Advertisement

ಆಫ್ರಿಕಾ ಖಂಡದಲ್ಲೀಗ ಕೋವಿಡ್‌ ಒಂದೇ ಸಮಸ್ಯೆ ಅಲ್ಲ !

04:43 PM Apr 30, 2020 | sudhir |

ಜೋಹಾನ್ಸ್‌ಬರ್ಗ್‌: ಜಗತ್ತಿನಲ್ಲಿ ಕೋವಿಡ್ ಹಲವು ರೀತಿಯ ಸಮಸ್ಯೆಗಳಿಗೆ ನಾಂದಿ ಹಾಡಿದೆ. ಆಫ್ರಿಕಾದಲ್ಲೀಗ ಜನರು ಕೋವಿಡ್‌ 19 ಜತೆ ಲಿಂಗ ಆಧಾರಿತ ಹಿಂಸೆ ಹಾಗೂ ಇತರ ಸಂಘರ್ಷಗಳ ವಿರುದ್ಧವೂ ಹೋರಾಡುವ ಸ್ಥಿತಿ ಇದೆ.

Advertisement

ಅಧಿಕೃತವಾಗಿ ಎಪ್ರಿಲ್‌ 26 ರ ಹೊತ್ತಿಗೆ ಆಫ್ರಿಕನ್‌ ರಾಷ್ಟ್ರಗಳಲ್ಲಿ ಸುಮಾರು 31 ಸಾವಿರ ಮಂದಿ ಈ ಸೋಂಕಿಗೊಳಗಾಗಿದ್ದಾರೆ. ಈ ಪೈಕಿ ಈಜಿಪ್ಟ್, ದಕ್ಷಿಣ ಆಫ್ರಿಕಾ, ಮೊರಾಕೊ ಮತ್ತು ಅಲ್ಜೀರಿಯಾಗಳಲ್ಲಿ ಹೆಚ್ಚು ಪ್ರಕರಣಗಳಿವೆ. ಆಫ್ರಿಕಾದ ಸೆಂಟರ್ಸ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನÒನ್‌ ಪ್ರಕಾರ, ಆಫ್ರಿಕಾ ಖಂಡದಲ್ಲಿ ಸುಮಾರು 1390 ಸಾವು ಸಂಭವಿಸಿದ್ದು, 8300ಕ್ಕಿಂತಲೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ. ಸಾರ್ವಜನಿಕ ಆರೋಗ್ಯ ತಜ್ಞರ ಪ್ರಕಾರ ಸೋಂಕಿತರ ಗಣನೀಯವಾಗಿ ಏರಬಹುದು. ಸರಿಯಾದ ಪರೀಕ್ಷೆ ವ್ಯವಸ್ಥೆ ಇಲ್ಲದೆ ನಿಖರ ಸಂಖ್ಯೆ ತಿಳಿಯುವುದು ಕಷ್ಟ ಎನ್ನಲಾಗುತ್ತಿದೆ.

ಈ ಮಧ್ಯೆ ಇಲ್ಲಿನ ಜನರು ಕೊರೊನಾದೊಂದಿಗೆ ಮತ್ತೆರಡು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಜತೆಗೆ ಸಶಸ್ತ್ರ ಸಂಘರ್ಷವೂ ಭೀತಿ ಮೂಡಿಸುತ್ತಿದೆ. ನಿರಾಶ್ರಿತ ಶಿಬಿರಗಳಲ್ಲೂ ಲೈಂಗಿಕ ಹಿಂಸೆಗಳು ಏರುತ್ತಿವೆ ಹಾಗೂ ಲಾಕ್‌ಡೌನ್‌ ಕಾರಣ ಮನೆಗಳಲ್ಲೂ ಮಹಿಳೆಯರು ಇಂಥ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಲಾಕ್‌ಡೌನ್‌ನ ಮೊದಲ ವಾರದಲ್ಲಿ ಕನಿಷ್ಠ 2,230 ಲಿಂಗ ಆಧಾರಿತ ಹಿಂಸೆ ಪ್ರಕರಣಗಳು ವರದಿಯಾಗಿದ್ದು, ಇದು 2019ರ ಸಾಪ್ತಾಹಿಕ ಸರಾಸರಿಗಿಂತ ಶೇ. 37ರಷ್ಟು ಹೆಚ್ಚಾಗಿದೆ. ಜಿಂಬಾಬ್ವೆ, ಕೀನ್ಯದಲ್ಲೂ ಇದೇ ