Advertisement

ನಿರಾಶ್ರಿತರ ಸಂಕಷ್ಟ ಹೆಚ್ಚಿಸಿದ ಕೋವಿಡ್‌-19 ಸೋಂಕು

01:31 AM Jul 06, 2020 | Sriram |

ಮಹಾನಗರ: ನಗರದ ವಿವಿಧೆಡೆ ಇರುವ ಅಶಕ್ತರು, ನಿರಾಶ್ರಿತರು, ಅನಾಥರು ಕೋವಿಡ್‌ದಿಂದಾಗಿ ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದು ಹೊತ್ತಿನ ತುತ್ತಿಗೂ ಪರದಾಡುವಂತಾಗಿದೆ. ಜತೆಗೆ ಕೋವಿಡ್‌-19 ಸೋಂಕು ಹರಡುವ ಆತಂಕವೂ ಹೆಚ್ಚಾಗಿದೆ.

Advertisement

ನಗರದ ನೆಹರೂ ಮೈದಾನ, ಪಾರ್ಕ್‌, ಬಸ್‌ ನಿಲ್ದಾಣ, ರೈಲು ನಿಲ್ದಾಣ, ಅಂಗಡಿ ಮುಂಗಟ್ಟು ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ ನಿರಾಶ್ರಿತರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ. ಕೋವಿಡ್‌-19 ಲಾಕ್‌ಡೌನ್‌ ಆರಂಭದ ದಿನಗಳಲ್ಲಿ ವಲಸೆ ಕಾರ್ಮಿಕರ ಜತೆಗೆ ಅವರಿಗೂ ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಈಗ ನಿರಾಶ್ರಿತರು ಮತ್ತೆ ಬೀದಿಗೆ ಬಂದಿದ್ದಾರೆ.

ಆಹಾರ ನೀಡುವವರೂ ಇಲ್ಲ
ಕೋವಿಡ್‌ದಿಂದಾಗಿ ನಗರದಲ್ಲಿ ಜನಸಂಚಾರ ಕಡಿಮೆ ಇದೆ. ಅಲ್ಲದೆ ಕೋವಿಡ್‌-19 ಭೀತಿಯಿಂದ ನಿರಾಶ್ರಿತರಿಗೆ ಅನ್ನಾಹಾರ ನೀಡುವುದಕ್ಕೂ ಜನ ಹಿಂಜರಿಯುತ್ತಿದ್ದಾರೆ. ಕಡಿಮೆ ಬೆಲೆಗೆ ಆಹಾರ ದೊರೆಯುತ್ತಿದ್ದ ಇಂದಿರಾ ಕ್ಯಾಂಟೀನ್‌, ಇತರ ಸಣ್ಣ ಕ್ಯಾಂಟೀನ್‌ಗಳು ಬಾಗಿಲು ಹಾಕಿಕೊಂಡಿವೆ. ಲಾಕ್‌ಡೌನ್‌ ಆರಂಭದಲ್ಲಿ ಸಂಘ -ಸಂಸ್ಥೆಯವರು, ಸಾಮಾಜಿಕ ಸೇವಾ ಕಾರ್ಯಕರ್ತರು ಊಟ, ತಿಂಡಿ ನೀಡುತ್ತಿದ್ದರು.
ಆದರೆ ಈಗ ಅಂತಹ ಯಾವುದೇ ಸೌಲಭ್ಯ ಇಲ್ಲದೆ ಅನಾಥರು, ಅಶಕ್ತರು, ಭಿಕ್ಷುಕರು ಮತ್ತೆ ತೊಂದರೆಗೆ ಸಿಲುಕಿದ್ದಾರೆ.

ಅರಿವಿನ ಕೊರತೆ
ನೆಹರೂ ಮೈದಾನ ಪರಿಸರದಲ್ಲಿ ಭಿಕ್ಷುಕರು, ಅನಾಥರ ಪಕ್ಕದಲ್ಲಿಯೇ ಇತರ ಸಾರ್ವಜನಿಕರು ಕೂಡ ವಿರಾ ಮಿಸುತ್ತಿರುವ ದೃಶ್ಯಗಳು ಕೆಲವೊಮ್ಮೆ ಕಾಣಸಿಗುತ್ತಿದೆ. ಅವರಲ್ಲಿ ಬಹುತೇಕರು ಮಾಸ್ಕ್ ಕೂಡ ಧರಿಸುತ್ತಿಲ್ಲ. ಸಾಮಾಜಿಕ ಅಂತರದ ಅರಿವೂ ಇಲ್ಲ. ಇದು ಅಪಾಯವನ್ನು ಹೆಚ್ಚಿಸುವಂತಿದೆ.

