ಚಿಕ್ಕಮಗಳೂರು: ಸ್ವಾಭಿಮಾನದಿಂದ ದುಡಿದು ತಿನ್ನುವ ಕೈಗಳು ಇಂದು ಬೇಡಿ ತಿನ್ನುವ ಪರಿಸ್ಥಿತಿ ಬಂದಿದೆ. ಕೂಲಿಗೆ ಹೋಗಲು ಮನಸ್ಸಿದೆ. ಆದರೆ, ಹೊರಗೆ ಹೋಗದಂತೆ ಸರ್ಕಾರ ಲಾಕ್‌ಡೌನ್ ಮಾಡಿದೆ. ಜೇಬಲ್ಲಿ ದುಡ್ಡಿಲ್ಲ, ಹಸಿವು ಇವರನ್ನು ಬಿಡುತ್ತಿಲ್ಲ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲ : ಜಿಲ್ಲೆ ಕಾಫಿ ಉದ್ಯಮಕ್ಕೆ ಹೆಸರುವಾಸಿ. ಈ ಉದ್ಯಮ ಬಹಳಷ್ಟು ಮಂದಿಗೆ ಉದ್ಯೋಗ ನೀಡಿದೆ. ಇದನ್ನೇ ನಂಬಿಕೊಂಡು ಅನೇಕ ಕುಟುಂಬಗಳು ಜೀವನದ ಬಂಡಿ ಸಾಗಿಸುತ್ತಿವೆ. ಸಿಗುತ್ತಿದ್ದ ಅಷ್ಟೋ ಇಷ್ಟೋ ಹಣದಿಂದ ತುತ್ತಿನ ಚೀಲ ತುಂಬಿಸಿಕೊಂಡು ಸುಖ ಸಂಸಾರ ನಡೆಸುತ್ತಿದ್ದ ಕುಟುಂಬಗಳಿಗೆ ಕೋವಿಡ್ 19 ಭೀತಿಯಿಂದ ಬರಸಿಡಿಲು ಬಡಿದಂತಾಗಿದೆ.
ಕೂಲಿ ಮಾಡಲು ಮನಸ್ಸಿದೆ. ಆದರೆ, ಹೊರಗಡೆ ಹೋದರೆ ಪೊಲೀಸರ ಲಾಠಿರುಚಿ. ಮನೆಯಲ್ಲಿದ್ದರೆ ಹಸಿವು. ಜಿಲ್ಲೆಯ ಕೂಲಿ ಕಾರ್ಮಿಕರ ಸ್ಥಿತಿ ಹೀಗಾದರೆ, ಕೂಲಿ ಅರಸಿ ಬಂದ ರಾಜ್ಯ ಮತ್ತು ಹೊರ ರಾಜ್ಯದ ಕೂಲಿ ಕಾರ್ಮಿಕರ ಸ್ಥಿತಿ ಅತ್ಯಂತ ಧಾರುಣ. ಇತ್ತ ಕೂಲಿಯೂ ಇಲ್ಲ. ಅತ್ತ ಊರಿಗೆ ಹೋಗೋಣ ಅಂದರೆ ಬಸ್ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ.
ಕೋವಿಡ್ 19 ಮಹಾಮಾರಿ ಮನುಷ್ಯನ ಜೀವ ಹಿಂಡುವುದಿರಲಿ. ಕಾರ್ಮಿಕರ ಜೀವನವನ್ನೇ ಹಿಂಡಿ ಹಿಪ್ಪೆ ಮಾಡಿ ಹಾಕಿದೆ. ಹಸಿವಿನಿಂದ ದಿಕ್ಕು ತೋಚದಂತಾಗಿದ್ದು, ಜಿಲ್ಲೆಯ ಒಂದಿಷ್ಟು ಸಂಘ-ಸಂಸ್ಥೆಗಳು, ಸಾರ್ವಜನಿಕರು ಇವರಿಗೆ ಆಸರೆಯಾಗಿ ಹಸಿದ ಹೊಟ್ಟೆಯನ್ನು ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಇವರೇನು ದೊಡ್ಡ ಶ್ರೀಮಂತ ಕುಟುಂಬದಿಂದ ಬಂದವರಲ್ಲ. ಆದರೆ, ಬಡವರ ಕಣ್ಣೀರಿನ ಕತೆಗೆ ಮರಗುವ ಮನಸ್ಸುಗಳು ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದು ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಜಿಲ್ಲೆಯ ಕೂಲಿ ಕಾರ್ಮಿಕರ ಪಾಲಿಗೆ ರಕ್ಷಕರಾಗಿ ನಿಲ್ಲಬೇಕಾಗಿದ್ದ ಜನಪ್ರತಿನಿಧಿಗಳು ಅಧಿಕಾರಿಗಳ ಸಭೆ, ಜನರ ಭೇಟಿಯಲ್ಲೇ ಮಗ್ನರಾಗಿದ್ದು ಕೇವಲ ಭರವಸೆಯ ಮಾತುಗಳನ್ನಷ್ಟೇ ಹೇಳುತ್ತಿದ್ದಾರೆ.
ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷದ ನಾಲ್ಕು ಜನ ಎಂಎಲ್ ಎಗಳಿದ್ದಾರೆ. ಅವರಲ್ಲೊಬ್ಬರು ಜಿಲ್ಲಾ ಉಸ್ತುವಾರಿ ಸಚಿವರು ಕೂಡ. ಇನ್ನು ವಿರೋಧ ಪಕ್ಷದವರು ಒಬ್ಬರು ಎಂಎಲ್‌ಎ ಆಗಿದ್ದಾರೆ. ಇವರೆಲ್ಲರೂ ಇಂತಹ ವಿಷಮ ಸ್ಥಿತಿಯಲ್ಲಿ ಜಿಲ್ಲೆಯಲ್ಲಿದ್ದರೂ ಕೂಡ ಅಧಿಕಾರಿಗಳ ಸಭೆಗೆ ಸೀಮಿತ ಆಗಿದ್ದಾರೆ. ಕೋವಿಡ್ 19 ಸೋಂಕು ಮಾತ್ರ ನಮ್ಮ ಜಿಲ್ಲೆಗೆ ಬರಬಾರದು. ಅದಕ್ಕೆ ಬೇಕಾದ ಕ್ರಮ ಕೈಗೊಳ್ಳಿ. ಸರ್ಕಾರದಿಂದ ಏನು ಬಂದಿದೆ. ಅದನ್ನು ಸಮರ್ಪಕವಾಗಿ ಹಂಚಿ ಎಂದು ಅ ಧಿಕಾರಿಗಳಿಗೆ ಸೂಚಿಸಿ ಮೌನ ವಹಿಸಿದ್ದಾರೆ. ಮತ್ತೆ ಕೆಲ ಜನಪ್ರತಿನಿಧಿ ಗಳು ಜನರ ಬಳಿಗೆ ಹೋಗಿ ಸೋಂಕು ತಗುಲದಂತೆ ಜಾಗ್ರತೆ ವಹಿಸಿ, ಹೆದರಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡುವುದಕ್ಕಷ್ಟೇ ಸೀಮಿತರಾಗಿದ್ದಾರೆ.
ಕೋವಿಡ್ 19 ಭೀತಿಯಿಂದ ಮನೆಯಿಂದ ಹೊರಬರಲಾರದೆ ಕಂಗೆಟ್ಟಿರುವ ಜನರಿಗೆ ಇಷ್ಟು ಸಾಕೆ? ಅವರ ಹಸಿವಿನ ಕಥೆಯೇನು, ಅವರ ಬದುಕೇನು? ರೋಗದಿಂದ ತಪ್ಪಿಸಿಕೊಳ್ಳೋದಾ, ಹಸಿವಿನಿಂದ ತಪ್ಪಿಸಿಕೊಳ್ಳೋದಾ ಎಂಬ ಪ್ರಶ್ನೆ ಕಾಡುತ್ತಿದೆ. ಜಿಲ್ಲೆಯ ಅನೇಕ ಸಂಘ-ಸಂಸ್ಥೆ, ಸಾಮಾಜಿಕ ಕಾರ್ಯಕರ್ತರು ದಾನಿಗಳಿಂದ ಆಹಾರ ಧಾನ್ಯ ಪಡೆದು ತಮ್ಮ ಕೈಲಾದ ಮಟ್ಟಿಗೆ ಬಡವರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಜನಪ್ರತಿನಿಧಿಗಳು ಎನಿಸಿಕೊಂಡಿರುವವರು ಬಾಯಿ ಮಾತಿನಿಂದ ಬಡವರ ಹೊಟ್ಟೆ ತುಂಬಿಸಲು ಹೊರಟಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.
-ಸಂದೀಪ ಜಿ.ಎನ್. ಶೇಡ್ಗಾರ್