Advertisement

ಕೊರೊನಾ ಅಧಿಸೂಚಿತ ವಿಪತ್ತು: ಕೇಂದ್ರ ಘೋಷಣೆ

12:09 AM Mar 21, 2020 | Sriram |

ಹೊಸದಿಲ್ಲಿ: ತ್ವರಿತಗತಿಯಲ್ಲಿ ವ್ಯಾಪಿಸುತ್ತಿರುವ ಮಾರಣಾಂತಿಕ ಕೊರೊನಾ ಸೋಂಕನ್ನು “ಅಧಿ ಸೂಚಿತ ವಿಪತ್ತು’ ಎಂದು ಕೇಂದ್ರ ಸರಕಾರ ಶನಿವಾರ ಘೋಷಿಸಿದೆ. ಜಗತ್ತನ್ನೇ ಬೆಚ್ಚಿಬೀಳಿಸಿರುವ ಕೋವಿಡ್‌-19 ಭಾರತದಲ್ಲಿ ಎರಡು ಜೀವಗಳನ್ನು ಬಲಿ ಪಡೆದ‌ ಬೆನ್ನಲ್ಲೇ ಈ ಮಹತ್ವದ ಘೋಷಣೆ ಹೊರಬಿದ್ದಿದೆ.

Advertisement

“ಅಧಿಸೂಚಿತ ವಿಪತ್ತು’ ಎಂದು ಘೋಷಿಸಿರುವ ಕಾರಣ ಎಲ್ಲ ರೀತಿಯ ನೆರವು ಒದಗಿಸಲು ಮತ್ತು ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಲು ರಾಜ್ಯ ವಿಪತ್ತು ನಿರ್ವಹಣ ನಿಧಿ (ಎಸ್‌ಡಿಆರ್‌ಎಫ್) ಬಳಸಿಕೊಳ್ಳಲಾಗುತ್ತದೆ ಎಂದು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಎಸ್‌ಡಿಆರ್‌ಎಫ್ನಡಿ ರಾಜ್ಯ ಎಕ್ಸಿಕ್ಯೂಟಿವ್‌ ಸಮಿತಿ ರಚಿಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸರಕಾರ ಸೂಚಿಸಿದೆ. ಸಾವಿಗೆ ಕಾರಣವೇನು ಎಂಬ ಬಗ್ಗೆ ಅಧಿಕೃತ ಪ್ರಮಾಣ ಪತ್ರವನ್ನು ಒದಗಿಸಿದರೆ ಅಂಥವರಿಗೆ (ಪರಿಹಾರ ಕಾರ್ಯದಲ್ಲಿ ಒಳಗೊಂಡವರೂ ಸೇರಿದಂತೆ) ಪರಿಹಾರ ನೀಡಲಾಗುವುದು ಎಂದು ತಿಳಿಸಲಾಗಿದೆ.

ಸೋಂಕು ಪೀಡಿತರ ಸಂಖ್ಯೆ 88ಕ್ಕೆ
ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಶನಿವಾರ 84ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇವರೊಂದಿಗೆ ಸಂಪರ್ಕ ಇದ್ದ 4 ಸಾವಿರಕ್ಕೂ ಅಧಿಕ ಮಂದಿ ಮೇಲೆ ನಿಗಾ ಇರಿಸಲಾಗಿದೆ ಎಂದಿದೆ. ಇದೇ ವೇಳೆ ಸೋಂಕು ಪ್ರಸರಣ ನಿಗ್ರಹಿಸುವುದಕ್ಕಾಗಿ ದೇಶದ ಎಲ್ಲ ಭೂಗಡಿಗಳನ್ನು ಮುಚ್ಚಲು ಕೇಂದ್ರ ಕ್ರಮ ಕೈಗೊಂಡಿದೆ.

ಪದ್ಮ ಪ್ರದಾನ ಮುಂದೂಡಿಕೆ
ಕೊರೊನಾ ಭೀತಿಯಿಂದಾಗಿ ಬಹುತೇಕ ರಾಜ್ಯ ಗಳು ಲಾಕ್‌ಡೌನ್‌ ಆಗಿ ಪ್ರಮುಖ ಸಭೆ, ಸಮಾರಂಭ ಗಳು ರದ್ದಾಗುತ್ತಿದ್ದಂತೆ ಎ.3ರ ಪದ್ಮ ಪ್ರಶಸ್ತಿ ಪ್ರದಾನ ಕಾರ್ಯ ಕ್ರಮವನ್ನೂ ಮುಂದೂಡಲಾಗಿದೆ.

