Advertisement

ಜಿಲ್ಲೆಯಲ್ಲಿ ಕೋವಿಡ್‌-19 ಅಟ್ಟಹಾಸ

12:43 AM Jun 05, 2020 | Sriram |

ಉಡುಪಿ: ಜಿಲ್ಲೆಯಲ್ಲಿ ಕೋವಿಡ್‌- 19 ಅಟ್ಟಹಾಸ ಮತ್ತೆ ಮುಂದುವರಿದಿದೆ. ಗುರುವಾರ ಒಂದೇ ದಿನ 92 ಪ್ರಕರಣಗಳು ದಾಖಲಾಗುವ ಮೂಲಕ ಪ್ರಕರಣಗಳ ಸಂಖ್ಯೆ 564ಕ್ಕೆ ತಲುಪಿದೆ. ಈ ಮೂಲಕ ಜೂನ್‌ ತಿಂಗಳ 1ರಿಂದ 4ರ ವರೆಗೆ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 376. ಈ ಮೂಲಕ ಉಡುಪಿ ಜಿಲ್ಲೆ ಮತ್ತೆ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದೆ.

Advertisement

ಜಿಲ್ಲೆಯಲ್ಲಿ ಮಾ. 25ಕ್ಕೆ ದುಬಾಯಿಯಿಂದ ಆಗಮಿಸಿದ ವ್ಯಕ್ತಿಗೆ ಮೊದಲ ಕೊರೊನಾ ಪಾಸಿಟಿವ್‌ ಪ್ರಕರಣ ದಾಖಲಾಗಿತ್ತು. ಅನಂತರ ಮಾ. 29ಕ್ಕೆ ಮತ್ತೆ ಎರಡು ಪ್ರಕರಣಗಳು ದಾಖಲಾಗಿದ್ದವು. ಒಟ್ಟು ಪ್ರಕರಣಗಳ ಸಂಖ್ಯೆ 3ಕ್ಕೆ ಏರಿದಾಗ ಕಟ್ಟುನಿಟ್ಟಿನ ಲಾಕ್‌ಡೌನ್‌ ಸಹಿತ ಜಿಲ್ಲಾಡಳಿತ ತೆಗೆದುಕೊಂಡ ನಿರ್ಧಾರಗಳಿಂದ ಸರಿಸುಮಾರು 1 ತಿಂಗಳಿಗೂ ಅಧಿಕ ಕಾಲ ಸೋಂಕು ನಿಯಂತ್ರಣಕ್ಕೆ ಬಂದಿತ್ತು. ಕಿತ್ತಳೆ ವಲಯದಲ್ಲಿದ್ದ ಜಿಲ್ಲೆ ಹಸುರು ವಲಯವೆಂದು ಘೋಷಣೆಯೂ ಆಯಿತು. ಆದರೆ ಅನಂತರ ಮಾತ್ರ ಪರಿಸ್ಥಿತಿ ಕೈಮೀರಿ ಹೋಯಿತು.

“ಮಹಾ’ಕಂಟಕಕ್ಕೆ ನಲುಗಿದ ಜಿಲ್ಲೆ
ಜಿಲ್ಲಾಡಳಿತದ ದಿಟ್ಟ ನಿರ್ಧಾರಗಳಿಂದ ಹತೋಟಿ ಯಲ್ಲಿದ್ದ ಪರಿಸ್ಥಿತಿ ಕಂಡು ಅದಾಗಲೇ ಅನ್ಯ ಜಿಲ್ಲೆ, ರಾಜ್ಯ ಗಳಲ್ಲಿದ್ದ ಉಡುಪಿ ಜಿಲ್ಲೆಯ ಮಂದಿ ಜಿಲ್ಲಾಡಳಿತದ ವಿರುದ್ದ ಹರಿಹಾಯಲು ಆರಂಭಿಸಿದ್ದರು. ಸಾಮಾಜಿಕ ಜಾಲತಾಣ ಗಳಲ್ಲಿಯೂ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಇಲ್ಲಸಲ್ಲದ ಟೀಕೆಗಳನ್ನು ಮಾಡಲಾಯಿತು. ಈ ನಡುವೆ ರಾಜಕೀಯದ ಹಸ್ತಕ್ಷೇಪವೂ ಆರಂಭವಾಯಿತು. ಅನಂತರ ಸೇವಾ ಸಿಂಧು ಆ್ಯಪ್‌ ಮೂಲಕ ನೋಂದಣಿ ಮಾಡಲು ಸೂಚಿಸಲಾಯಿತು. ಮೇ 5ರ ಅನಂತರ ಬಂದ ಮಹಾರಾಷ್ಟ್ರದವರನ್ನು ಜಿಲ್ಲಾಡಳಿತ ನಿಗದಿಪಡಿಸಿದ ಸ್ಥಳಗಳಲ್ಲಿ ಕ್ವಾರಂಟೈನ್‌ ಮಾಡಲಾಯಿತು. ಬಳಿಕ ಮತ್ತೆ 3ರಲ್ಲಿ ನಿಲುಗಡೆಯಾಗಿದ್ದ ಪ್ರಕರಣಗಳಿಗೆ ಚಾಲನೆ ಸಿಕ್ಕಿ ಗುರುವಾರ 500ರ ಗಡಿ ದಾಟುವವರೆಗೂ ಪ್ರಕರಣ ದಾಪುಗಾಲಿಟ್ಟು ಜಿಲ್ಲೆಯನ್ನು ಮತ್ತಷ್ಟು ಆತಂಕದತ್ತ ಕೊಂಡೊಯ್ದಿದೆ.

