ಕೈರೋ: ಈಜಿಪ್ಟ್ ನ ರಾಜಧಾನಿ ಕೈರೋ ಮತ್ತು ಆಫ್ರಿಕಾದ ಗಿಜಾ ಈ ಎರಡು ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈಶಾನ್ಯ ಆಫ್ರಿಕಾದ ಹೆಚ್ಚು ಜನ ಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಒಂದಾಗಿರುವ ಕಾರಣ ಗಿಜಾ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಅತೀ ಹೆಚ್ಚು ಪ್ರಕರಣಗಳು ದಾಖಲಾಗಿರುವ ಪಟ್ಟಿಯಲ್ಲಿ ಈಜಿಪ್ಟ್ ನ ಅಲೆಕ್ಸಾಂಡ್ರಿಯಾ ಮೂರನೇ ಸ್ಥಾನದಲ್ಲಿ ಇದೆ. ಇದು ಪ್ರವಾಸೋದ್ಯಮಕ್ಕೆ ಹೆಚ್ಚು ಹೆಸರಾಗಿರುವ ಕೇಂದ್ರ. ಜನರು ರಜಾದಿನಗಳಲ್ಲಿ ಇಲ್ಲಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಗ್ರೇಟರ್ ಕೈರೋನ ಕಲ್ಯುಬಿಯಾ ಪ್ರಾಂತ, ಉತ್ತರ ಮೆನೊಫಿಯಾ ಪ್ರಾಂತ, ಈಶಾನ್ಯದ ಡಾಮಿಯೆಟ್ಟಾದಲ್ಲಿ ಕೋವಿಡ್ ಹೆಚ್ಚು ಪತ್ತೆಯಾಗಿದೆ.
ಎಪ್ರಿಲ್ ಅಂತ್ಯದಲ್ಲಿ ಉತ್ತರ ಸಿನಾಯ್‌ನಲ್ಲೊ ಮೊದಲ ಕೋವಿಡ್ ವೈರಸ್ ಸೋಂಕು ಪತ್ತೆಯಾಗಿತ್ತು. ದೇಶದ ವಾಯುವ್ಯ ಭಾಗದಲ್ಲಿರುವ ಮ್ಯಾಟೌಹ್ ಗವರ್ನರೇಟ್ ಅತ್ಯಂತ ಕಡಿಮೆ ಪ್ರಮಾಣದ ಸೋಂಕನ್ನು ದಾಖಲಿಸಿದೆ.
ಈಜಿಪ್ಟ್ ನಲ್ಲಿ ಸೋಂಕಿತರ ಸಂಖ್ಯೆ 300 ದಾಟಿದ ಬಳಿಕ ಶಾಲೆಗಳಿಗೆ ರಜೆ ನೀಡಲಾಯಿತು. ಮಿಲಿಟರಿ ಪ್ರಾಬಲ್ಯ ಇರುವುದರಿಂದ ಜನರು ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಈಗ ಕರ್ಫ್ಯೂ ಜಾರಿಯಲ್ಲಿದ್ದು, ಸಂಜೆ 5ರಿಂದ ಬೆಳಗ್ಗೆ 6ರ ತನಕ ಎಲ್ಲವೂ ಬಂದ್ ಆಗಿರುತ್ತದೆ. ಒಂದು ವೇಳೆ ಕಾನೂನು ಉಲ್ಲಂಘಿಸಿದರೆ 250 ಅಮೆರಿಕನ್ ಡಾಲರ್ ದಂಡ/ಕಾರಾಗೃಹ ವಿಧಿಸಲಾಗುತ್ತದೆ. ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಕೆಲವು ಖಾಸಗಿ ಕಂಪನಿಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಾರೆ.
ದೇಶದ ಆರ್ಥಿಕ ಪರಿಸ್ಥಿತಿಯೂ ಅಷ್ಟು ಉತ್ತಮವಾಗಿಲ್ಲ. ಮುಖ್ಯವಾಗಿ ವಿದೇಶಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಪ್ರವಾಸೋದ್ಯಮದಿಂದ ಹೆಚ್ಚಿನ ಆದಾಯ ಬರುತ್ತದೆ. ಆದರೆ ಈ ಬಾರಿ ಲಾಕ್‌ಡೌನ್ ಕಾರಣ ಆದಾಯ ಕುಸಿತವಾಗಿದೆ.
ಈ ತನಕ ಒಟ್ಟು 6,813 ಕೋವಿಡ್ ಪ್ರಕರಣಗಳು ಈಜಿಪ್ಟ್ ನಲ್ಲಿ ದಾಖಲಾಗಿದ್ದು, 1,632 ಮಂದಿ ಗುಣಮುಖರಾಗಿದ್ದಾರೆ. 436 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ.