Advertisement

ನಿತ್ಯ ಸೋಂಕಿತರ ಸಂಖ್ಯೆ ನೀಡುತ್ತಿದೆ ಎಚ್ಚರಿಕೆ!

01:21 AM Jun 16, 2020 | Hari Prasad |

ಜಗತ್ತಿನಾದ್ಯಂತ ಈಗ ಪ್ರತಿನಿತ್ಯ 1 ಲಕ್ಷಕ್ಕೂ ಅಧಿಕ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ.

Advertisement

ಸೋಮವಾರದ ವೇಳೆಗೆ ಕೋವಿಡ್‌- 19ಗೆ 4 ಲಕ್ಷ 36 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.

ಭಾರತದಲ್ಲಿ ಮರಣ ಪ್ರಮಾಣ ಕಡಿಮೆಯಿದೆಯಾದರೂ, ನಿತ್ಯ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ…

ಜಾಗತಿಕ ಹಾಟ್‌ಸ್ಪಾಟ್‌ಗಳಲ್ಲಿ ಭಾರತದ ನಗರಗಳು
ಕೋವಿಡ್‌-19 ಹಾವಳಿಯು ಯುರೋಪ್‌ ರಾಷ್ಟ್ರಗಳಲ್ಲಿ ಕಡಿಮೆಯಾಗಲಾರಂಭಿಸಿದೆ. ಈಗ ಈ ವೈರಸ್‌ ಏಷ್ಯಾದಲ್ಲಿ ತಾಂಡವವಾಡಲಾರಂಭಿಸಿದೆ. ಆತಂಕದ ಸಂಗತಿಯೆಂದರೆ, ಮುಂಬಯಿ, ದಿಲ್ಲಿ ಹಾಗೂ ಚೆನ್ನೈ ಜಾಗತಿಕ ಹಾಟ್‌ಸ್ಪಾಟ್‌ ನಗರಿಗಳಲ್ಲೂ  ಜಾಗ ಪಡೆದಿರುವುದು. ಗಮನಿಸಬೇಕಾದ ಸಂಗತಿಯೆಂದರೆ, ದೇಶದಲ್ಲಿನ ಒಟ್ಟು ಸೋಂಕಿತರಲ್ಲಿ ಚೆನ್ನೈ, ದಿಲ್ಲಿ  ಹಾಗೂ ಮುಂಬಯಿ ಸೇರಿ ಒಟ್ಟು 39.38 ಪ್ರತಿಶತ ಸೋಂಕಿತರಿದ್ದಾರೆ.

ಸೋಮವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಮುಂಬಯಿಯಲ್ಲಿ 58226 ಸೋಂಕಿತರು, ದೆಹಲಿಯಲ್ಲಿ 41182 ಹಾಗೂ ಚೆನ್ನೈಯಲ್ಲಿ 31,896 ಸೋಂಕಿತರು ಪತ್ತೆಯಾಗಿದ್ದಾರೆ. ತಮಿಳುನಾಡಿನ ಒಟ್ಟು ಪ್ರಕರಣಗಳಲ್ಲಿ ಚೆನ್ನೈಯೊಂದರ ಪಾಲು 71.41 ಪ್ರತಿಶತವಿದೆ!

Advertisement

ಚೇತರಿಕೆ ಪ್ರಮಾಣ ಹೆಚ್ಚಾದರೆ ಸಾಲದು
ದೇಶದಲ್ಲೀಗ ಸಕ್ರಿಯ ಪ್ರಕರಣಗಳಿಗಿಂತಲೂ ಚೇತರಿಸಿಕೊಂಡವರ ಸಂಖ್ಯೆ ಅಧಿಕವಾಗಿದೆ. ಸೋಮವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷ 53 ಸಾವಿರಕ್ಕೂ ಅಧಿಕವಿದ್ದರೆ, ಚೇತರಿಸಿಕೊಂಡವರ ಸಂಖ್ಯೆ 1 ಲಕ್ಷ 69 ಸಾವಿರ ದಾಟಿತ್ತು. ಹಾಗೆಂದು, ಪರಿಸ್ಥಿತಿ ಸುಧಾರಿಸುತ್ತಿದೆ ಎಂದರ್ಥವಲ್ಲ. ಹೊಸ ಪ್ರಕರಣಗಳ ಸಂಖ್ಯೆ ಇಳಿಯುವವರೆಗೂ ಅಪಾಯದ ತೂಗುಗತ್ತಿ ನೇತಾಡುತ್ತಲೇ ಇರುತ್ತದೆ.

