Advertisement

ಲಾಕ್‌ಡೌನ್‌ನಲ್ಲೂ ರೈತರ 2.75 ಕೋ.ರೂ. ವಹಿವಾಟು!

01:40 AM Jul 20, 2020 | Hari Prasad |

ಮುಂಬಯಿ: ಲಾಕ್‌ಡೌನ್‌ ಸಂಕಷ್ಟದ ನಡುವೆ ಮಹಾರಾಷ್ಟ್ರದಲ್ಲಿ ರೈತರ ತಂಡವೊಂದು ಕಳೆದ ನಾಲ್ಕು ತಿಂಗಳಲ್ಲಿ ಹಣ್ಣು-ತರಕಾರಿಗಳನ್ನು ಮಾರಾಟ ಮಾಡಿ 2.75 ಕೋಟಿ ರೂ. ವಹಿವಾಟು ನಡೆಸಿದೆ.

Advertisement

11 ರೈತರು ಜತೆಗೂಡಿ ಫೇಸ್‌ಬುಕ್‌, ವಾಟ್ಸ್‌ ಆ್ಯಪ್ ನಂಥ ಸಾಮಾಜಿಕ ಜಾಲತಾಣಗಳನ್ನೇ ಪರಿಣಾಮಕಾರಿಯಾಗಿ ಬಳಸಿಕೊಂಡು ತಮ್ಮ ಫ‌ಸಲನ್ನು ಸುತ್ತಮುತ್ತಲಿನ ಪಟ್ಟಣಗಳಿಗೆ ಲಾಭದಾಯಕವಾಗಿ ಮಾರಿದ್ದಾರೆ.

ಅತೀ ಹೆಚ್ಚು ಪ್ರಕರಣಗಳಿರುವ ಮಹಾರಾಷ್ಟ್ರದಲ್ಲೇ ರೈತರ ಈ ವಿನೂತನ ಪ್ರಯತ್ನ ಯಶಸ್ವಿಯಾಗಿರುವುದು ಮಾದರಿಯಾಗಿದೆ.

ನಿರ್ಬಂಧವೇ ವರವಾಯಿತು
ಮಾರ್ಚ್‌ನಲ್ಲಿ ರಾಷ್ಟ್ರಾದ್ಯಂತ ಲಾಕ್‌ಡೌನ್‌ ಘೋಷಣೆಯಾದಾಗ ಪುಣೆಯ ಯುವ ರೈತ ಮನೀಶ್‌ ಮೋರೆಗೆ ತಾನು ಬೆಳೆದ ತರಕಾರಿ ಮಾರಾಟವಾಗದೆ ಇದ್ದರೆ ಎನ್ನುವ ಆತಂಕ ಹುಟ್ಟಿತು.

ಆಗ ರೈತರ ವಾಟ್ಸ್ ‌ಆ್ಯಪ್‌ ಗುಂಪಿನಲ್ಲಿ ಚರ್ಚೆ ನಡೆಸಿದರು. ಮುಂಬಯಿಯಲ್ಲಿದ್ದ ಸಂಬಂಧಿಕರು, ಸ್ನೇಹಿತರನ್ನು ಸಂಪರ್ಕಿಸಿ ಪರಿಸ್ಥಿತಿ ತಿಳಿಸಿದರು. ಅಷ್ಟರಲ್ಲಿ ಕೋವಿಡ್ 19 ಭಯದಿಂದ ತರಕಾರಿ- ಹಣ್ಣುಗಳ ಕೊರತೆ ಆರಂಭವಾಗಿತ್ತು.

Advertisement

ಮನೀಶ್‌ ಮೊದಲ ಬಾರಿ ಎ. 9ರಂದು 60 ಬಾಕ್ಸ್‌ ಹಣ್ಣು- ತರಕಾರಿಗಳನ್ನು ಕಳುಹಿಸಿಕೊಟ್ಟರು. ಅನಂತರ ಈ ಪ್ರಯತ್ನಕ್ಕೆ ಪ್ರಚಾರ ಸಿಕ್ಕಿ, ದೊಡ್ಡ ಮಟ್ಟದಲ್ಲಿ ಬೇಡಿಕೆ ಬಂತು.

ಸಾಧನೆ ಬಗ್ಗೆ ಸಂತೃಪ್ತಿ
ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ರೈತರಾದ ಶ್ರೀಕಾಂತ್‌ ದೋಕ್‌ವಾಲೆ, ಈ ನಾಲ್ಕು ತಿಂಗಳಲ್ಲಿ ನಾವು ಕೃಷಿ ಉತ್ಪನ್ನಗಳ ನೇರ ಮಾರ್ಕೆಟಿಂಗ್‌ ಬಗ್ಗೆಯೂ ಬಹಳ ತಿಳಿದಂತಾಗಿದೆ ಎಂದು ಹೇಳಿದ್ದಾರೆ.

ಸಾಂಘಿಕ ಪ್ರಯತ್ನಕ್ಕೆ ಸಂದ ಜಯ
ಮನೀಶ್‌ ತನ್ನ ಜತೆ 11 ರೈತರನ್ನು ಸೇರಿಸಿ ಗುಂಪು ಕಟ್ಟಿದರು. ಬೆಳೆದದ್ದನ್ನೆಲ್ಲ ಒಂದೇ ನೆಟ್‌ವರ್ಕ್‌ ಮೂಲಕ ಮಾರಾಟ ಮಾಡಿದರು. ಈಗ ಅವರು ತಮ್ಮದೇ ಆದ ರೈತ ಉತ್ಪಾದಕ ಕಂಪೆನಿ ಸ್ಥಾಪಿಸಿ ಹಣ್ಣು, ತರಕಾರಿಗಳ ಜತೆಗೆ ದಿನಸಿ ಪದಾರ್ಥಗಳನ್ನೂ ಗ್ರಾಹಕರ ಬಾಗಿಲಿಗೆ ತಲುಪಿಸುತ್ತಿದ್ದಾರೆ.

ಈಗ ಕಿಸಾನ್‌ ಕನೆಕ್ಟ್ ಎಂಬ ಈ ಕಂಪೆನಿಯಲ್ಲಿ 480 ರೈತರಿದ್ದಾರೆ. ಕೋವಿಡ್ 19 ಪರಿಣಾಮವಾಗಿ ನಗರಗಳನ್ನು ಬಿಟ್ಟು ಬಂದ ಯುವಕರು ಕೃಷಿಕರಾದ ತಮ್ಮ ಹೆತ್ತವರಿಗೆ ತಂತ್ರಜ್ಞಾನದ ಮೂಲಕ ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವುದನ್ನು ಹೇಳಿಕೊಟ್ಟು ನೆರವಾಗುತ್ತಿದ್ದಾರೆ. ಈಗ ದೇಶದ ಇತರ ಭಾಗಗಳಿಗೂ ಕಿಸಾನ್‌ ಕನೆಕ್ಟ್ ಉತ್ಪನ್ನಗಳು ರವಾನೆಯಾಗುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next