Advertisement

ದೇವಿ ದೇಗುಲ, ಮಸೀದಿಗಳಲ್ಲಿ ಭಕ್ತರಿಲ್ಲದ ಶುಕ್ರವಾರ

09:36 AM Mar 29, 2020 | sudhir |

ಮಂಗಳೂರು/ಉಡುಪಿ: ಕೋವಿಡ್ 19 ಸೋಂಕು ಪ್ರಸರಣ ತಡೆಯುವ ನಿಟ್ಟಿನಲ್ಲಿ ಎಲ್ಲ ದೇಗುಲ, ಮಸೀದಿ, ಚರ್ಚ್‌ ಸೇರಿದಂತೆ ಆರಾಧನಾ ಮಂದಿರಗಳಲ್ಲಿ ಭಕ್ತರ ಆಗಮನವನ್ನು ನಿಷೇಧಿಸಲಾಗಿದೆ. ಪ್ರತಿ ಶುಕ್ರವಾರ ಹಿಂದೂಗಳು ದೇವಿ ದೇವಸ್ಥಾನಗಳಿಗೆ ಮತ್ತು ಮುಸ್ಲಿಮರು ಮಸೀದಿಗಳಿಗೆ ತೆರಳಿ ಸಾಮೂಹಿಕ ಪೂಜೆ, ಪ್ರಾರ್ಥನೆ ನೆರವೇರಿಸುವುದು ಸಾಮಾನ್ಯ. ಆದರೆ ಈ ಶುಕ್ರವಾರ ಮಾತ್ರ ಕರಾವಳಿಯ ಎಲ್ಲ ದೇವಿ ದೇವಸ್ಥಾನಗಳು, ಮಸೀದಿಗಳಲ್ಲಿ ಭಕ್ತರೇ ಇರಲಿಲ್ಲ.

Advertisement

ಭಕ್ತರಿಲ್ಲದೆ ವಾಗ್ದೇವಿಯ ಸನ್ನಿಧಿ ಬರಿದು
ಕೊಲ್ಲೂರು: ಪ್ರತಿ ಶುಕ್ರವಾರ ಕನಿಷ್ಠ ಏಳೆಂಟು ಸಾವಿರ ಭಕ್ತರಿಂದ ತುಂಬಿರುತ್ತಿದ್ದ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರ ಕೋವಿಡ್ 19 ಸಾಂಕ್ರಾಮಿಕ ರೋಗದ ಭೀತಿಯಿಂದಾಗಿ ಇಂದು ಭಕ್ತರೇ ಇಲ್ಲದೆ ಭಣಗುಡುತ್ತಿತ್ತು. ದೇಗುಲದ ಅರ್ಚಕರು ಹಾಗೂ ಕೆಲವೇ ಸಿಬಂದಿಗೆ ಮಾತ್ರ ದೇಗುಲ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಒಳ ಹಾಗೂ ಹೊರ ಪೌಳಿಯಲ್ಲಿ ಪೊಲೀಸ್‌ ಹಾಗೂ ಭದ್ರತಾ ಸಿಬಂದಿಯನ್ನು ನಿಯೋಜಿಸಲಾಗಿದೆ. ಕೊಲ್ಲೂರು ಪೊಲೀಸರು ವಾಹನ ಸಂಚಾರ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು.

ಕಟೀಲು ದೇವಸ್ಥಾನ
ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಗೇಟಿಗೆ ಬೀಗ ಜಡಿಯಲಾಗಿದೆ. ಯಾವುದೇ ಸೇವೆ, ಊಟ, ವಸತಿ ಸೌಲಭ್ಯ ಇಲ್ಲ ಎಂಬ ಫ‌ಲಕವನ್ನು ಗೇಟಿನಲ್ಲೇ ನೇತುಹಾಕಲಾಗಿದೆ. ಪ್ರತಿ ಶುಕ್ರವಾರ ದೇವಿಯ ದರ್ಶನ ಮಾಡುವ ಸ್ಥಳೀಯ ಭಕ್ತರು ಇಂದು ಹೊರಗಿನಿಂದಲೇ ಕೈಮುಗಿದು ತೆರಳಿದ್ದಾರೆ.

