Advertisement

ಜಗತ್ತಿಗೆ ಔಷಧ ಅಂಗಡಿಯಾದ ಭಾರತ!

01:51 PM Jun 22, 2020 | sudhir |

ಬೀಜಿಂಗ್‌: ಕೋವಿಡ್‌ ಸಂದರ್ಭದಲ್ಲಿ ಔಷಧ ಅಂಗಡಿಯ ರೀತಿ ಭಾರತ ರೂಪು ತಳೆದಿದ್ದು, ಹಲವಾರು ದೇಶಗಳಿಗೆ ಔಷಧಗಳನ್ನು ಪೂರೈಸುತ್ತಿದೆ. ಈ ಮಾತನ್ನು ಶಾಂಘೈ ಸಹಕಾರ ಸಂಸ್ಥೆಯ ಮುಖ್ಯ ಕಾರ್ಯದರ್ಶಿ ವ್ಲಾಡಿಮಿರ್‌ ನೊರೋವ್‌ ಹೇಳಿದ್ದಾರೆ.

Advertisement

ಕೋವಿಡ್‌ ಸಂದರ್ಭದಲ್ಲಿ ಭಾರತ 133 ರಾಷ್ಟ್ರಗಳಿಗೆ ವಿವಿಧ ಔಷಧಗಳನ್ನು ಪೂರೈಸಿದೆ. ಈ ಮೂಲಕ ಕೋವಿಡ್‌ ಸೇರಿದಂತೆ ಇತರ ಅಗತ್ಯಗಳಿಗೆ ಔಷಧ ಪೂರೈಕೆಯ ಪ್ರಮುಖ ಕೇಂದ್ರವಾಗಿದೆ. ಇದು ಭಾರತ ಪ್ರಮುಖ ಶಕ್ತಿ ಎಂಬುದನ್ನು ಸಾಕ್ಷೀಕರಿಸಿದೆ ಎಂದಿದ್ದಾರೆ.

ಇದರೊಂದಿಗೆ ಶಾಂಘೈ ಸಹಕಾರ ಸಂಸ್ಥೆಯ ಸಹವರ್ತಿ ದೇಶಗಳೊಂದಿಗೆ ಅದು ಕೋವಿಡ್‌ ನಿಯಂತ್ರಣಕ್ಕೆ ಕೆಲಸ ಮಾಡಿದ್ದು, ಪರಿಣಾಮಕಾರಿಯಾಗಿದೆ. ಭಾರತದ ಕಂಪೆನಿಗಳು, ಔಷಧ ಸಂಶೋಧಕರು ಕೋವಿಡ್‌ಗೆ ಔಷಧ ಶೋಧದಲ್ಲಿ ನಿರತರಾಗಿದ್ದು ಧನಾತ್ಮಕ ಫ‌ಲಿತಾಂಶದ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

ಎಸ್‌ಸಿಒದಲ್ಲಿ ಒಟ್ಟು ಎಂಟು ದೇಶಗಳಿದ್ದು ಬೀಜಿಂಗ್‌ನಲ್ಲಿ ಮುಖ್ಯ ಕಚೇರಿ ಹೊಂದಿದೆ. ಇದರಲ್ಲಿ ಚೀನ, ರಷ್ಯಾ, ಕಝಕಿಸ್ಥಾನ, ತಜಕಿಸ್ಥಾನ, ಉಜ್ಬೇಕಿಸ್ಥಾನ, ಪಾಕಿಸ್ಥಾನ, ಭಾರತ ಇವೆ. ಸದ್ಯ ಭಾರತ ಜನೆರಿಕ್‌ ಔಷಧ ಉತ್ಪಾದಿಸುವ ಅತಿ ದೊಡ್ಡ ದೇಶವಾಗಿದ್ದು, ವಿಶ್ವದ ಶೇ.20ರಷ್ಟು ಔಷಧವನ್ನು ಪೂರೈಸುತ್ತದೆ. ಜತೆಗೆ ವಿವಿಧ ಲಸಿಕೆಗಳ ಬೇಡಿಕೆಯಲ್ಲಿ ಶೇ.60ರಷ್ಟನ್ನು ಪೂರೈಸುವ ರಾಷ್ಟ್ರವಾಗಿದೆ.

ತುರ್ತು ಅಗತ್ಯವಿದ್ದಲ್ಲಿ ವಿವಿಧ ದೇಶಗಳು ಔಷಧಕ್ಕಾಗಿ ಭಾರತವನ್ನೇ ಸಂಪರ್ಕಿಸುತ್ತವೆ ಮತ್ತು ಅದರ ನೆರವನ್ನು ಎದುರು ನೋಡುತ್ತವೆ. ಅದರಂತೆ ಕೋವಿಡ್‌ನ‌ಂತಹ ತುರ್ತು ಸಂದರ್ಭದಲ್ಲಿ ಭಾರತ ವಿಶ್ವದ ಎಲ್ಲ ದೇಶಗಳಿಗೆ ತುರ್ತು ಅಗತ್ಯದ ಔಷಧದೊಂದಿಗೆ ವಿವಿಧ ಔಷಧಗಳನ್ನು ಪೂರೈಸಿ ಅವುಗಳ ಬೆನ್ನಿಗೆ ನಿಂತಿರುವುದು ಆದರ್ಶಪ್ರಾಯವಾಗಿದೆ. ಶಾಂಘೈ ಸಹಕಾರದ ದೇಶಗಳಿಗೂ ಅದು ಔಷಧಗಳನ್ನು ಪೂರೈಸಿದೆ. ಎಸ್‌ಸಿಒದಲ್ಲಿ ಭಾರತ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರವಾದ ಬಳಿಕ ವಿವಿಧ ದೇಶಗಳೊಂದಿಗೆ ಅದರ ಸಹಕಾರ-ಸಹಾಯ ಹಸ್ತದ ಪ್ರಮಾಣವೂ ಹೆಚ್ಚಾಗಿದೆ ಎಂದು ನೊರೋವ್‌ ಹೇಳಿದ್ದಾರೆ.

Advertisement

ಕೋವಿಡ್‌ ಸೋಂಕು ವಿಶ್ವದಲ್ಲಿ ಹರಡುತ್ತಿದ್ದಂತೆ ಮೊದಲ ಹಂತದಲ್ಲಿ ಭಾರತ 13 ದೇಶಗಳಿಗೆ ತುರ್ತು ಔಷಧ ರವಾನಿಸಿತ್ತು. 1969ರಲ್ಲಿ ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ಔಷಧ ಕಂಪೆನಿಗಳ ಪಾಲು ಶೇ.5ರಷ್ಟಿದ್ದರೆ, 2020ರಲ್ಲಿ ಇದು ಶೇ.15ರಷ್ಟಕ್ಕೇರಿದೆ. ಐರೋಪ್ಯ ಒಕ್ಕೂಟ, ಅಮೆರಿಕ, ಲ್ಯಾಟಿನ್‌ ಅಮೆರಿಕ, ಆಫ್ರಿಕಾ, ಮಧ್ಯಪ್ರಾಚ್ಯಗಳಿಗೆ ಗರಿಷ್ಠ ಮಟ್ಟದಲ್ಲಿ ಔಷಧಗಳನ್ನು ಭಾರತದ ವಿವಿಧ ಕಂಪೆನಿಗಳು ಪೂರೈಸುತ್ತಿವೆ. ಔಷಧ ಸಂಶೋಧನೆಯಲ್ಲೂ ಕಂಪೆನಿಗಳು ಮುಂದಿದ್ದು, ಕೋವಿಡ್‌ ಔಷಧ ಸಂಶೋಧನೆಯಲ್ಲಿ 10ಕ್ಕೂ ಹೆಚ್ಚು ಕಂಪೆನಿಗಳು ತೊಡಗಿಸಿಕೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next