Advertisement

ಪಾಕಿಸ್ಥಾನ : ಏಕಾಏಕಿ ಸೋಂಕು ಪ್ರಕರಣ ಹೆಚ್ಚಳ

12:16 PM May 09, 2020 | sudhir |

ಮಣಿಪಾಲ: ದೇಶದ ಶೇ.25ರಷ್ಟು ಜನಸಂಖ್ಯೆಯ ಬಡವರನ್ನು ಹೊಂದಿರುವ ಪಾಕಿಸ್ತಾನದ ಪಾಲಿಗೆ ಕೋವಿಡ್‌-19 ಸಿಡಿಲಿನಂತೆ ಅಪ್ಪಳಿಸಿದ್ದು, ಉಂಟಾಗಿರುವ ನಷ್ಟವು ಊಹೆಗೂ ನಿಲುಕುತ್ತಿಲ್ಲ. ದೇಶಾದ್ಯಂತ ವಿಧಿಸಿರುವ ದಿಗ್ಬಂಧನದಿಂದಾಗಿ ಅಂದಾಜು 1.87 ಕೋಟಿ ಜನ ತಮ್ಮ ಕೆಲಸಗಳನ್ನು ಕಳೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಈ ಮಧ್ಯೆ ಶುಕ್ರವಾರ ಒಂದೇ ದಿನ ಅತೀ ಹೆಚ್ಚು ಸೋಂಕು ಪ್ರಕರಣ ದಾಖಲಾಗಿದ್ದು, ಒಟ್ಟಾರೆ ಪ್ರಕರಣಗಳು 25 ಸಾವಿರ ಗಡಿ ದಾಟಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

Advertisement

ಒಂದೇ ದಿನದಲ್ಲಿ 1,791
ಕಳೆದ 24 ಗಂಟೆಗಳಲ್ಲಿ 1,791 ಹೊಸ ಪ್ರಕರಣಗಳು ದಾಖಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 26,437ಕ್ಕೆ ಏರಿದೆ. ಸಾವಿನ ಪ್ರಮಾಣವೂ ಹೆಚ್ಚಳವಾಗುತ್ತಿದ್ದು, ಪ್ರಾರಂಭಿಕ ಹಂತದಲ್ಲಿ ಬೆರಳಣಿಕೆಯಷ್ಟಿದ್ದ ಮೃತಪಟ್ಟವರ ಸಂಖ್ಯೆ 600ಕ್ಕೆ ಏರಿದೆ. ಸರಕಾರ ಲಾಕ್‌ಡೌನ್‌ ತೆರವು ಘೋಷಣೆಯ ಬೆನ್ನಲ್ಲೇ ಸೋಂಕು ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ.

ಲಾಕ್‌ಡೌನ್‌ ತೆರವು
ಪಾಕ್‌ ದೇಶದಲ್ಲೂ ಆರ್ಥಿಕ ಹಿಂಜರಿತದ ಭೀತಿ ಹೆಚ್ಚುತ್ತಿದ್ದು, ಪ್ರಧಾನಿ ಇಮ್ರಾನ್‌ ಖಾನ್‌ ಮುಳುಗುತ್ತಿರುವ ದೇಶದ ಆರ್ಥಿಕ ಕ್ಷೇತ್ರದ ಸ್ಥಿರತೆ ಕಾಯ್ದುಕೊಳ್ಳಲು ಲಾಕ್‌ಡೌನ್‌ ತೆರವು ಘೋಷಿಸಿದರು. ಸೀಮಿತ ಸಮಯವಾಕಾಶದಲ್ಲಿ ಸಣ್ಣಪುಟ್ಟ ಅಂಗಡಿಗಳು ಮತ್ತು ಮಾರುಕಟ್ಟೆಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಪಾಕಿಸ್ತಾನ ಅಧಿಕಾರಿಗಳು ಹೇಳಿದ್ದು, ದೊಡ್ಡ ಮಾಲ್‌ಗ‌ಳು ಸೇರಿದಂತೆ ಸಾರ್ವಜನಿಕ ಸ್ಥಳಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ. ಜುಲೈ ಮಧ್ಯದವರೆಗೆ ಶಾಲೆಗಳು ಮುಚ್ಚಿರಲಿದ್ದು, ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಮರ್ಥನೆ ನೀಡಿದ ಪ್ರಧಾನಿ
ದೇಶದ ಬಡ ವರ್ಗದ ಜನರು ಸಂಕಷ್ಟಕ್ಕೆ ಸಿಲುಕುತ್ತಿದ್ದು, ಅವರಿಗೆ ನೆರವಾಗುವ ದೃಷ್ಟಿಯಿಂದ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದೆ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದು, ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ನಿಯಮಗಳು ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಸೋಂಕು ತೀವ್ರ ಮಟ್ಟದಲ್ಲಿ ಹರಡಬಹುದು ಎಂದು ಎಚ್ಚರಿಸಿದ್ದಾರೆ.

ಸರಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳನ್ನು ತಜ್ಞರು ಮತ್ತು ವೈದ್ಯರು ಟೀಕಿಸಿದ್ದು, ದೇಶಕ್ಕೆ  ಎದುರಾಗಿರುವ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಸರಕಾರ ವಿಫಲವಾಗಿದೆ  ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next