ಚೇತರಿಸಿಕೊಳ್ಳುವವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಾಗ, ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಾಣಿಸಿಕೊಳ್ಳುವುದು ಮುಖ್ಯ. ಉದಾಹರಣೆಗೆ, ಚೀನದಲ್ಲಿ  ಫೆಬ್ರವರಿ ಅಂತ್ಯದ ವೇಳೆಗೆ ಸಕ್ರಿಯ ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆ ಅಧಿಕವಾಯಿತು. ಆದರೆ, ಅದೇ ವೇಳೆಯಲ್ಲಿ ನಿತ್ಯ ಹೊಸ ಸೋಂಕಿತರ ಸಂಖ್ಯೆಯಲ್ಲೂ ಇಳಿಕೆ ಕಂಡುಬಂದಿತು.


ಅಲ್ಲಿಗೂ ಇಲ್ಲಿಗೂ ಅಂತರ
ಮಹಾನಗರಗಳಾದ ದಿಲ್ಲಿ ಹಾಗೂ ಮುಂಬಯಿನಲ್ಲಿ ನಿತ್ಯ ಸೋಂಕಿತರ ಸಂಖ್ಯೆ ಏರುತ್ತಿದ್ದರೂ ಚೇತರಿಕೆ ಪ್ರಮಾಣ ಗಮನಾರ್ಹವಾಗಿದೆ. ಕೋವಿಡ್ ನಿಂದಾಗಿ ಅತಿಹೆಚ್ಚು ಪ್ರಭಾವಿತವಾದ ನ್ಯೂಯಾರ್ಕ್‌ನಲ್ಲಿ ಈಗ ನಿತ್ಯ ಸೋಂಕಿತರ ಸಂಖ್ಯೆ ಇಳಿಕೆಯಾಗಿದೆಯಾದರೂ, ಅಲ್ಲಿ ಚೇತರಿಕೆ ಪ್ರಮಾಣ 21.23 ಪ್ರತಿಶತದಷ್ಟಿದೆ.

ಇದಕ್ಕೆ ಹೋಲಿಸಿದರೆ, ದಿಲ್ಲಿಯಲ್ಲಿ ಚೇತರಿಸಿಕೊಂಡವರ ಪ್ರಮಾಣ 38.36 ಪ್ರತಿಶತ ದಾಖಲಾಗಿದ್ದರೆ, ಮುಂಬಯಿಯಲ್ಲಿ 45.65 ಪ್ರತಿಶತದಷ್ಟಿದೆ. ರಾಷ್ಟ್ರೀಯ ಸ್ತರದಲ್ಲಿ ನೋಡಿದರೆ, ಈಗ ದೇಶದಲ್ಲಿ ಚೇತರಿಸಿಕೊಂಡವರ ಸಂಖ್ಯೆ 50 ಪ್ರತಿಶತ ದಾಟಿದೆ. 15 ಏಪ್ರಿಲ್‌ ವೇಳೆಗೆ ಭಾರತದಲ್ಲಿ ರಿಕವರಿ ರೇಟ್‌ ಕೇವಲ 11.42 ಪ್ರತಿಶತ ದಾಖಲಾಗಿತ್ತು.

ನ್ಯೂಯಾರ್ಕ್‌: ನಿತ್ಯ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ
ಕೆಲ ತಿಂಗಳವರೆಗೂ ಕೋವಿಡ್ ನಿಂದಾಗಿ ಅತಿಹೆಚ್ಚು ಪೆಟ್ಟು ತಿಂದಿದ್ದ ನ್ಯೂಯಾರ್ಕ್‌ನಲ್ಲಿ ಈಗ ನಿತ್ಯ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬರುತ್ತಿದೆ. ಏಪ್ರಿಲ್‌ 15ರಂದು 8021 ಪ್ರಕರಣಗಳಿಗೆ ಸಾಕ್ಷಿಯಾಗಿದ್ದ ನ್ಯೂಯಾರ್ಕ್‌ ನಗರಿಯಲ್ಲಿ, ಜೂನ್‌ 14ಕ್ಕೆ ಕೇವಲ 385 ಹೊಸ ಪ್ರಕರಣಗಳು ಪತ್ತೆಯಾಗಿವೆ. ನ್ಯೂಯಾರ್ಕ್‌ ಸಿಟಿಯೊಂದರಲ್ಲೇ ಈವರೆಗೂ 2 ಲಕ್ಷ 14 ಸಾವಿರ ಸೋಂಕಿತರು ಪತ್ತೆಯಾಗಿದ್ದರೆ, 21 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ.


Advertisement

Udayavani is now on Telegram. Click here to join our channel and stay updated with the latest news.

Next