Advertisement

ಕೋವಿಡ್ ಟೆಸ್ಟ್‌ ಕಡ್ಡಾಯ ಅಲ್ಲ ; ಆರೋಗ್ಯ ಸೇವೆಗಳಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

07:17 AM May 28, 2020 | Hari Prasad |

ಹೊಸದಿಲ್ಲಿ: ಕೋವಿಡ್ ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ಹೆರಿಗೆ, ನವಜಾತ ಶಿಶು ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಆರೋಗ್ಯ ಸೇವೆಗಳು ಸೇರಿದಂತೆ ಅತ್ಯವಶ್ಯಕ ಸೇವೆಗಳನ್ನು ನೀಡುವುದನ್ನು ಮುಂದುವರಿಸಬೇಕು.

Advertisement

ಇಂಥ ಸೇವೆ ಒದಗಿಸುವ ಮುನ್ನ ಕೋವಿಡ್ ಪರೀಕ್ಷೆ ನಡೆಸುವುದು ಕಡ್ಡಾಯವಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಸ್ಪಷ್ಟಪಡಿಸಿದೆ.

ಜತೆಗೆ, ತಾಯಿ ಮತ್ತು ಮಗುವನ್ನು ಒಂದೇ ಕಡೆ ಇರಿಸಿ ಆರೈಕೆ ಮಾಡಬೇಕು ಹಾಗೂ ಕೋವಿಡ್ ಸೋಂಕು ಇದ್ದರೂ , ಇಲ್ಲದಿದ್ದರೂ, ಹೆರಿಗೆಯಾದ ಒಂದು ಗಂಟೆಯೊಳಗೆ ಸ್ತನ್ಯ ಪಾನಕ್ಕೆ ಅವಕಾಶ ಕಲ್ಪಿಸಬೇಕು. ಆದರೆ, ಮಗುವಿಗೆ ಹಾಲುಣಿಸುವಾಗ ತಾಯಿಯು ಮುಖಕ್ಕೆ ಮಾಸ್ಕ್ ಧರಿಸಿಕೊಂಡು, ಕೈಗಳನ್ನು ಸ್ವಚ್ಛವಾಗಿಟ್ಟುಕೊಂಡಿರಬೇಕು ಎಂದೂ ಸೂಚಿಸಿದೆ.

ಈ ಕುರಿತು ಬುಧವಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಸಚಿವಾಲಯ, ಯಾವುದೇ ಕಾರಣಕ್ಕೂ ಅತ್ಯಗತ್ಯ ವೈದ್ಯಕೀಯ ಸೇವೆಗಳನ್ನು ನಿರಾಕರಿಸುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ನಮ್ಮ ದೇಶದಲ್ಲಿ ಪ್ರತಿ ವರ್ಷ 2.5 ಕೋಟಿಗೂ ಹೆಚ್ಚು ಗರ್ಭಧಾರಣೆ ಆಗುವ ಕಾರಣ, ಈ ಅವಧಿಯಲ್ಲಿ ವೈದ್ಯಕೀಯ ಸೇವೆ ಲಭ್ಯವಿರುವಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ಸೇವೆಯನ್ನು ನಿರಾಕರಿಸುವುದರಿಂದ ಹೆರಿಗೆ ಸಮಯದಲ್ಲಿ ಮರಣ ಸಂಭವಿಸಿವುದು ಮತ್ತು ಶಿಶುಗಳ ಮರಣ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿರುತ್ತದೆ ಎಂದು ಸಚಿವಾಲಯ ಹೇಳಿದೆ.

Advertisement

ಜತೆಗೆ, ಲಾಭದ ಉದ್ದೇಶವಿಲ್ಲದ ಆಸ್ಪತ್ರೆಗಳು ಅಥವಾ ಖಾಸಗಿ ಆಸ್ಪತ್ರೆಗಳು ಕೋವಿಡೇತರ ಅಗತ್ಯ ಸೇವೆಗಳನ್ನು ಕಲ್ಪಿಸುವಂತೆ ನೋಡಿಕೊಳ್ಳಬೇಕು. ಆದರೆ, ಯಾವುದೇ ಸೇವೆ ನೀಡುವಾಗ ಸೇವೆ ನೀಡುವವರು ಮತ್ತು ಪಡೆಯುವವರು ಸೂಕ್ತ ಶುಚಿತ್ವ, ಶಾರೀರಿಕ ಅಂತರ ಕಾಪಾಡಿಕೊಳ್ಳಬೇಕು. ರೋಗಿಗಳ ಸಂಖ್ಯೆ ಅಧಿಕವಿದ್ದರೆ, ಹೆಚ್ಚುವರಿ ಕ್ಲಿನಿಕ್‌ ಗಳಲ್ಲಿ ಸೇವೆ ಕಲ್ಪಿಸಬೇಕು. ಚಿಕಿತ್ಸೆ ನೀಡುವ ಸ್ಥಳ ಮತ್ತು ಸಾಮಗ್ರಿಗಳನ್ನು ಪ್ರತಿ ಬಾರಿಯ ಬಳಕೆಯ ಮುನ್ನ ಮತ್ತು ನಂತರ ಸ್ವಚ್ಛಗೊಳಿಸಬೇಕು ಎಂದೂ ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ

170 ಮಂದಿ ಸಾವು: ಮಂಗಳವಾರ ಬೆಳಗ್ಗೆ 8ರಿಂದ ಬುಧವಾರ ಬೆಳಗ್ಗೆ 8ರವರೆಗಿನ ಅವಧಿಯಲ್ಲಿ ದೇಶಾದ್ಯಂತ 170 ಮಂದಿ ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದು, 6,387 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಮಾಹಿತಿ ನೀಡಿದ್ದು, ಈವರೆಗೆ 64,425 ಮಂದಿ ಗುಣಮುಖರಾಗಿ ಮನೆಗೆ ಮರಳಿರುವುದಾಗಿಯೂ ತಿಳಿಸಿದೆ. ಈ ಮೂಲಕ ದೇಶದಲ್ಲಿ ಗುಣಮುಖ ಪ್ರಮಾಣ ಶೇ.42.45ಕ್ಕೇರಿದೆ. ಒಂದೇ ದಿನದ ಅವಧಿಯಲ್ಲಿ ಮೃತಪಟ್ಟ 170 ಮಂದಿಯ ಪೈಕಿನವರು ಮಹಾರಾಷ್ಟ್ರದವರು.

ಅಗತ್ಯ ಔಷಧಗಳ ಹೋಂ ಡೆಲಿವರಿ
ಕಂಟೈನ್‌ಮೆಂಟ್‌ ವಲಯಗಳಲ್ಲಿ ಕ್ಯಾಲ್ಸಿಯಂ, ಐರನ್‌ /ಫಾಲಿಕ್‌ ಆ್ಯಸಿಡ್‌ ಮತ್ತು ಝಿಂಕ್‌ ಮಾತ್ರೆ ಸೇರಿದಂತೆ ಅತ್ಯವಶ್ಯಕ ಔಷಧಗಳನ್ನು ಮನೆ ಬಾಗಿಲಿಗೆ ತಲುಪಿಸಲು ವ್ಯವಸ್ಥೆ ಮಾಡುವ ಮೂಲಕ ಬಾಣಂತಿಯರು ಮತ್ತು ನವಜಾತ ಶಿಶುಗಳ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗಬೇಕು ಎಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರಕಾರ ಸಲಹೆ ನೀಡಿದೆ.

ಬುಧವಾರ ಬಿಡುಗಡೆ ಮಾಡಲಾದ ಮಾರ್ಗಸೂಚಿಯಲ್ಲಿ ಈ ಅಂಶವನ್ನು ಪ್ರಸ್ತಾಪಿಸಲಾಗಿದೆ. ಜತೆಗೆ, ವಿಟಮಿನ್‌ ಎ ಪ್ರೊಫೈಲಾಕ್ಸಿಸ್‌ ಯೋಜನೆ, ಅತಿಸಾರ ನಿಯಂತ್ರಣ ಅಭಿಯಾನ, ರಾಷ್ಟ್ರೀಯ ಜಂತುಹುಳ ನಿವಾರಣೆ ದಿನ, ಅನಿಮಿಯಾ ಶಿಬಿರ ಮುಂತಾದ ಅಭಿಯಾನಗಳಿಗೆ ಪರ್ಯಾಯವಾಗಿ, ಇವುಗಳಿಗೆ ಸಂಬಂಧಿಸಿದ ಔಷಧಗಳನ್ನೂ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದೂ ತಿಳಿಸಲಾಗಿದೆ.

ಲಾಕ್‌ಡೌನ್‌ ಬ್ರೇಕ್‌: ಸರಕಾರವು ರಾಷ್ಟ್ರವ್ಯಾಪಿ ಲಾಕ್‌ ಡೌನ್‌ ಘೋಷಿಸಿರುವುದರಿಂದ ಸಾಕಷ್ಟು ಅನುಕೂಲವಾಗಿದೆ. ಸೋಂಕಿನ ವ್ಯಾಪಿಸುವಿಕೆಯ ವೇಗಕ್ಕೆ ಅದು ಬ್ರೇಕ್‌ ಹಾಕಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ದೇಶಾದ್ಯಂತ ನಿರ್ಬಂಧ ಹೇರಿದ ಕಾರಣಕ್ಕಾಗಿ, ಭಾರೀ ಸಂಖ್ಯೆಯ ಸಾವು ಹಾಗೂ ಸೋಂಕು ಪ್ರಕರಣಗಳು ತಪ್ಪಿವೆ.

ಅಲ್ಲದೆ, ಈ ಅವಧಿಯಲ್ಲಿ, ಕೋವಿಡ್ ಕೇಂದ್ರಿತ ಆರೋಗ್ಯ ಮೂಲಸೌಕರ್ಯ ನಿರ್ಮಾಣ, ಆನ್‌ ಲೈನ್‌ ತರಬೇತಿ, ವೆಬಿನಾರ್‌ ಗಳ ಮೂಲಕ ಮಾನವ ಸಂಪನ್ಮೂಲದ ಸಾಮರ್ಥ್ಯ ವೃದ್ಧಿ, ಪರೀಕ್ಷಾ ಸಾಮರ್ಥ್ಯ ಹೆಚ್ಚಳ, ರೋಗಪತ್ತೆ ಕೇಂದ್ರಗಳ ಏರಿಕೆ, ಔಷಧಗಳ ಪ್ರಯೋಗ, ಲಸಿಕೆ ಸಂಶೋಧನೆ ಮತ್ತಿತರ ಕೆಲಸಗಳನ್ನೂ ಮಾಡಲು ಸಾಧ್ಯವಾಯಿತು ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವಾಲಯ ಬುಧವಾರ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next