ಕಾರ್ಕಳ: ಕೋವಿಡ್ ಬಾಧೆಯ ಆರಂಭಿಕ ಹಂತದಲ್ಲೇ ಭಾರತದಲ್ಲಿ ಇದೇ ದೇಶದಲ್ಲಿ ಲಾಕ್‌ಡೌನ್ ಘೋಷಿಸಿ ಕಟ್ಟುನಿಟ್ಟಿನ ಜಾರಿ ಮೂಲಕ ಭಾರತ ದೇಶವು ಸಮರ್ಪಕವಾಗಿ ನಿಭಾಯಿಸಿ ಯಶಸ್ವಿಯಾಗಿದೆ. ಆದರೆ ಅಮೆರಿಕ ದೇಶದಲ್ಲಿ ಲಾಕ್‌ಡೌನ್ ಇದ್ದರೂ ಭಾರತದಷ್ಟು ಕಟ್ಟುನಿಟ್ಟು ಇಲ್ಲ. ಕೋವಿಡ್ ಬಾಧಿತರೇ ಆಸ್ಪತ್ರೆಗೆ ಹೋಗಿ ದಾಖಲಾಗಬೇಕು. ಬಳಿಕವಷ್ಟೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರಂಭಿಕ ನಿರ್ಲಕ್ಷ್ಯವೇ ಅಲ್ಲಿ 42 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಲು ಕಾರಣ.
ಅಮೆರಿಕದ ಅತಿ ದೊಡ್ಡ 9 ಆಸ್ಪತ್ರೆಗಳ ಪೈಕಿ ಒಂದಾಗಿರುವ ನ್ಯೂಯಾರ್ಕ್ ಯುನಿವರ್ಸಿಟಿ ಮೆಡಿಕಲ್ ಸೆಂಟರ್ (ಎನ್‌ಐಯು)ನಲ್ಲಿ ನೆಫ್ರಾಲಜಿಸ್ಟ್ ಹಾಗೂ ಇಂಟನ್ಸಿವಿಸ್ಟ್ (ಐಸಿಯು) ಆಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಕಳದ ಡಾ| ಅವಿನಾಶ್ ಅಡಿಗ ಅವರ ಅಭಿಪ್ರಾಯ ಇದು. ಅವರು ಅಮೆರಿಕದ ಸ್ಥಿತಿಗತಿ ಕುರಿತು “ಉದಯವಾಣಿ’ಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನ್ಯೂಯಾರ್ಕ್ ರಾಜ್ಯದಲ್ಲಿ ಜನಸಂದಣಿ ಹೆಚ್ಚು. ಒಂದೇ ಕಟ್ಟಡದಲ್ಲಿ ಸಾವಿರಾರು ಮಂದಿ ವಾಸ್ತವ್ಯವಿರುವುದರಿಂದಾಗಿ ಬಹುಬೇಗನೆ ಸೋಂಕು ಒಬ್ಬರಿಂದೊಬ್ಬರಿಗೆ ಪಸರಿಸು ತ್ತಿದೆ. ಅಲ್ಲೇ 2.5 ಲಕ್ಷ ಮಂದಿ ಕೋವಿಡ್ ದಿಂದ ನಲುಗಿದ್ದಾರೆ. ಅಮೆರಿಕದ ಆಸ್ಪತ್ರೆಗಳಲ್ಲಿ ಮಾಮೂಲಿಗಿಂತ 6 ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ದಾಖಲಾಗುತ್ತಿದ್ದಾರೆ. ಒಂದೊಂದು ಆಸ್ಪತ್ರೆಯಲ್ಲೂ 250ರಿಂದ 350 ಮಂದಿ ಕೋವಿಡ್ ಬಾಧಿತರು ವೆಂಟಿಲೇಟರ್‌ನಲ್ಲಿದ್ದಾರೆ. ಆಸ್ಪತ್ರೆಯಲ್ಲಿ 95 ಶೇ. ರೋಗಿಗಳು ಕೋವಿಡ್ ಪೀಡಿತರೇ ಎನ್ನುತ್ತಾರೆ ಅವಿನಾಶ್.
ಆಸ್ಪತ್ರೆಯಲ್ಲಿ ರೋಗಿಗಳ ಸಂಬಂಧಿಕರಿಗೆ ಅವಕಾಶವಿಲ್ಲ. ಆದ್ದರಿಂದ ರೋಗಿಯ ಸ್ಥಿತಿಯ ಕುರಿತು ಪ್ರತಿದಿನ ಅವರಿಗೆ ತಿಳಿಸಬೇಕಾಗಿದೆ. ಕೋವಿಡ್ ಬಾಧಿಸಿದ 50 ವರ್ಷದ ಮೇಲಿನ ರೋಗಿಗಳು ಚೇತರಿಸಿಕೊಳ್ಳುವುದು ಕಡಿಮೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲವೆಂಬುದನ್ನು ಮನೆಯವರಿಗೆ ತಿಳಿಸುವಾಗ ಅವರಿಗಾಗುವ ವೇದನೆ; ಇನ್ನು ಅವರನ್ನು ನೋಡುವುದಕ್ಕೂ ಸಾಧ್ಯವಿಲ್ಲವೇ ಎಂಬ ಪ್ರತಿಕ್ರಿಯೆಯನ್ನು ಆಲಿಸುವಾಗ ಅತೀವ ದುಃಖವಾಗುತ್ತದೆ. ಇಂತಹ ಮನಕಲಕುವ ಸನ್ನಿವೇಶ ಈ ವರೆಗೆ ನೋಡಿಲ್ಲ.
– ಡಾ| ಅವಿನಾಶ್ ಅಡಿಗ
ಲಾಕ್‌ಡೌನ್ ಕಟ್ಟುನಿಟ್ಟಾಗಿಲ್ಲ
ಅಮೆರಿಕದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದರೂ ಸರಕಾರದ ವತಿಯಿಂದ ಕಟ್ಟುನಿಟ್ಟಾಗಿ ಜಾರಿಗೆ ಮಾಡಿಲ್ಲ. ಪಾರ್ಕ್, ಥಿಯೇಟರ್, ಮಾಲ್‌ಗಳು ಬಂದ್ ಆಗಿವೆ. ಆದರೆ ಬಸ್, ಮೆಟ್ರೋ ಸಂಚರಿಸುತ್ತಿವೆ. ಜನರು ಸ್ವಯಂ ಪ್ರೇರಿತರಾಗಿ ಮನೆಗಳಲ್ಲೇ ಕಾಲಕಳೆಯುತ್ತಿದ್ದಾರೆ. ಸಂಜೆ ವೇಳೆ ಮನೆಯ ಬಾಲ್ಕನಿಯಲ್ಲಿ ನಿಂತು ವೈದ್ಯರು, ನರ್ಸ್ ಗಳಿಗೆ ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸುತ್ತಿದ್ದಾರೆ.