ಬಪ್ಪನಾಡು ದೇವಸ್ಥಾನ
ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ದೇವರ ದರ್ಶನಕ್ಕೆ ಮತ್ತು ಮಧ್ಯಾಹ್ನದ ಅನ್ನಪ್ರಸಾದಕ್ಕೆ ಭಕ್ತರು ಅಧಿಕ ಸಂಖ್ಯೆಯಲ್ಲಿ ಸೇರುತ್ತಿದ್ದರು. ಆದರೆ ಇಂದು ಸರಕಾರದ ಆದೇಶದಂತೆ ಎಲ್ಲವೂ ಸ್ತಬ್ಧವಾಗಿತ್ತು. ನಿತ್ಯ ಪೂಜೆ ಮತ್ತು ದೇವರ ಬಲಿಯನ್ನು ಅತ್ಯಂತ ಸರಳವಾಗಿ ಬೆರಳೆಣಿಕೆಯ ಸಿಬಂದಿಯ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಮುಂದಿನ ಸೂಚನೆ ವರೆಗೆ ಭಕ್ತರು ಯಾವುದೇ ಕಾರಣಕ್ಕೂ ದೇಗುಲದತ್ತ ಬರುವುದು ಬೇಡ; ಮನೆಗಳಲ್ಲೇ ದೇವಿಯನ್ನು ಪ್ರಾರ್ಥಿಸಿ ಎಂದು ಆಡಳಿತ ಮೋಕ್ತೆಸರ ಎನ್‌.ಎಸ್‌. ಮನೋಹರ ಶೆಟ್ಟಿ ಮತ್ತು ಕಾರ್ಯನಿರ್ವಹಣಾಧಿಕಾರಿ ಪಿ. ಜಯಮ್ಮ ಮನವಿ ಮಾಡಿದ್ದಾರೆ.

Advertisement

ಮಂಗಳಾದೇವಿ ದೇವಸ್ಥಾನ
ಮಂಗಳೂರು: ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನಕ್ಕೆ ಪ್ರತೀ ದಿನ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ. ಇತ್ತೀಚೆಗಷ್ಟೇ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ ಪೂರ್ಣಗೊಂಡಿದೆ.

ಕೋವಿಡ್ 19 ಭೀತಿ ಹಿನ್ನೆಲೆಯಲ್ಲಿ ಮಾ. 18ರಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಇದೀಗ ದೇವಸ್ಥಾನದಲ್ಲಿ ದೇವರಿಗೆ ಬೆಳಗ್ಗೆ 6 ಗಂಟೆ, ಮಧ್ಯಾಹ್ನ 1 ಗಂಟೆ ಮತ್ತು ರಾತ್ರಿ 8.30ಕ್ಕೆ ದೈನಂದಿನ ಪೂಜೆ ಮಾತ್ರ ಭಕ್ತರ ಅನುಪಸ್ಥಿತಿಯಲ್ಲಿ ನಡೆಯುತ್ತಿದೆ.

ಉಡುಪಿ: ಉಡುಪಿ ನಗರದ ಪ್ರಮುಖ ದೇವಿ ದೇವಸ್ಥಾನಗಳಾದ ಪುತ್ತೂರು ಶ್ರೀ ಭಗವತೀ ದುರ್ಗಾಪರಮೇಶ್ವರೀ ದೇವಸ್ಥಾನ, ಜನಾರ್ದನ ಮಹಾಕಾಳಿ
ದೇವಸ್ಥಾನ ಅಂಬಲಪಾಡಿ, ಜಯದುರ್ಗಾಪರಮೇಶ್ವರೀ ದೇವಸ್ಥಾನ ಕನ್ನರ್ಪಾಡಿ, ಶ್ರೀ ಆದಿಶಕ್ತಿ ದೇವಸ್ಥಾನ ದೊಡ್ಡಣಗುಡ್ಡೆ, ದುರ್ಗಾಪರಮೇಶ್ವರೀ ದೇವಸ್ಥಾನ ಪಡುಅಲೆವೂರು, ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹೆರ್ಗಾ, ಮಹಿಷಮರ್ದಿನಿ ದೇವಸ್ಥಾನ ಬೈಲೂರು, ಮಹಿಷಮರ್ದಿನಿ ದೇವಸ್ಥಾನ
ಕಡಿಯಾಳಿ, ಶ್ರೀ ದುರ್ಗಾಂಬಿಕಾ ದೇವಸ್ಥಾನ ಮಣಿಪಾಲದಲ್ಲಿ ಅರ್ಚಕರಷ್ಟೇ ಇದ್ದು ಪೂಜೆ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next