ಪರಿಹಾರ ಕೇಂದ್ರ ಭರ್ತಿ
ಪಚ್ಚನಾಡಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದ ಸಾಮರ್ಥ್ಯ 150. ಆದರೆ ಅಲ್ಲಿ ಈಗ 156 ಮಂದಿ ಇದ್ದಾರೆ. ಕೋವಿಡ್‌-19 ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಹೊಸ ನಿರಾಶ್ರಿತರನ್ನು ಸೇರ್ಪಡೆಗೊಳಿಸಬಾರದು, ಯಾರನ್ನೂ ಹೊರಗೆ ಕಳುಹಿಸಬಾರದು ಎಂದು ಸರಕಾರದಿಂದ ಸೂಚನೆ ಬಂದಿದೆ ಎನ್ನುತ್ತಾರೆ ಕೇಂದ್ರದ ಅಧೀಕ್ಷಕರು.

Advertisement

ಸಹಕರಿಸಲು ಸಿದ್ಧ
ಒಂದು ವೇಳೆ ಜಿಲ್ಲಾಡಳಿತ ವಾಹನದ ವ್ಯವಸ್ಥೆ ಮಾಡಿಕೊಟ್ಟರೆ ನಿರಾಶ್ರಿತರು, ಭಿಕ್ಷುಕರನ್ನು ಆಶ್ರಮಗಳು ಅಥವಾ ಅವರ ಸಂಬಂಧಿಕರಿದ್ದರೆ ಅಲ್ಲಿಗೆ ಕರೆದೊಯ್ಯಲು ಸಿದ್ಧರಿದ್ದೇವೆ ಎನ್ನುತ್ತಾರೆ ಸುವರ್ಣ ಕರ್ನಾಟಕ ಎನ್‌ಜಿಒದ ಎನ್‌.ಪಿ. ಶೆಣೈ ಅವರು. “ಕಳೆದ 2 ತಿಂಗಳಲ್ಲಿ ಸುಮಾರು 3.5 ಲ.ರೂ. ವೆಚ್ಚದಲ್ಲಿ ಭಿಕ್ಷುಕರು, ವಲಸೆ ಕಾರ್ಮಿಕರಿಗೆ ಊಟ, ತಿಂಡಿ ನೀಡಿದ್ದೆವು. ಪಾಲಿಕೆ, ಜಿಲ್ಲಾಡಳಿತ, ಸಂಘ-ಸಂಸ್ಥೆಗಳು ಸಹಕರಿಸಿದರೆ ಈಗಲೂ ನಿರಾಶ್ರಿತರಿಗೆ ಆಹಾರ ಒದಗಿಸಿಕೊಡಲು ಸಿದ್ಧರಿದ್ದೇವೆ’ ಎನ್ನುತ್ತಾರೆ ಸಾಮಾಜಿಕ ಸೇವಾ ಕಾರ್ಯಕರ್ತೆ ಬಿಜೈಯ ನಂದಿನಿ ರಘುಚಂದ್ರ ಬಿಜೈ ಅವರು.

 ನಿರಾಶ್ರಿತರ ಕೇಂದ್ರದಲ್ಲೇ ಅವಕಾಶ
ನಿರಾಶ್ರಿತರ (ಭಿಕ್ಷುಕರ) ಪುನರ್ವಸತಿಗಾಗಿ ಶೇ. 3ರಷ್ಟು ತೆರಿಗೆ ಸಂಗ್ರಹಿಸಿ ಸಮಾಜ ಕಲ್ಯಾಣ ಇಲಾಖೆಗೆ ನಿರಾಶ್ರಿತರ ಕೇಂದ್ರ ಸ್ಥಾಪನೆ, ನಿರ್ವಹಣೆಗಾಗಿ ನೀಡಲಾಗುತ್ತದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ನಿರಾಶ್ರಿತರಿಗೆ ಪರಿಹಾರ ಕೇಂದ್ರದಲ್ಲಿ ಸ್ಥಳಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.
– ಡಾ| ಸಂತೋಷ್‌ ಕುಮಾರ್‌,
ಉಪ ಆಯುಕ್ತರು, ಮನಪಾ

Advertisement

Udayavani is now on Telegram. Click here to join our channel and stay updated with the latest news.

Next