ಬೀಳಗಿ: ಕೋವಿಡ್ 19 ಹೊಡೆತಕ್ಕೆ ರೈತ ಸಾಲು ಸಾಲು ನಷ್ಟ, ನೋವು ಅನುಭವಿಸುತ್ತಲೇ ಇದ್ದಾನೆ. ಇದೀಗ ರೈತರು ಬೇಸಾಯದಡಿ ಬೆಳೆದ ಹೂಗಳ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ದೊರೆಯದೇ ಇರುವ ಪರಿಣಾಮ, ಕೊರೊನಾ ಬಿಸಿಗೆ ಹೂಗಳು ಕೂಡ ಕಮರಿ ಹೋಗುತ್ತಿರುವುದು ರೈತನ ಆತಂಕ ಹೆಚ್ಚಿಸಿದೆ.
ಮಲ್ಲಿಗೆ, ಸೇವಂತಿ, ಸುಗಂಧರಾಜ, ಗಲಾಟೆ, ಕಾಸಮೋಸ್ ಹೂ ಸೇರಿದಂತೆ ತಾಲೂಕಿನಾದ್ಯಂತ ಸುಮಾರು 28 ಎಕರೆ ಪ್ರದೇಶದಲ್ಲಿ ವಿವಿಧ ಹೂಗಳು ಅಂದದಿಂದ ಅರಳಿ ಘಮಘಮಿಸುತ್ತಿವೆ. ಯುಗಾದಿ ಪಾದಾರ್ಪಣೆ ಮಾಡುತ್ತಿದ್ದಂತೆ ಆರಂಭವಾಗುತ್ತಿದ್ದ ಮದುವೆ, ಜಾತ್ರೆ, ವಿವಿಧ ಉತ್ಸವಗಳಿಂದಾಗಿ ಹೂಗಳಿಗೆ ಎಲ್ಲಿಲ್ಲದ ಬೇಡಿಕೆ ಶುರುವಿಟ್ಟುಕೊಳ್ಳುತ್ತಿತ್ತು. ರೈತನ ಕೈತುಂಬ ಹಣ ಸಿಗುತ್ತಿತ್ತು. ಆದರೆ, ಯುಗಾದಿಯ ಹೊತ್ತಿಗೆ ಕೋವಿಡ್ 19 ಎಂಟ್ರಿ ಕೊಟ್ಟಿದ್ದರ ಫಲವಾಗಿ ಇಡೀ ದೇಶವೇ ಲಾಕ್‌ಡೌನ್ ಸ್ಥಿತಿ ಅನುಭವಿಸುತ್ತಿದೆ.
ಕಾಯಿಪಲ್ಲೆ, ಹಣ್ಣು-ಹಂಪಲವಾದರೆ ಒಂದಷ್ಟು ಎಲ್ಲಿಯಾದರೂ ಮಾರುಕಟ್ಟೆ ಗಿಟ್ಟಿಸಿಕೊಳ್ಳಬಹುದು. ಆದರೆ, ಸಂಪೂರ್ಣ ಲಾಕ್‌ಡೌನ್ ಸ್ಥಿತಿಯಿಂದಾಗಿ ಯಾರೊಬ್ಬರೂ ಹೂವಿನ ವಾಸನೆ ಕೂಡ ಮೂಸುತ್ತಿಲ್ಲ. ಪರಿಣಾಮ, ಎಲ್ಲಿಯೂ ಮಾರುಕಟ್ಟೆ ಸಿಗದೆ ಹೂವು ಬೆಳದೆ ರೈತ ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಏನೂ ತೋಚುತ್ತಿಲ್ಲ: ತಾಲೂಕಿನಲ್ಲಿ ಮಲ್ಲಿಗೆ 1.6, ಸೆವಂತಿ 1.2, ಸುಗಂಧರಾಜ 2, ಗಲಾಟೆ 2.4 ಹಾಗೂ ಕಾಸಮೋಸ್ 4 ಹೆಕ್ಟರ್ ಸೇರಿ ತಾಲೂಕಿನಾದ್ಯಂತ ಒಟ್ಟು 11.2 ಹೆಕ್ಟೇರ್ ಪ್ರದೇಶದಲ್ಲಿ ಬೇಸಾಯದಡಿ ವಿವಿಧ ಹೂಗಳ ಒಟ್ಟು 79.5 ಟನ್‌ನಷ್ಟು ಬೆಳೆ ಬೆಳೆದು ನಿಂತಿದೆ. ಕೆಜಿಗೆ 45 ರಿಂದ 50 ರೂ. ಗೆ ಮಾರುತ್ತಿದ್ದ ಮಲ್ಲಿಗೆಯನ್ನು 25 ರೂ, ಸಿಕ್ಕರೆ ಸಾಕು ಎನ್ನುವಂತಾಗಿದೆ. ಕೆಜಿಗೆ 15-20 ರೂ.ಗೆ ಮಾರುಕಟ್ಟೆಯಲ್ಲಿ ಕಂಗೊಳಿಸುತ್ತಿದ್ದ ಸೇವಂತಿಗೆ 7-8 ರೂ.ಗೆ ಮಾತಾಡುವಂತಾಗಿದೆ.
