Advertisement
ಮಣಿಪಾಲ: ಕೋವಿಡ್-19 ವೈರಸ್ ಸೋಂಕು ವಿಶ್ವಾದ್ಯಂತ ಹರಡುತ್ತಿದ್ದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ಸಂಚಾರ ಬಹುತೇಕ ರದ್ದುಗೊಂಡಿದೆ. ಕೆಲವು ತುರ್ತು ವಿಮಾನಗಳ ಸಂಚಾರ ಹೊರತುಪಡಿಸಿದಂತೆ ಭಾರತವೂ ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ವಿಮಾನ ಯಾನ ಸಂಪೂರ್ಣ ರದ್ದುಗೊಂಡಿದ್ದರೆ, ಇನ್ನು ಕೆಲವೆಡೆ ಆಂಶಿಕವಾಗಿ ಸಂಚಾರ ರದ್ದು ಪಡಿಸಲಾಗಿದೆ. ಕೆಲವು ದೇಶಗಳಲ್ಲಿ ದೇಶಿ ವಿಮಾನ ಯಾನ ಸಂಚಾರ ರದ್ದುಗೊಂಡಿಲ್ಲ. ಆದರೆ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ರದ್ದುಗೊಳಿಸಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ರದ್ದುಗೊಳಿಸಿದ ಈ ಬೆಳವಣಿಗೆಯಿಂದ ವಿಮಾನಯಾನವೂ ಹೊರತಾಗಿಲ್ಲ. ಇದರಿಂದ ಜಾಗತಿಕವಾಗಿ ನಾಗರಿಕ ವಿಮಾನ ಯಾನ ಸಂಸ್ಥೆಗಳು ಕೋಟ್ಯಂತರ ರೂ. ನಷ್ಟವನ್ನು ಅನುಭವಿಸಿವೆ.
ಏರ್‌ಟ್ರಾಫಿಕ್ ಸಂಬಂಧಪಟ್ಟಂತೆ ಅಂತಾರಾಷ್ಟ್ರೀಯ ವಿಮಾನ ಪ್ರಯಾಣದಲ್ಲಿ ಶೇ. 50ರಷ್ಟು ಕುಸಿತವಾಗಿದೆ. ಇನ್ನು ಫ್ಲೈಟ್ ರಾಡರ್ ಸಂಸ್ಥೆ ನೀಡಿರುವ ಅಂಕಿ -ಅಂಶದಲ್ಲಿ ಕೇವಲ ವಾಣಿಜ್ಯೇತರ ವಿಮಾನಯಾನ ಸಂಸ್ಥೆಗಳ ಮಾಹಿತಿ ಮಾತ್ರ ಉಲ್ಲೇಖವಾಗಿದ್ದು, ವಾಣಿಜ್ಯ ವಿಮಾನಗಳ ಕಾರ್ಯಾಚರಣೆ ಕುರಿತಾದ ಅಂಕಿ-ಅಂಶ ಇದರಲ್ಲಿ ಒಳಗೊಂಡಿಲ್ಲ. ಒಂದು ವೇಳೆ ಎಲ್ಲ ವಾಣಿಜ್ಯ ಸಂಸ್ಥೆಗಳ ಮಾಹಿತಿ ಸಿಕ್ಕಲ್ಲಿ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚಲಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಶೇ. 40ರಷ್ಟು ಕುಸಿತ
ಸಾರಿಗೆ ವ್ಯವಸ್ಥೆಗಳ ಕುರಿತಾಗಿ ವರದಿ ಮಾಡುವ ಒಎಜಿ ಸಂಸ್ಥೆ ಪ್ರಕಾರ ಈ ವಾರದಲ್ಲಿ ವಿಮಾನಗಳ ಹಾರಾಟ ಪ್ರಮಾಣದಲ್ಲಿ ಶೇ.48ರಷ್ಟು ಕುಸಿದಿದ್ದು, ಕಳೆದ ವರ್ಷ ಇದೇ ವೇಳೆ ಕೇವಲ ಶೇ.8ರಷ್ಟು ಮಾತ್ರ ವಿಮಾನಗಳನ್ನು ರದ್ದುಗೊಳಿಸಲಾಗಿತ್ತು. ಆದರೆ ಈ ಬಾರಿ ಕೋವಿಡ್-19 ಸೋಂಕು ತೀವ್ರಗೊಂಡ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳ ಮಧ್ಯದಿಂದ ಶೇ.48ರಷ್ಟು ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಅಮೆರಿಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 72 ರಷ್ಟು ಅಂತಾರಾಷ್ಟ್ರೀಯ ವಿಮಾನ ಹಾರಾಟ ಕಡಿಮೆಯಾಗಿದೆ. ದೇಶೀ ವಿಮಾನಗಳ ಸಂಚಾರ ಶೇ. 18 ರಷ್ಟು ಇಳಿಕೆಯಾಗಿದೆ. ಬ್ರಿಟನ್ ನಲ್ಲಿ ಶೇ. 81 ರಷ್ಟು ಅಂತಾರಾಷ್ಟ್ರೀಯ ವಿಮಾನ ಸಂಚಾರ ರದ್ದಾಗಿದ್ದು, ಶೇ. 60 ರಷ್ಟು ದೇಶೀ ವಿಮಾನಗಳು ಸಂಚಾರವನ್ನು ರದ್ದುಗೊಳಿಸಿವೆ.