Advertisement

ಮೋದಿ ಸಲಹೆಗೆ ಪಾಕ್‌ ಅಸ್ತು
ಕೊರೊನಾ ಪ್ರಸರಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರ್ಕ್‌ ರಾಷ್ಟ್ರಗಳ ನಾಯಕರು ವೀಡಿಯೋ ಕಾನ್ಫರೆನ್ಸ್‌ ಮೂಲಕ ಮಾತುಕತೆ ನಡೆಸಿ, ಸೂಕ್ತ ಕಾರ್ಯತಂತ್ರ ರೂಪಿಸಬೇಕಿದೆ ಎಂಬ ಪ್ರಧಾನಿ ಮೋದಿ ಸಲಹೆಗೆ ಪಾಕ್‌ ಕೂಡ ಒಪ್ಪಿಗೆ ಸೂಚಿಸಿದೆ. ಶನಿವಾರ ಈ ಕುರಿತು ಮೋದಿ ಸಲಹೆ ನೀಡಿದ ಬೆನ್ನಲ್ಲೇ ಎಲ್ಲ ಸಾರ್ಕ್‌ ನಾಯಕರು ಇದನ್ನು ಸ್ವಾಗತಿಸಿದ್ದರು. ಶನಿವಾರ ಪಾಕ್‌ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ. ರವಿವಾರ ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ.

ದೇಶದಲ್ಲಿ ಮೂರನೇ ಬಲಿ?
ಮಹಾರಾಷ್ಟ್ರದ ಬುಲ್ದಾಣ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪೀಡಿತ 71 ವರ್ಷ ವಯಸ್ಸಿನ ವೃದ್ಧರೊಬ್ಬರು ಶನಿವಾರ ಕೊನೆಯುಸಿರೆಳೆದಿದ್ದಾರೆ. ಸೌದಿ ಅರೇಬಿಯಾದಿಂದ ಇತ್ತೀಚೆಗೆ ಮರಳಿದ್ದ ಅವರನ್ನು ನಿಗಾದಲ್ಲಿ ಇರಿಸಲಾಗಿತ್ತು. ಅಲ್ಲದೆ ಅವರು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದಲೂ ಬಳಲುತ್ತಿದ್ದರು. ಅವರಿಗೆ ಕೊರೊನಾ ಸೋಂಕು ದೃಢಪಟ್ಟಿಲ್ಲ. ಅದು ದೃಢವಾದರೆ ದೇಶದಲ್ಲಿ ಈ ಸೋಂಕಿಗೆ ಮೂವರು ಬಲಿಯಾದಂತಾಗಲಿದೆ.

ರಾಜ್ಯದಲ್ಲಿ ಶನಿವಾರ ನೋ ಪಾಸಿಟಿವ್‌
ಬೆಂಗಳೂರು: ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಶನಿವಾರ 11 ಮಂದಿ ಹೊಸ ಶಂಕಿತ ಕೊರೊನಾ ಪೀಡಿತರು ದಾಖಲಾಗಿದ್ದಾರೆ. ಒಟ್ಟು ಶಂಕಿತರ ಪೈಕಿ 11 ಮಂದಿ ವರದಿ ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ಮನೆಗೆ ತೆರಳಿದ್ದಾರೆ. ಸದ್ಯ ರಾಜ್ಯದ ವಿವಿಧ ಆಸ್ಪತ್ರೆ ಗಳಲ್ಲಿ ಐವರು ಕೊರೊನಾ ಪೀಡಿತರು ಮತ್ತು 27 ಶಂಕಿತರಿದ್ದಾರೆ. ಶನಿವಾರ ಹೊಸದಾಗಿ ಸೋಂಕು ದೃಢಪಟ್ಟಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್‌ ತಿಳಿಸಿದ್ದಾರೆ.

ಕಲಬುರಗಿ  ಕೊರೊನಾ ಬಂದಿ
ಕಲಬುರಗಿಯಲ್ಲಿ 76 ವರ್ಷದ ವೃದ್ಧ ಮೃತಪಟ್ಟ ಬಳಿಕ ಭಾರೀ ನಿಗಾ ವಹಿಸಲಾಗಿದೆ. ಜಿಲ್ಲಾಧಿಕಾರಿಗಳು ಹಲವು ಮುಂಜಾಗ್ರತ ಕ್ರಮ ಘೋಷಿಸಿದ್ದಾರೆ.
-ಅಗತ್ಯ ವಸ್ತುಗಳಿಗಾಗಿ ಮಾತ್ರ ಮನೆಯಿಂದ ಹೊರಬರಬೇಕು
-ಬಟ್ಟೆ-ಮದ್ಯದಂಗಡಿಗಳೂ ಬಂದ್‌
-ಅಗತ್ಯ ವಸ್ತುಗಳನ್ನು ಖರೀದಿಸಿದ ತತ್‌ಕ್ಷಣ ಮನೆಗೆ ವಾಪಸಾಗಬೇಕು
-ಬೇರೆ ಜಿಲ್ಲೆಯ ಜನರ ಆಗಮನ ತಪ್ಪಿ ಸಲು ಸಾರಿಗೆ ಸಂಸ್ಥೆಯ ಬಸ್‌ ಸಂಚಾರ ಕಡಿತ
-ಕೆಲವು ಸರಕಾರಿ ಸೇವೆಗಳೂ ತಾತ್ಕಾಲಿಕವಾಗಿ ಸ್ಥಗಿತ
-ಮೃತಪಟ್ಟ ವ್ಯಕ್ತಿಯ ಮಗನ ಸಂದರ್ಶನ ಮಾಡಿದ ಮೂವರು ಪತ್ರಕರ್ತರ ಮೇಲೂ ನಿಗಾ

Advertisement

Udayavani is now on Telegram. Click here to join our channel and stay updated with the latest news.

Next