ರಾಂಚಿ: ಕೋವಿಡ್ 19 ಎರಡನೇ ಅಲೆ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಹೇಮಂತ್ ಸೋರೆನ್ ನೇತೃತ್ವದ ಜಾರ್ಖಂಡ್ ಸರ್ಕಾರ ಕೋವಿಡ್ ಲಾಕ್ ಡೌನ್ ಅನ್ನು ಕೆಲವೊಂದು ಸಡಿಲಿಕೆಯೊಂದಿಗೆ ಜೂನ್ 16ರವರೆಗೆ ವಿಸ್ತರಿಸುವುದಾಗಿ ಬುಧವಾರ(ಜೂನ್ 09) ತಿಳಿಸಿದ್ದಾರೆ.
ಇದನ್ನೂ ಓದಿ:ಕೇರಳ ಪ್ರದೇಶ್ ಕಾಂಗ್ರೆಸ್ ಸಮಿತಿಗೆ ಕೆ. ಸುಧಾಕರನ್ ಸಾರಥ್ಯ..!
ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಐದು ಬಾರಿ ನಿರ್ಬಂಧಗಳನ್ನು ಜಾರಿಗೊಳಿಸಲಾಗಿತ್ತು. ರಾಜ್ಯದಲ್ಲಿ ಏಪ್ರಿಲ್ 22ರಂದು ಮೊದಲ ಬಾರಿ ಒಂದು ವಾರಗಳ ಕಾಲ ನಿರ್ಬಂಧ ಜಾರಿಗೊಳಿಸಿ ನಂತರ ವಿಸ್ತರಿಸಲಾಗಿತ್ತು.
ಪ್ರಸ್ತುತ ಕೋವಿಡ್ ಲಾಕ್ ಡೌನ್ ಜೂನ್ 10ರಂದು ಕೊನೆಗೊಳ್ಳಲಿದೆ. ಮುಖ್ಯಮಂತ್ರಿ ಹೇಮಂತ್ ಸೋರೆನ್ ಅಧ್ಯಕ್ಷತೆಯಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಕೋವಿಡ್ ನಿರ್ಬಂಧ ಮುಂದುವರಿಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿರುವುದಾಗಿ ವರದಿ ಹೇಳಿದೆ.
23 ಜಿಲ್ಲೆಗಳಲ್ಲಿ ಬೆಳಗ್ಗೆ 6ಗಂಟೆಯಿಂದ ಸಂಜೆ 4ಗಂಟೆವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ಸೇರಿದಂತೆ ಕೆಲವೊಂದು ನಿರ್ಬಂಧ ಸಡಿಲಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಶೆಡ್ ಪುರ ಅತೀ ಹೆಚ್ಚು ಕೋವಿಡ್ ಸಾವಿನ ಪ್ರಕರಣಕ್ಕೆ ಸಾಕ್ಷಿಯಾಗಿದ್ದು, ಇಲ್ಲಿ ಅಂಗಡಿಗಳನ್ನು ಬೆಳಗ್ಗೆ 6ಗಂಟೆಯಿಂದ ಮಧ್ಯಾಹ್ನ 2ಗಂಟೆವರೆಗೆ ತೆರೆಯಲು ಅನುಮತಿ ನೀಡಲಾಗಿದೆ ಎಂದು ವರದಿ ತಿಳಿಸಿದೆ.