿತು ಉದಯವಾಣಿ ಪತ್ರಿಕೆ ಚಿಕ್ಕಬಳ್ಳಾಪುರ ಆವೃತ್ತಿಯಲ್ಲಿ ಮೇ.11 ರಂದು “ಜಿಲ್ಲೆಗಿಲ್ಲ ಕೊರೊನಾ ಪ್ರಯೋಗಾಲಯ’ ಶೀರ್ಷಿಕೆಯಡಿ ಆರೋಗ್ಯ ಇಲಾಖೆ ಪ್ರಸ್ತಾವನೆಗೆ ಸರ್ಕಾರದ ಸ್ಪಂದನೆ ಇಲ್ಲ ಎನ್ನುವ ಬಗ್ಗೆ ವಿಶೇಷ ವರದಿ ಪ್ರಕಟಿಸಿ ಗಮನ ಸೆಳೆದಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.
ಜಿಲ್ಲೆಯಲ್ಲಿ ಕೊರೊನಾ ಹೆಚ್ಚುತ್ತಿದ್ದು, ಶಂಕಿತ ವ್ಯಕ್ತಿಗಳ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಕರಣ ಗಳನ್ನು ದೃಢಪಡಿಸಿ ಅಗತ್ಯ ಚಿಕಿತ್ಸೆ ಮತ್ತು ಕಾರ್ಯಾನುಸರಣೆ ಕೈಗೊಳ್ಳಲು ಈ ಕೋವಿಡ್-19 ಪರೀಕ್ಷಾ ಯಂತ್ರಗಳು ಸಹಾಯಕವಾಗಲಿದ್ದು, ಜಿಲ್ಲೆಯಲ್ಲಿ ಸೋಂಕು ತಡೆಗೆ ಇದು ಅನುಕೂಲವಾಗಲಿದೆ.
-ಡಾ.ಯೋಗೇಶ್ ಗೌಡ, ಜಿಲ್ಲಾ ಆರೋಗ್ಯಾಧಿಕಾರಿ
* ಕಾಗತಿ ನಾಗರಾಜಪ್ಪ