Advertisement
ಯುಗಾದಿ ದೇಶದ ವಿವಿಧ ದೇಶಗಳಲ್ಲಿ ಆಚರಣೆ ಮಾಡಲಾಗುತ್ತಿದೆ ಯಾದರು, ವಿಶೇಷವಾಗಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಹೊಸವರ್ಷದ ಆರಂಭವೆಂದೇ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೊಡ್ಡ ಹಬ್ಬ ಎಂದೇ ಕರೆಯಲ್ಪಡುವ ಯುಗಾದಿಯನ್ನು ಎಲ್ಲ ವರ್ಗದವರೂ ಕೈಲಾದ ಮಟ್ಟಿಗೆ ಆಚರಿಸುತ್ತಾರೆ. ಆದರೆ, ಈ ಬಾರಿ ಯುಗಾದಿ ಆಚರಣೆ ಕಳೆಗುಂದುವ ಎಲ್ಲ ಲಕ್ಷಣ ಗೋಚರಿಸುತ್ತಿದೆ.
Related Articles
Advertisement
ಕೋವಿಡ್ 19 ಭೀತಿಯಿಂದಾಗಿ ನಗರ ಪ್ರದೇಶದ ಬಹುತೇಕ ದೇವಸ್ಥಾನ, ಮಂದಿರಗಳನ್ನು ಬಂದ್ ಮಾಡಲಾಗಿದೆ. ಜಾತ್ರೆ, ಸಂತೆ, ಪ್ರವಚನಗಳನ್ನು ನಿಷೇಧಿಸಲಾಗಿದೆ. ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರವಚನ ಸುಮಾರು 16 ವರ್ಷಗಳ ನಂತರದಲ್ಲಿ ಹುಬ್ಬಳ್ಳಿಗೆ ಸಿಕ್ಕಿತ್ತು. ಈ ವರ್ಷದ ಯುಗಾದಿ ಹಬ್ಬವನ್ನು ಸಿದ್ಧೇಶ್ವರ ಸ್ವಾಮೀಜಿಯವರು ನಮ್ಮ ನಗರದಲ್ಲೇ ಆಚರಿಸುತ್ತಾರೆ. ನಮ್ಮೆಲ್ಲರ ಪುಣ್ಯ ಎಂದೇ ಅನೇಕರು ಭಾವಿಸಿದ್ದರು. ಕೊರೊನಾ ಕಾರಣದಿಂದ ಶ್ರೀಗಳ ಪ್ರವಚನ ಸಹ ಪೂರ್ಣವಾಗದ ನೋವು ಭಕ್ತರಲ್ಲಿದೆ.
ಹಬ್ಬದ ಖರೀದಿಗೆ ಮುಂದಾದರೂ ನಗರಗಳಲ್ಲಿ ಅಷ್ಟೇ ಅಲ್ಲದೆ, ಅರೆ ಪಟ್ಟಣ ಪ್ರದೇಶದಲ್ಲೂ ಬಟ್ಟೆ ಅಂಗಡಿ, ಸಂತೆಗಳನ್ನು ಬಂದ್ ಮಾಡಿದ್ದರಿಂದ ಖರೀದಿ ಸಾಧ್ಯವಾಗುತ್ತಿಲ್ಲ. ಹಣ್ಣು, ಪೂಜಾ ಸಾಮಗ್ರಿ ಖರೀದಿಗೂ ಅವಕಾಶ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಇನ್ನು ಯುಗಾದಿ ಪಾಡ್ಯದ ದಿನದಂದು ಬೇವು-ಬೆಲ್ಲವನ್ನು ಪರಸ್ಪರ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ತಿಳಿಸಲಾಗುತ್ತದೆ. ಉತ್ತರ ಕರ್ನಾಟಕದ ಕೆಲವೊಂದು ಜಿಲ್ಲೆಗಳಲ್ಲಿ ಪಾನಕ ರೂಪದ ಬೇವು ತಯಾರಿಸಿ ನೆರೆ ಹೊರೆಯವರಿಗೆ ನೀಡಲಾಗುತ್ತದೆ. ಕೋವಿಡ್ ಭೀತಿ ಪರಸ್ಪರ ವಿನಿಮಯಕ್ಕೂ ಅಡ್ಡಿಯುಂಟು ಮಾಡಿದೆ.
ಹಬ್ಬಕ್ಕೂ ಹೋಗದ ಸ್ಥಿತಿ: ಗ್ರಾಮೀಣದಿಂದ ನಗರ ಪ್ರದೇಶಕ್ಕೆ ವಲಸೆ ಬಂದವರು ಯಾವುದೇ ಹಬ್ಬಕ್ಕೆ ಹೋಗದಿದ್ದರೂ ಯುಗಾದಿ ಹಬ್ಬಕ್ಕೆ ತಮ್ಮ ಗ್ರಾಮಗಳಿಗೆ ಹೋಗುತ್ತಿದ್ದರು. ಆದರೆ ಬೆಂಗಳೂರು, ಮಂಗಳೂರು, ಗೋವಾ, ಪುಣೆ, ಮುಂಬಯಿ ಇನ್ನಿತರ ಕಡೆಗಳಲ್ಲಿರುವ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಜನರು ಈ ಬಾರಿ ಹಬ್ಬಕ್ಕೂ ತಮ್ಮ ಸ್ವಗ್ರಾಮಗಳಿಗೆ ಬಾರದ ಸ್ಥಿತಿ ನಿರ್ಮಾಣಗೊಂಡಿದೆ. ಬೆಂಗಳೂರು ಇನ್ನಿತರ ಕಡೆಗಳಿಂದ ಬರಬೇಕೆಂದರೆ ದುಡಿಯುವ ವರ್ಗ ಸಾರಿಗೆ ಸಂಸ್ಥೆ ಬಸ್ ಹಾಗೂ ರೈಲುಗಳನ್ನೇ ನಂಬಿಕೊಂಡಿದೆ. ಕೋವಿಡ್ 19 ಹೊಡೆತದಿಂದ ಸರಕಾರ ಇಡೀ ರಾಜ್ಯವನ್ನೇ ಬಂದ್ ಮಾಡಿದ್ದು, ಮಾ. 31ರ ವರೆಗೆ ಬಸ್, ರೈಲು ಸಂಚಾರವನ್ನು ಸಂಪೂರ್ಣ ರದ್ದುಗೊಳಿಸಿದ್ದರಿಂದ ಗ್ರಾಮೀಣಕ್ಕೆ ಜನರು ಬಾರದಂತಾಗಿದ್ದು, ಹಬ್ಬದಿಂದ ದೂರ ಉಳಿಯಬೇಕಾಗಿದೆ.
-ಅಮರೇಗೌಡ ಗೋನವಾರ