ದೇಶದ ಪೊಲೀಸರು ಕೋವಿಡ್ ವಿರುದ್ಧದ ಹೋರಾಟದಲ್ಲಿ ಪಡುತ್ತಿರುವ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ದುರದೃಷ್ಟವಶಾತ್, ಸೋಂಕಿತರ ಸಂಪರ್ಕಕ್ಕೆ ಬರುವ ಸಾಧ್ಯತೆಯೂ ಈ ವರ್ಗದಲ್ಲಿ ಅಧಿಕವಿರುವುದರಿಂದ ಇಂದು ದೇಶಾದ್ಯಂತ ಕೊರೊನಾ ಪೀಡಿತ ಪೊಲೀಸರ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ, ಅದರಲ್ಲೂ ರಾಜಧಾನಿಯೊಂದರಲ್ಲೇ ಪೊಲೀಸ್ ಇಲಾಖೆಯ 77 ಸಿಬಂದಿಗೆ ಕೋವಿಡ್ ದೃಢಪಟ್ಟಿದ್ದು, 8 ಪೊಲೀಸ್ ಠಾಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಇದುವರೆಗೂ ಈ ಸೋಂಕಿಗೆ ಮೂವರು ಸಿಬಂದಿ ಬಲಿಯಾಗಿದ್ದು, ಈಗ ಕರ್ನಾಟಕ ರಾಜ್ಯ ಮೀಸಲು ಪಡೆಯಲ್ಲಿದ್ದ ಪೇದೆಯೊಬ್ಬರು, ಕೋವಿಡ್ ಸೋಂಕು ದೃಢಪಟ್ಟ ಕಾರಣ ಆತ್ಮಹತ್ಯೆ ಮಾಡಿಕೊಂಡ ದುಃಖಕರ ಘಟನೆ ನಡೆದಿದೆ. ಈ ಘಟನೆಯ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು, “ಜೀವವನ್ನೇ ಪಣಕ್ಕಿಟ್ಟು ಶ್ಲಾಘನೀಯ ಕೆಲಸ ಮಾಡುವ ಪೊಲೀಸರಿಗಾಗಿಯೇ ಪ್ರತ್ಯೇಕ ಕೋವಿಡ್ ಪರೀಕ್ಷಾ ಕೇಂದ್ರ ಪ್ರಾರಂಭಿಸಲಾಗುತ್ತಿದೆ, ಸೋಂಕಿತರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿದೆ’ ಎಂದು ತಿಳಿಸಿರುವುದು ಸ್ವಾಗತಾರ್ಹ.
ರವಿವಾರ ಒಂದೇ ದಿನ ಬೆಂಗಳೂರಿನ 17 ಮಂದಿ ಪೊಲೀಸರಲ್ಲಿ ಸೋಂಕು ದೃಢಪಟ್ಟ ನಂತರವಂತೂ, ಪೊಲೀಸ್ ಇಲಾಖೆಯ ಸಿಬಂದಿಯಲ್ಲಿ ಆತಂಕ ಮಡುಗಟ್ಟಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮಿಷನರ್ ಭಾಸ್ಕರರಾವ್ ಅವರು, ಪೊಲೀಸ್ ಸಿಬಂದಿಯ ಸುರಕ್ಷತೆಯ ಹಿತದೃಷ್ಟಿಯಿಂದ 13 ಅಂಶಗಳ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿದ್ದು, ಇವುಗಳ ಕಡ್ಡಾಯ ಪಾಲನೆಯಾಗಬೇಕೆಂದು ಹೇಳಿದ್ದಾರೆ. ಮುಖ್ಯವಾಗಿ 55 ವರ್ಷಕ್ಕೂ ಮೇಲ್ಪಟ್ಟ ಸಿಬಂದಿಗೆ ವಿಶ್ರಾಂತಿ, ಠಾಣೆಯ ಹೊರಗಡೆಯೇ ಸಾರ್ವಜನಿಕ ದೂರುಗಳನ್ನು ಆಲಿಸಬೇಕು ಎಂಬ ಅಂಶಗಳು ಈ ಮಾರ್ಗಸೂಚಿಯಲ್ಲಿ ಇವೆ.
ಕೋವಿಡ್ ಹಾವಳಿಯು ದೇಶವಾಸಿಗಳ ಮಾನಸಿಕ ಸ್ಥಿತಿಯ ಮೇಲೂ ಅಪಾರ ಪರಿಣಾಮ ಬೀರುತ್ತಿದೆ. ಅದರಲ್ಲೂ, ಕೊರೊನಾ ಸಂಬಂಧಿತ ಕೆಲಸಗಳಲ್ಲಿ ಮುಂಚೂಣಿ ಸೇನಾನಿಗಳಾಗಿ ದುಡಿಯುತ್ತಿರುವ ಪೊಲೀಸರು, ಆರೋಗ್ಯ ವಲಯದ ಸಿಬಂದಿಗೆ ನಿಸ್ಸಂಶಯವಾಗಿಯೂ ಒತ್ತಡ ಅಧಿಕವಿದೆ. ಆದರೆ, ಇದು ಖನ್ನತೆಯಾಗಿ ಬದಲಾಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಸುರಕ್ಷತ ಕ್ರಮಗಳನ್ನು ಪಾಲಿಸುವುದರಿಂದ ಕೊರೊನಾದಿಂದ ದೂರವಿರಬಹುದು. ಇನ್ನು ಕೊರೊನಾ ಎನ್ನುವುದು ಮಾರಕ ರೋಗವೇನೂ ಅಲ್ಲ ಎನ್ನುವುದು ನೆನಪಿರಲಿ.
ಇದೇನೇ ಇದ್ದರೂ, ಕೊರೊನಾ ಕುರಿತು ಪೊಲೀಸ್ ಇಲಾಖೆ ಸೇರಿದಂತೆ, ಮುಂಚೂಣಿ ಹೋರಾಟದಲ್ಲಿರುವ ಎಲ್ಲಾ ಸಿಬಂದಿಗೆ ಮಾನಸಿಕವಾಗಿಯೂ ಬಲ ತುಂಬಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ, ಸರಕಾರ ಯೋಚಿಸಬೇಕಿದೆ. ಸಾಧ್ಯವಾದರೆ, ಮನೋವೈದ್ಯರು, ಕೌನ್ಸೆಲಿಂಗ್‌ನ ಸಹಾಯವೂ ಸಿಗುವಂತೆ ನೋಡಿಕೊಳ್ಳುವುದು ಉತ್ತಮ. ಒಟ್ಟಾರೆ ವ್ಯವಸ್ಥೆಯು, ನಮ್ಮ ರಕ್ಷಕರ ರಕ್ಷಣೆಗೆ ದೃಢ ನಿಶ್ಚಯದಿಂದ ನಿಲ್ಲಬೇಕಾಗಿದೆ.