ಕೆಜಿಗೆ 70-80 ರೂ.ಗೆ ಕೈ ಸೇರುತ್ತಿದ್ದ ಸುಗಂಧರಾಜ ಇದೀಗ 20-25 ರೂ.ಗೆ ಸಿಗುತ್ತಿದೆ ಎಂದರೂ ಯಾರೂ ಮಾತಾಡಿಸುವವರಿಲ್ಲ. ಕೆಜಿಗೆ 10-15 ರೂ.ಗೆ ಬೀಗುವ ಗಲಾಟೆ ಹೂ ಸದ್ಯ, 4-5 ರೂ.ಗೆ ಯಾರೂ ಮುಖ ಮಾಡುತ್ತಿಲ್ಲದಿರುವ ಧಾರುಣ ಸ್ಥಿತಿಯಿಂದಾಗಿ ಹೂ ಬೆಳೆದ ರೈತನಿಗೆ ಏನೊಂದು ತೋಚದಂತಾಗಿದೆ. ಹೂವಿನ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗಬೇಕಿದೆ. ಇಲ್ಲದಿದ್ದರೆ ಸರಕಾರವಾದರೂ ರೈತನ ಸಹಾಯಕ್ಕೆ ನಿಲ್ಲಬೇಕಿರುವುದು ಅಗತ್ಯವಿದೆ ಎನ್ನುವುದು ಹಲವಾರು ರೈತರ ಒತ್ತಾಸೆಯಾಗಿದೆ.
ಹೂವಿನ ಬೆಳೆ ಯಾವತ್ತೂ ನಷ್ಟ ಮಾಡಿದ್ದಿಲ್ರಿ. ಮಾರಾಟಕ್ಕೆ ಎಲ್ಲಿಯೂ ಆಸ್ಪದ ಸಿಗುತ್ತಿಲ್ಲರೀ. ಮೊದಲು, ದಿನಾಲು ಸಾವಿರಾರು ರೂಪಾಯಿ ಲಾಭ ಕೊಡುತ್ತಿದ್ದ ಹೂವಿನ ಬೆಳೆಗಳನ್ನು ಇವತ್ತಿನ ದಿವಸ ನೆಲಕ್ಕೆ ಕೆಡವಿ ಗೊಬ್ಬರ ಮಾಡಾಕತ್ತೇವ್ರಿ. ಸರಕಾರ ನಮ್ಮ ಸಹಾಯಕ್ಕೆ ಬರಬೇಕಿದೆ.
– ನಾರಾಯಣಗೌಡ ಪಾಟೀಲ, ರೈತರು, ಬಾವಲತ್ತಿ ಗ್ರಾಮ
ಸ್ಥಳೀಯವಾಗಿ ಮಾರುಕಟ್ಟೆ ಹೊಂದಿದ ಹೂವಿನ ಬೆಳೆಗಳಿಗೆ ಸದ್ಯ, ಲಾಕ್ ಡೌನ್ ಸ್ಥಿತಿಯಿಂದಾಗಿ ಮಾರುಕಟ್ಟೆಯೇ ಇಲ್ಲದಂತಾಗಿದೆ. ಹೀಗಾಗಿ ರೈತರು ತೊಂದರೆ ಅನುಭವಿಸುವಂತಾಗಿದೆ. ಸೂಕ್ತ ಪರಿಹಾರಕ್ಕಾಗಿ ತಾಲೂಕಿನ ಹೂವಿನ ಬೆಳೆಗಳ ಕುರಿತು ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ.
-ವಿವೇಕಾನಂದ ಕೆರೂರ, ಸಹಾಯಕ ತೋಟಗಾರಿಕೆ ನಿದೇಶಕರು, ಬೀಳಗಿ
-ರವೀಂದ್ರ ಕಣವಿ