Advertisement

ಲಸಿಕೆ ಒಡೆಯ ಯಾರು? ಅಮೆರಿಕ-ಚೀನ ಪೈಪೋಟಿ

10:53 AM May 09, 2020 | sudhir |

ನ್ಯೂಯಾರ್ಕ್‌: ಕೋವಿಡ್ ವೈರಸ್‌ನ ಮೂಲ ಯಾವುದು ಎಂಬ ವಿಚಾರದಲ್ಲಿ ಚೀನದ ವಿರುದ್ಧ ಕೆಂಡ ಕಾರುತ್ತಲೇ ಬಂದಿರುವ ಅಮೆರಿಕ, ಈಗ ಲಸಿಕೆ ಅಭಿವೃದ್ಧಿಪಡಿಸಿರುವ ವಿಚಾರದಲ್ಲಿ ಚೀನದೊಂದಿಗೆ ಪೈಪೋಟಿಗಿಳಿದಿದೆ.

Advertisement

ಕೋವಿಡ್ ಗೆ ಮೊದಲು ಲಸಿಕೆ ಕಂಡು ಹಿಡಿಯುವವರು ಯಾರು ಎಂಬ ಪ್ರಶ್ನೆ ಮೂಡಿರುವಂತೆಯೇ, ಅಮೆರಿಕ ಮತ್ತು
ಚೀನದ ನಡುವೆ ಸ್ಪರ್ಧೆ ಆರಂಭವಾಗಿದೆ.

1961ರಲ್ಲಿ ಸೋವಿಯತ್‌ ಒಕ್ಕೂಟವು ಮೊದಲ ಗಗನಯಾತ್ರಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವಲ್ಲಿ ಯಶಸ್ವಿಯಾದಾಗ, ಆ ಸುದ್ದಿಯು ಅಮೆರಿಕಕ್ಕೆ ಸಿಡಿಲು ಬಡಿದಂತೆ ಭಾಸವಾಗಿತ್ತು. ಅದೇ ರೀತಿ, ಈಗ ಏನಾದರೂ ಚೀನ ಕೋವಿಡ್ ಗೆ ಲಸಿಕೆ ಕಂಡುಹಿಡಿಯುವಲ್ಲಿ ಯಶಸ್ವಿಯಾದರೆ, ಅಮೆರಿಕಕ್ಕೆ ಅದೇ ಮಾದರಿಯಲ್ಲಿ ಆಘಾತ ಉಂಟಾಗಲಿದೆ. ಹೀಗಾಗಿ, ಚೀನಕ್ಕೂ ಮೊದಲೇ ನಾವು ಲಸಿಕೆ ಅಭಿವೃದ್ಧಿಪಡಿಸಬೇಕು ಎಂದು ಜಿದ್ದಿಗೆ ಬಿದ್ದಿದ್ದಾರೆ ಅಮೆರಿಕ ಅಧ್ಯಕ್ಷ ಟ್ರಂಪ್‌.

ಆಪರೇಷನ್‌ ವಾರ್ಪ್‌ ಸ್ಪೀಡ್‌: ಈಗಾಗಲೇ ಚೀನವು ವ್ಯಾಪಾರದಿಂದ ಹಿಡಿದು 5ಜಿ ಸಂವಹನ ಜಾಲದವರೆಗೆ ಅಮೆರಿಕದ ಪ್ರಭಾವವನ್ನು ತಗ್ಗಿಸುತ್ತಾ ಬಂದಿದೆ. ಈಗ ಚೀನವೇನಾದರೂ ಲಸಿಕೆ ಕಂಡುಹಿಡಿದರೆ ಅದು ಅಮೆರಿಕದ ಪ್ರತಿಷ್ಠೆಯನ್ನು ಕೆಣಕಿದಂತೆಯೇ ಸರಿ. ಹೀಗಾಗಿ, ಟ್ರಂಪ್‌ ಅವರು ದೇಶದ ಫಾರ್ಮಾಸುಟಿಕಲ್‌ ಕಂಪೆನಿಗಳು, ಸರಕಾರಿ ಸಂಸ್ಥೆಗಳು, ಸೇನೆಯನ್ನು ಒಟ್ಟುಗೂಡಿಸಿ, ಆಪರೇಷನ್‌ ವಾರ್ಪ್‌ ಸ್ಪೀಡ್‌ ಎಂಬ ಹೆಸರಿನಲ್ಲಿ ಕಾರ್ಯಾಚರಣೆಗೆ ಕರೆಕೊಟ್ಟಿದ್ದಾರೆ.