Related Articles
ಇನ್ನು ಲಾಕ್‌ಡೌನ್ ಜಾರಿಯಲ್ಲಿದ್ದು, ಪ್ರಯಾಣಿಕರು ಇಲ್ಲದಿದ್ದರೂ ಸಾವಿರಾರು ವಿಮಾನಗಳು ಹಾರಾಟ ನಡೆಸುತ್ತಿವೆ. ಅಂತಾರಾಷ್ಟ್ರೀಯ ಮಾರ್ಗವಾಗಿ ಹಾರಾಡುವ ಕೆಲ ವಿಮಾನಗಳು ಪರವಾನಗಿ ಉಳಿಸಿಕೊಳ್ಳಲು ನಿರ್ದಿಷ್ಟ ಪ್ರಮಾಣದಲ್ಲಿ ಹಾರಾಟ ನಡೆಸಬೇಕೆಂಬ ನಿಯಮವೇ ಇದಕ್ಕೆ ಕಾರಣ. ಈಗ ಯುರೋಪಿಯನ್ ಒಕ್ಕೂಟ ಪ್ರಾಂತ್ಯದಲ್ಲಿ ನಿಯಮವನ್ನು ಸಡಿಲಿಸಿದ್ದು, ಮಾರ್ಗಗಳನ್ನು ರದ್ದುಗೊಳಿಸಿದೆ. ಆದರೂ ಹಲವು ದೇಶಗಳಲ್ಲಿ ದೇಶಿ ವಿಮಾನ ಸಂಚಾರ ಸಂಪೂರ್ಣವಾಗಿ ರದ್ದುಗೊಳ್ಳದ ಕಾರಣ ಸಾವಿರರಾರು ವಿಮಾನಗಳು ಹಾರಾಡುತ್ತಿವೆ.
Advertisement
ಪರಿಸರಕ್ಕೆ ಒಳ್ಳೆಯದಾಯಿತು !ವಿಮಾನಯಾನ ಸಂಚಾರ ರದ್ದಿನಿಂದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದರೂ ಪರಿಸರಕ್ಕೆ ಅನುಕೂಲವಾಗಿದೆ. ಯಾಕೆಂದರೆ, ವಿಮಾನ ಯಾನ ರದ್ದಿನಿಂದ ಹಸಿರು ಅನಿಲ ಉತ್ಪಾದನೆ ಪ್ರಮಾಣ ಬಹಳಷ್ಟು ಇಳಿಕೆಯಾಗಿದೆ. ಕೋವಿಡ್-19 ವೈರಸ್ ಆವರಿಸಿಕೊಳ್ಳುವ ಮೊದಲು ವಿಮಾನ ಸಂಚಾರದಿಂದ ವಾಯು ಮಾಲಿನ್ಯ ಮಟ್ಟ ನಿರಂತರವಾಗಿ ಏರಿಕೆಯಾಗುತ್ತಿತ್ತು. ಒಂದು ಅಂದಾಜಿನಲ್ಲಿ ಹೇಳುವುದಾದರೆ 1990 ರಿಂದ 2019 ರಷ್ಟೊತ್ತಿಗೆ ವಾಯು ಮಾಲಿನ್ಯ ಮಟ್ಟ ದ್ವಿಗುಣಗೊಂಡಿತ್ತು. ಅಮೆರಿಕದಲ್ಲೂ ಸಹ ಹೆಚ್ಚು ಮಾಲಿನ್ಯ ಉಂಟು ಮಾಡುತ್ತಿರುವ ವಿಮಾನಗಳ ಸಂಚಾರವನ್ನು ರದ್ದುಪಡಿಸಿ ಎಂದೂ ಪರಿಸರ ಸಂಘಟನೆಗಳು ಆಗ್ರಹಿಸುತ್ತಿದ್ದವು. ಪ್ಯಾರಿಸ್ ಪರಿಸರ ಒಪ್ಪಂದದ ಹಿನ್ನೆಲೆಯಲ್ಲಿ 60 ಬಿಲಿಯನ್ ಪರಿಹಾರ ಪ್ಯಾಕೇಜ್ ನ್ನೂ ಯುಎಸ್ ಸಂಸತ್ತು ಅನುಮೋದನೆ ಮಾಡಿತ್ತು. ಹಾಗೆಯೇ ಬ್ರಿಟನ್‌ನಲ್ಲೂ 26 ಪರಿಸರ ಸಂಘಟನೆಗಳೂ ಸಹ ಪರಿಸರ ಸ್ನೇಹಿ ಕ್ರಮಗಳಿಗೆ ಒತ್ತಾಯಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ಯಾನ ಸಂಸ್ಥೆಯೂ ಹಲವಾರು ಕ್ರಮಗಳನ್ನು ಕೈಗೊಂಡಿತ್ತು. ಅದು ಜಾರಿಯಾಗುವಷ್ಟರಲ್ಲಿ ಕೋವಿಡ್-19 ವೈರಸ್ ದಾಳಿ ಉದ್ಯಮಕ್ಕೆ ಬಡಿದಿದೆ.