Advertisement

ಪರೀಕ್ಷೆಗಾಗಿ ಗೋಗರೆದ ಯೋಧ!

09:36 AM Mar 29, 2020 | Sriram |

ಬೆಳಗಾವಿ: “ಕೋವಿಡ್‌-19 ಎಲ್ಲ ಲಕ್ಷಣಗಳು ನನ್ನಲ್ಲಿ ನೂರಕ್ಕೆ ನೂರರಷ್ಟಿವೆ. ದಯವಿಟ್ಟು ನನ್ನನ್ನು ಪರೀಕ್ಷೆಗೆ ಒಳಪಡಿಸಿ’ ಎಂದು ಸಿಆರ್‌ಪಿಎಫ್‌ ಯೋಧನೊಬ್ಬ ಗೋಗರೆದ ವೀಡಿಯೋ ವೈರಲ್‌ ಆಗುತ್ತಿದ್ದಂತೆ ಆತನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ.

Advertisement

ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದ ಈ ಯೋಧ ತನ್ನ ಮನೆಯಲ್ಲಿ ಮುಖಕ್ಕೆ ಮಾಸ್ಕ್ ಕಟ್ಟಿಕೊಂಡು ಮಾಡಿರುವ ವೀಡಿಯೋ ಎಲ್ಲೆಡೆ ವೈರಲ್‌ ಆಗಿದೆ. ಕಳೆದ ಮಾ. 17ರಂದು ಹೈದರಾಬಾದ್‌ನಿಂದ ಸ್ವಗ್ರಾಮಕ್ಕೆ ಬಂದಿರುವ ಯೋಧನಿಗೆ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡಿದ್ದು, ಮನೆಯಲ್ಲಿಯೇ ಸ್ವಯಂ ಕ್ವಾರಂಟೈನ್‌ಗೆ ಒಳಪಟ್ಟಿದ್ದ. ಈ ಮಧ್ಯೆ ಹುಬ್ಬಳ್ಳಿಯ ಕಿಮ್ಸ್‌ಗೆ ತೆರಳಿ ಕೋವಿಡ್‌-19 ಲಕ್ಷಣಗಳಿವೆ, ಕೂಡಲೇ ತನ್ನನ್ನು ದಾಖಲಿಸಿಕೊಳ್ಳುವಂತೆ ಕೋರಿದ್ದ. ಆದರೆ ಅಂಥ ಯಾವುದೇ ಲಕ್ಷಣಗಳಿಲ್ಲ, ವಿದೇಶದಿಂದ ಬಂದವರಿಗೆ ಮಾತ್ರ ಕೋವಿಡ್‌-19 ತಪಾಸಣೆ ಮಾಡುವುದಾಗಿ ವೈದ್ಯರು ಹೇಳಿ ಕಳುಹಿಸಿದ್ದರು. ಬಳಿಕ ಧಾರವಾಡ ಜಿಲ್ಲಾಸ್ಪತ್ರೆಗೆ ಹೋದಾಗಲೂ ಇದೇ ಉತ್ತರ ಬಂದಿದ್ದರಿಂದ ಮನೆಯಲ್ಲಿಯೇ ಔಷಧ ಪಡೆದು ಸ್ವಯಂ ಕ್ವಾರಂಟೈನ್‌ ಮಾಡಿ ಕೊಂಡಿದ್ದ. ಕಿಮ್ಸ್‌ ವೈದ್ಯರ ನಡವಳಿಕೆಯಿಂದ ಮನನೊಂದ ಯೋಧ ವೀಡಿಯೋ ಮಾಡಿ ತನ್ನನ್ನು ಪರೀಕ್ಷೆಗೆ ಒಳಪಡಿಸಲು ವೈದ್ಯರಿಗೆ ತಿಳಿಸುವಂತೆ ಸಿಎಂ ಯಡಿಯೂರಪ್ಪ ಅವರನ್ನು ಕೋರಿದ್ದ.

ತಾಯಿಗೂ ನೆಗಡಿ, ಕೆಮ್ಮು ಶುರುವಾಗಿದೆ. ಇದರಿಂದ ಇಬ್ಬರಿಗೂ ಸಂಕಟವಾಗುತ್ತಿದೆ. ಒಬ್ಬ ಯೋಧನಿಗೆ ಈ ಪರಿಸ್ಥಿತಿ ಬಂದರೆ ಸಾಮಾನ್ಯನ ಗತಿ ಏನು? ದಯವಿಟ್ಟು ನನಗೆ ಸಹಾಯ ಮಾಡಿ ಎಂದೂ ವೀಡಿಯೋದಲ್ಲಿ ಮನವಿ ಮಾಡಿಕೊಂಡಿದ್ದನು. ಯೋಧನಿಗೆ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತಂಕ ಪಡುವ ಅಗತ್ಯವಿಲ್ಲ ಎಂದು ಡಿಸಿ ಡಾ| ಎಸ್‌.ಬಿ.ಬೊಮ್ಮನಹಳ್ಳಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next