ಭೌಗೋಳಿಕ ರಾಜಕೀಯದ ಭೀತಿ: ಈ ವಿಚಾರದಲ್ಲಿ ಜಾಗತಿಕ ಸಹಭಾಗಿತ್ವ ಇದ್ದರೆ ಒಳಿತು ಎಂದು ತಜ್ಞರು ಹೇಳುತ್ತಿದ್ದರೂ ಇತಿಹಾಸವನ್ನು ಗಮನಿಸಿದರೆ ಎಲ್ಲ ದೇಶಗಳಿಗೂ ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯ. ಮೊದಲು ಲಸಿಕೆ ಅಭಿವೃದ್ಧಿಪಡಿಸಿದ ದೇಶಕ್ಕೆ ಕೇವಲ ಆರ್ಥಿಕವಾಗಿ ಮಾತ್ರ ಲಾಭ ಇರುವುದಲ್ಲ, ಬದಲಿಗೆ ಅಂಥ ದೇಶವು ಜಗತ್ತಿನೆದುರು ತಾನು ತಂತ್ರಜ್ಞಾನದಲ್ಲಿ ಎಷ್ಟು ಬಲಶಾಲಿ ಎಂಬುದನ್ನು ತೋರಿಸಬಹುದು. ಚೀನವೇನಾದರೂ ಲಸಿಕೆ ಕಂಡುಹಿಡಿ ದರೆ, ಅದು ಆ ಲಸಿಕೆಯನ್ನೇ ಭೌಗೋಳಿಕ ರಾಜಕೀಯಕ್ಕೆ ಬಳಸಿಕೊಳ್ಳಬಹುದು ಎಂಬ ಆತಂಕ ಅಮೆರಿಕದ್ದು. ಚೀನದ ಸಂಶೋಧನಾ ಪ್ರಕ್ರಿಯೆಯು ಉಳಿದ ದೇಶಗಳಿಗೆ ಹೋಲಿಸಿದರೆ ಹೆಚ್ಚು ಸುಧಾರಿತವಾಗಿದೆ. ಟಿಯಾಂಜಿನ್‌ ಮೂಲದ ಕ್ಯಾನ್‌ ಸಿನೋ ಬಯಾಲಜಿಕ್ಸ್‌ ಎಂಬ ಕಂಪೆನಿಯ ಸಹಭಾಗಿತ್ವದಲ್ಲಿ ಚೀನದ ಅಕಾಡೆಮಿ ಆಫ್ ಮಿಲಿಟರಿ ಮೆಡಿಕಲ್‌ ಸೈನ್ಸಸ್‌ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಇನ್ನು, ರಷ್ಯಾದಲ್ಲಿ 4 ಲಸಿಕೆ ಯೋಜನೆ ಚಾಲ್ತಿಯಲ್ಲಿದ್ದರೆ, ಇಟಲಿ, ಇಸ್ರೇಲ…, ಯುಕೆ ಸೇರಿದಂತೆ ಹಲವು ದೇಶಗಳು ಕೂಡ ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ.

Advertisement

ಕೋವಿಡ್ : ಮಂಗನ ಮೇಲೆ ಲಸಿಕೆ ಪ್ರಯೋಗ ಯಶಸ್ವಿ
ಕೋವಿಡ್ ವೈರಾಣು ನಿಯಂತ್ರಣಕ್ಕೆ ಚೀನ ಕಂಡುಹಿಡಿದಿದ್ದ ಲಸಿಕೆ ಮೊದಲ ಬಾರಿಗೆ ಸಫ‌ಲತೆ ಕಂಡಿದೆ. ಬೀಜಿಂಗ್‌ನ ಸಿನೊವ್ಯಾಕ್‌ ಬಯೋಟೆಕ್‌ ಲ್ಯಾಬ್‌ನ ತಜ್ಞರು, ಭಾರತೀಯ ಮೂಲದ ರೀಸಸ್‌ ಮಕ್ಯಾಕ್‌ ಜಾತಿಯ ಕೋತಿ ಮೇಲೆ ಲಸಿಕೆ ಪ್ರಯೋಗಿಸಿತ್ತು. ಕೋವಿಡ್ ಸೋಂಕಿತ ಕೋತಿಯನ್ನು ವಾರ ದ ನಂತರ ಪರೀಕ್ಷಿಸಿದಾಗ, ವೈರಾಣುಗಳು ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದ್ದವು. ಕೋತಿಯ ದೇಹದಲ್ಲಿ ಪ್ರತಿ ಕಾಯಗಳು ಸಶಕ್ತವಾಗಿ ವೈರಾಣುಗಳನ್ನು ಮಣಿಸಿದ್ದವು. ಆದರೆ, ಲಸಿಕೆ ಪ್ರಯೋಗಿಸದ ಕೋತಿಗಳಲ್ಲಿ ನ್ಯುಮೋನಿಯಾ ಹೆಚ್ಚಾಗುವುದನ್ನು ತಜ್ಞರು ಗಮನಿಸಿದ್ದಾರೆ. ಈ ಲಸಿಕೆಯನ್ನು ಮನುಷ್ಯನ ಮೇಲೆ ಪ್ರಯೋ ಗಿಸಲು ಸಿದ್ಧತೆ ನಡೆದಿದೆ.

