Advertisement

ಪುತ್ತೂರು: ಜನತಾ ಕರ್ಫ್ಯೂವಿಗೆ ಭಾರೀ ಜನ ಸ್ಪಂದನೆ ; ತಾಲೂಕು ಸಂಪೂರ್ಣ ಲಾಕ್ ಡೌನ್

11:13 AM Mar 27, 2020 | Naveen |

ಪುತ್ತೂರು: ಕೋವಿಡ್ 19 ವೈರಸ್ ನಿಯಂತ್ರಣದ ಮುಂಜಾಗರೂಕತಾ ಕ್ರಮವಾಗಿ ಪಧಾನಿ ನರೇಂದ್ರ ಮೋದಿಯವರು ಕರೆ ನೀಡಿದ ಜನತಾ ಕರ್ಫ್ಯೂವಿಗೆ ತಾಲೂಕಿನಾದ್ಯಂತ ಜನತೆಯಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈ ಮೂಲಕ ಪುತ್ತೂರು ಇತಿಹಾಸದಲ್ಲಿ ಪ್ರಥಮ ಬಾರಿಗೆ ಸಂಪೂರ್ಣ ಜನಜೀವನ ಸ್ತಬ್ಧಗೊಂಡಿತು.

Advertisement

ದಿನವಿಡೀ ಗಿಜಿಗಿಡುವ ಮಾಣಿ -ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ಅತಿ ವಿರಳ ವಾಹನಗಳ ಸಂಚಾರ ಕಂಡುಬಂತು. ಪುತ್ತೂರು ನಗರವಂತೂ ಸಂಪೂರ್ಣ ಸ್ತಬ್ಧಗೊಂಡು ಹಿಂದೆಂದೂ ಕಂಡಿರದ ಬಂದ್ ಆಚರಣೆಗೆ ಸಾಕ್ಷಿಯಾಯಿತು.

ಸ್ವಯಂ ಜಾಗೃತಿ
ಕೋವಿಡ್ 19 ಭೀತಿಯ ಮಧ್ಯೆ ಅನಿವಾರ್ಯ ಕರ್ತವ್ಯದಲ್ಲಿರುವ ಆರೋಗ್ಯ ಇಲಾಖೆ ಸಿಬಂದಿ, ಇಲಾಖೆಗಳ ಅಧಿಕಾರಿಗಳು, ಆಸ್ಪತ್ರೆಯ ವೈದ್ಯರು ಮತ್ತು ಸಿಬಂದಿ, ಪತ್ರಕರ್ತರನ್ನು ಹೊರತುಪಡಿಸಿ ಉಳಿಕೆ ಜನ ಸಮುದಾಯ ಕೋವಿಡ್ 19 ಜಾಗೃತಿ ಪ್ರಕ್ರಿಯೆಯ ಸ್ವಯಂ ಕರ್ಫ್ಯೂಗೆ ಒಳಪಟ್ಟು ಮುನ್ನೆಚ್ಚರಿಕೆ ಕ್ರಮ ಅನುಸರಿಸಿದರು. ನಗರ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲೂ ಜನ, ವಾಹನಗಳ ಸಂಚಾರ ವಿರಳವಾಗಿತ್ತು.

Advertisement

ಎಲ್ಲವೂ ಬಂದ್
ದೇವಾಲಯಗಳು, ಚರ್ಚ್, ಮಸೀದಿ, ಆಸ್ಪತ್ರೆಗಳು, ಪೆಟ್ರೋಲ್ ಪಂಪ್, ಹೊಟೇಲ್, ಮೆಡಿಕಲ್ ಶಾಪ್‌ಗಳು, ಚಿತ್ರಮಂದಿರ, ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳು, ವಸ್ತ್ರ ಮಳಿಗೆಗಳು, ತೆರೆದ ಸಂತೆ ವ್ಯಾಪಾರ, ವಿವಾಹ -ಸಭಾ ಮಂಟಪಗಳು, ಸಾರಿಗೆ ವ್ಯವಸ್ಥೆ, ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ವೈನ್ ಶಾಪ್‌ಗಳು, ಶಾಲಾ – ಕಾಲೇಜುಗಳು, ಸರಕಾರಿ ಹಾಗೂ ಖಾಸಗಿ ಕಚೇರಿಗಳು ಸಂಪೂರ್ಣ ಬಂದ್ ಆಗಿದ್ದವು.

ಬಸ್ ನಿಲ್ದಾಣ ಖಾಲಿ
ಪ್ರಥಮ ಬಾರಿಗೆ ಎಂಬಂತೆ ಪುತ್ತೂರಿನ ಬೃಹತ್ ಬಸ್ ನಿಲ್ದಾಣ ರವಿವಾರ ಸಂಪೂರ್ಣ ಬಂದ್ ಆಗಿತ್ತು. ಅಧಿಕಾರಿಗಳನ್ನು ಹೊರತುಪಡಿಸಿದರೆ ಯಾವುದೇ ಕೆ.ಎಸ್‌.ಆರ್‌.ಟಿ.ಸಿ. ಬಸ್ಸುಗಳು ಇರಲಿಲ್ಲ ಹಾಗೂ ಪ್ರಯಾಣಿಕರೂ ಇರಲಿಲ್ಲ. ಬಸ್ ಸಂಚಾರದ ಅನೌನ್ಸ್ಮೆಂಟ್ ಬದಲು ಕೋವಿಡ್ 19 ವೈರಸ್ ಜಾಗೃತಿ ವಾಣಿ ಮೈಕ್ ಮೂಲಕ ಪ್ರಸಾರವಾಗುತ್ತಿತ್ತು.

ಬಸ್‌ಗಳ ಆಗಮನ ಮತ್ತು ನಿರ್ಗಮನ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಶನಿವಾರ ರಾತ್ರಿ ತೆರಳಿದ ಬಸ್ಸುಗಳು ಅಂತಿಮ ಸ್ಟಾಪ್‌ನಲ್ಲಿ ನಿಲುಗಡೆಗೊಂಡು ಸೋಮವಾರ ಬೆಳಗ್ಗಿನಿಂದ ಸಂಚಾರ ಆರಂಭಿಸಲಿವೆ. ಉಳಿಕೆ ಬಸ್ಸುಗಳನ್ನು ಮುಕ್ರಂಪಾಡಿಯ ಕೆ.ಎಸ್‌.ಆರ್‌.ಟಿ.ಸಿ. ಡಿಪೋದಲ್ಲಿ ನಿಲುಗಡೆ ವ್ಯವಸ್ಥೆ ಮಾಡಲಾಗಿತ್ತು.

ಖಾಸಗಿಯೂ ಇಲ್ಲ
ಖಾಸಗಿ ಬಸ್ಸುಗಳು, ಟೂರಿಸ್ಟ್ ವಾಹನಗಳು, ಅಟೋ ರಿಕ್ಷಾಗಳೂ ಕೂಡ ರವಿವಾರ ಸಂಚಾರ ನಡೆಸಲಿಲ್ಲ. ಅಟೋ ರಿಕ್ಷಾಗಳು ಪುತ್ತೂರು ನಗರದ ಪ್ರಧಾನ ಸಂಚಾರ ವ್ಯವಸ್ಥೆ ಆಗಿದ್ದರೂ ಸಂಘಟನಗಳು ನೀಡಿದ ಕರೆ ಹಾಗೂ ಸ್ವಯಂ ಪ್ರೇರಣೆಯಿಂದ ಅಟೋ ರಿಕ್ಷಾಗಳು ರಸ್ತೆಗೆ ಇಳಿಯಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next