Advertisement

ಬೀದರನಲ್ಲಿ ಹೆಚ್ಚುತ್ತಿದೆ ಕೋವಿಡ್-19

08:34 PM Mar 19, 2021 | Team Udayavani |

ಬೀದರ ; ಗಡಿ ನಾಡು ಬೀದರನಲ್ಲಿ ಎರಡನೇ ಅಲೆ ರೂಪದಲ್ಲಿ ಅಪ್ಪಳಿಸಿರುವ ಹೆಮ್ಮಾರಿ ಕೊರೊನಾ ತನ್ನ ಆರ್ಭಟವನ್ನು ಮತ್ತೆ ಮುಂದುವರೆಸಿದೆ. ಹೊಸದಾಗಿ ಶುಕ್ರವಾರ ಮತ್ತೆ 40 ಹೊಸ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದರೆ, ಓರ್ವ ವೃದ್ಧೆ ಸಾವು ಸಂಭವಿಸಿದೆ. ಕೇವಲ 6 ದಿನಗಳಲ್ಲಿ 250 ಸೋಂಕಿತರು ಪತ್ತೆಯಾಗಿರುವುದು ಜಿಲ್ಲೆಯಲ್ಲಿ ಆತಂಕ ಹೆಚ್ಚಿಸಿದೆ.

Advertisement

ನೆರೆಯ ಮಹಾರಾಷ್ಟ್ರದಲ್ಲಿ ಕೊವೀಡ್ ಸೋಂಕು ತನ್ನ ಕೆನ್ನಾಲಿಗೆಯನ್ನು ಚಾಚುತ್ತಿದೆ. ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಬೀದರ ಜಿಲ್ಲೆಗೂ ನಿಧಾನವಾಗಿ ಹಬ್ಬುತ್ತಿದೆ ಎಂಬ ಆತಂಕ ಬಿಸಿಲೂರಿನ ಜನರನ್ನು ಕಾಡಲಾರಂಭಿಸಿದೆ. ಸೋಂಕಿತರ ಕೇಸ್‌ಗಳು ಕುಸಿಯುತ್ತ ಬಂದಿದ್ದರಿಂದ ಜಿಲ್ಲೆಯ ಜನರು ನಿಟ್ಟಿಸಿರುವ ಬಿಟ್ಟಿದ್ದರು. ಇದರಿಂದ ಸಾಮಾನ್ಯ ಜನಜೀವನ ಸಹ ಮೊದಲಿನಂತೆ ಯಥಾಸ್ಥಿತಿಗೆ ತಲುಪುತ್ತಿತ್ತು. ಆದರೆ, ಈಗ ಮತ್ತೊಮ್ಮೆ ಕೋವಿಡ್ ಕಂಟಕವಾಗಿ ಪರಿಣಮಿಸುತ್ತಿದ್ದು, ಎರಡು ದಿನದಲ್ಲಿ ಇಬ್ಬರನ್ನು ಬಲಿ ಪಡೆದಿದೆ.

ಸೋಂಕಿಗೆ ಗುರುವಾರ 47 ವರ್ಷದ ನ್ಯಾಯವಾದಿ ಮೃತಪಟ್ಟಿದ್ದರೆ, ಶುಕ್ರವಾರ 75 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಸಾರಿ ಹಿನ್ನಲೆ ಹೊಂದಿದ್ದ ಈಕೆ ಮಾ. 16ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮಾ. 14ರಿಂದ 6 ದಿನಗಳಲ್ಲಿ 250 ಪಾಸಿಟಿವ್ ಕೇಸ್ ವರದಿಯಾಗಿವೆ. ಮಾ. 14ರಂದು 36, 15ಕ್ಕೆ 27,  16ಕ್ಕೆ  52, 17ಕ್ಕೆ 77 ಮತ್ತು 18ಕ್ಕೆ 41 ಸೋಂಕಿತರು ಪತ್ತೆಯಾಗಿದ್ದಾರೆ.

ನ್ಯಾಯಾಧೀಶರು ಸೇರಿ ಸಿಬ್ಬಂದಿಗಳಿಗೆ ಸೋಂಕು ತಗುಲಿರುವುದು ಮತ್ತು ನ್ಯಾಯವಾದಿ ಸಾವು ಹಿನ್ನಲೆಯಲ್ಲಿ ಜಿಲ್ಲಾ ನ್ಯಾಯಾಲಯ ಪರಿಸರವನ್ನು ಕಂಟೇನೈಂಟ್ ಝೋನ್ ಎಂದು ಘೋಷಿಸಲಾಗಿದೆ. ಮಾ. 22ರವರೆಗೆ ಕೋರ್ಟ್ ಎಲ್ಲ ಶ್ರೇಣಿ ನ್ಯಾಯಾಲಯಗಳಲ್ಲಿ ಕಲಾಪಗಳನ್ನು ಬಂದ್ ಮಾಡಲಾಗಿದೆ.

ಅಷ್ಟೇ ಅಲ್ಲ ನಗರಸಭೆ ಸಿಬ್ಬಂದಿಗೆ ಪಾಸಿಟಿವ್ ಬಂದಿರುವುದರಿಂದ ಇಡೀ ಕಚೇರಿಯನ್ನು ಸೀಲ್ ಡೌನ್ ಮಾಡಿ ಸ್ಯಾನಿಟೈಜ್ ಮಾಡಲಾಗಿದೆ. ಕಚೇರಿ ಮುಖ್ಯ ದ್ವಾರದದಲ್ಲಿ ಸೀಲ್‌ಡೌನ್‌ನ ಫಲಕ ಹಾಕಲಾಗಿದೆ. ಸೋಂಕಿತರ ಸಂಪರ್ಕ ಹಿನ್ನಲೆಯಲ್ಲಿ ನಗರಸಭೆ ಅಧಿಕಾರಿ, ಸಿಬ್ಬಂದಿಗಳು ಹಾಗೂ ಪೌರ ಕಾರ್ಮಿಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಶನಿವಾರದವರೆಗೆ ಕಚೇರಿ ಸೀಲ್ ಡೌನ್ ಇರಲಿದ್ದು, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next