1ರಿಂದ 500ರ ವರೆಗೆ
ಮಾ. 25ರಂದು ಜಿಲ್ಲೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಮೇ 26ರಂದು ಪ್ರಕರಣ 100 ತಲುಪಿತು. ಎರಡೇ ದಿನಗಳಲ್ಲಿ ಮೇ 28ಕ್ಕೆ ಈ ಸಂಖ್ಯೆ 149 ಆಯಿತು. ಮೇ 29ಕ್ಕೆ 164, ಮೇ 30ಕ್ಕೆ 177, ಮೇ 31ಕ್ಕೆ 187, ಜೂ.1ಕ್ಕೆ 260, ಜೂ. 2ಕ್ಕೆ 410 ಕ್ಕೆ ತಲುಪಿದೆ. ಜೂ. 1ಕ್ಕೆ 73, 2ಕ್ಕೆ 150, 3ಕ್ಕೆ 61, 4ಕ್ಕೆ 92 ಪ್ರಕರಣಗಳು ದಾಖಲಾಗುವ ಮೂಲಕ ಜಿಲ್ಲೆ 500ರ ಗಡಿಯನ್ನು ದಾಟಿದೆ.

ವರದಿ ನೆಗೆಟಿವ್‌ ಬರುವವರೆಗೂ ಹೊರಬಾರದಂತೆ ಸೂಚನೆ
ವಿದೇಶ, ಹೊರರಾಜ್ಯಗಳಿಂದ ಬಂದು ಕ್ವಾರಂಟೈನ್‌ ಅವಧಿ ಮುಗಿಸಿ ಮನೆಗೆ ತೆರಳಿದವರು ಯಾವುದೇ ಕಾರಣಕ್ಕೂ ಮನೆಯಿಂದ ಹೋಂ ಕ್ವಾರಂಟೈನ್‌ ಸಂಪೂರ್ಣ ಮುಕ್ತಾಯವಾಗುವವರೆಗೂ ತೆರಳಬಾರದು. ವರದಿ ನೆಗೆಟಿವ್‌ ಬಂದ ಬಳಿಕ ಮಾತ್ರ ಅವರು ಹೊರಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಅನಗತ್ಯವಾಗಿ ಹೊರಬರುವವರ ಮೇಲೆ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು.
– ಜಿ. ಜಗದೀಶ್‌, ಜಿಲ್ಲಾಧಿಕಾರಿ

Advertisement

ಕ್ವಾರಂಟೈನ್‌
ಗೊಂದಲ ಕಾರಣ!
ವಾರದ ಹಿಂದೆಯಷ್ಟೇ 14 ದಿನಗಳ ಕ್ವಾರಂಟೈನ್‌ ಬದಲಿಗೆ 7 ದಿನಗಳ ಕ್ವಾರಂಟೈನ್‌ ಮಾಡುವ ಅವಕಾಶ ನೀಡಿರುವುದೇ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಲು ಕಾರಣ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ. 7 ದಿನಗಳಲ್ಲಿ ಯಾವುದೇ ರೋಗಲಕ್ಷಣ ಕಂಡುಬಾರದಿದ್ದರೆ ಪರೀಕ್ಷೆ ಇಲ್ಲದೆಯೇ ಮನೆಗೆ ತೆರಳುವ ಅವಕಾಶವಿದೆ. 7 ದಿನಗಳ ಬಳಿಕ ಕಳುಹಿಸಲಾಗಿರುವ ವರದಿ ಬರುವ ಮುನ್ನವೇ ರೋಗಿಗಳನ್ನು ಮನೆಗೆ ಕಳುಹಿಸಲಾಗಿದೆ. ಕಳೆದ ನಾಲ್ಕು ದಿನಗಳ ಪ್ರಕರಣಗಳನ್ನು ಗಮನಿಸಿದಾಗ 7 ದಿನಗಳ ಕ್ವಾರಂಟೈನ್‌ ಅವಧಿ ಮುಗಿಸಿ ಮನೆಗೆ ತೆರಳಿದವರಲ್ಲಿಯೇ ಅತ್ಯಧಿಕ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಎಡೆಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next