ಕಲಬುರಗಿ: ಕೊರೊನಾ ಸೋಕಿನಿಂದ ಮೃತಪಟ್ಟ ವೃದ್ಧ ವ್ಯಕ್ತಿಯ ಕುಟುಂಬದ ಮತ್ತೊಬ್ಬ ವ್ಯಕ್ತಿಗೂ ಸೋಂಕು ಇರುವುದು ದೃಢಪಟ್ಟಿದೆ.
ಮೃತ ವೃದ್ಧನ ನೇರ ಸಂಪರ್ಕದಲ್ಲಿದ್ದ ವ್ಯಕ್ತಿಯ ರಕ್ತ ಮತ್ತು ಕಫದ ಪರೀಕ್ಷೆಯಲ್ಲಿ ಕೊರೊನಾ ಇರುವುದು ಖಚಿತವಾಗಿದ್ದು, ಕಲಬುರಗಿ ಜನತೆಯನ್ನು ಮತ್ತಷ್ಟು ಚಿಂತೆಗೀಡು ಮಾಡುವಂತೆ ಮಾಡಿದೆ.
ದೇಶದಲ್ಲೇ ಮೊದಲ ಕಲಬುರಗಿಯಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿಯಾಗಿದ್ದು, ಈ ಸೋಂಕಿತ ವ್ಯಕ್ತಿಯೊಂದಿಗೆ ನಾಲ್ವರು ನೇರ ಸಂಪರ್ಕದಲ್ಲಿದ್ದರು. ಈ ನಾಲ್ವರ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿತ್ತು. ಶನಿವಾರ ಮೂವರಿಗೆ ಸೋಂಕು ಇಲ್ಲ ಎಂದು ವರದಿ ಬಂದಿತ್ತು. ರವಿವಾರ ನಾಲ್ಕನೇ ವ್ಯಕ್ತಿಗೆ ಪಾಸಿಟಿವ್ ಎಂದು ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಸ್ಪಷ್ಟ ಪಡಿಸಿದ್ದಾರೆ.
ಕಲಬುರಗಿ ಜಿಲ್ಲಾದ್ಯಂತ ಸಂತೆ, ಜಾತ್ರೆ ಮತ್ತು ಉರುಸ್ ನಿಷೇಧ
ಕಲಬುರಗಿ: ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ಜಿಲ್ಲಾದ್ಯಂತ ಎಲ್ಲ ರೀತಿಯ ಸಂತೆ, ಜಾತ್ರೆ ಮತ್ತು ಉರುಸ್ ಗಳನ್ನು ರದ್ದು ಮಾಡಿ ಆದೇಶ ಹೊರಡಿಸಲಾಗಿದೆ.
ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರ ಬಳಸಿ ಸಿಆರ್ ಪಿಸಿ 133 ಸೆಕ್ಷನ್ ರನ್ವಯ ನಿಷೇಧಿಸಿದ್ದಾರೆ. ಮುಂದಿನ ಆದೇಶದವರೆಗೂ ಈ ಆದೇಶ ಜಾರಿಯಲ್ಲಿ ಇರುತ್ತದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.