ಚೀನ ವಿರುದ್ಧ ಹೆಚ್ಚಿದೆ ಖಟ್ಲೆ
ಚೀನದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅಮೆರಿಕದ ಕೋರ್ಟ್‌ಗಳಲ್ಲಿ ಹೂಡ ಲಾಗಿರುವ ಮೊಕದ್ದಮೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮಿಯಾಮಿಯ ನ್ಯಾಯಾಲಯದಲ್ಲಿ 2, ಕ್ಯಾಲಿಪೋರ್ನಿ ಯಾ, ನೆವಡ, ಪೆನ್ಸಿಲ್ವೇನಿಯಾ ಹಾಗೂ ಟೆಕ್ಸಾಸ್‌ ನ್ಯಾಯಾಲಯಗಳಲ್ಲಿ ತಲಾ ಒಂದೊಂದು ಮೊಕದ್ದಮೆಗಳನ್ನು ಹೂಡ ಲಾಗಿದೆ. ಮಿಸೌರಿ ರಾಜ್ಯ ಕೂಡ ಈಗಾಗಲೇ ಪರಿಹಾರ ಕೋರಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದೆ. ಮಿಸಿಸಿಪ್ಪಿ, ಪ್ಲೋರಿ ಡಾಗಳು ಕೂಡ ಮೊಕದ್ದಮೆ ಹೂಡಲು ತಯಾರಿ ನಡೆಸಿವೆ.

ಟ್ರಂಪ್‌ಗೆ ಪ್ರತಿದಿನ ಕೋವಿಡ್ ಪರೀಕ್ಷೆ
ಮಿಲಿಟರಿ ಸಹಾಯಕನಿಗೆ ಕೋವಿಡ್ ಸೋಂಕು ಕಾಣಿಸಿಕೊಂಡ ಅನಂತರ ಪ್ರತಿದಿನ ತಾವು ಕೂಡ ಕೋವಿಡ್ ಪರೀಕ್ಷೆಗೆ ಒಳಪಡುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದಾರೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಖಾಸಗಿ ಭದ್ರತಾ ಸಹಾಯಕನಿಗೆ ಕೋವಿಡ್ ಸೋಂಕು ತಗುಲಿದ್ದು, ಆತನೊಂದಿಗೆ ಇವರು ತೀರಾ ಹತ್ತಿರದ ಸಂಪರ್ಕ ಹೊಂದಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಶ್ವೇತಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಟ್ರಂಪ್‌, “ಸುರಕ್ಷತೆ ದೃಷ್ಟಿಯಿಂದ ನಾನು, ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಮತ್ತು ಶ್ವೇತಭವನದ ಇತರ ಸಿಬಂದಿಗಳು ಪ್ರತಿದಿನ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳು ತ್ತಿದ್ದೇವೆ. ಎರಡು ಬಾರಿ ನೆಗೆಟಿವ್‌ ವರದಿ ಬಂದಿದೆ ‘ ಎಂದರು.

ವ್ಯಾಪಾರ ಒಪ್ಪಂದ ಜಾರಿಗೆ ಒಪ್ಪಿಗೆ
ಕೆಸರೆರೆಚಾಟದ ನಡುವೆಯೇ ಚೀನದ ಉಪಪ್ರಧಾನಿ ಲಿಯು ಅವರು ಶುಕ್ರವಾರ ಅಮೆರಿಕದ ವ್ಯಾಪಾರ ವ್ಯವಹಾರಗಳ ಪ್ರತಿನಿಧಿ ರಾಬರ್ಟ್‌ ಲೈಟ್‌ಜೈಜರ್‌ ಮತ್ತು ಹಣಕಾಸು ಕಾರ್ಯದರ್ಶಿ ಸ್ಟೀವನ್‌ ಮ್ಯೂಚಿನ್‌ ಜತೆ ದೂರವಾಣಿ ಮೂಲಕ ಚರ್ಚೆ ನಡೆಸಿದರು. ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಅನುಷ್ಠಾನಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸುವ ಮತ್ತು ಉಭಯ ರಾಷ್ಟ್ರಗಳ ನಡುವಿನ ಆರ್ಥಿಕ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಪರಸ್ಪರ ಸಹಕರಿಸುವ ಭರವಸೆ ನೀಡಿದರು ಎಂದು ಚೀನದ ವಾಣಿಜ್ಯ ಸಚಿವಾಲಯ ತಿಳಿಸಿದೆ. ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಜನವರಿಯಲ್ಲಿ ಸಹಿ ಹಾಕಿದ ಅನಂತರ ಇದೇ ಮೊದಲ ಬಾರಿಗೆ ಒಪ್ಪಂದ ಜಾರಿ ಕುರಿತು ಲಿಯು ಮತ್ತು ಲೈಟ್‌ಜೈಜರ್‌ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಒಪ್ಪಂದದ ಪ್ರಕಾರ ಪ್ರತಿ 6 ತಿಂಗಳಿಗೊಮ್ಮೆ ಉಭಯ ನಾಯಕರು ಮಾತುಕತೆ ನಡೆಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next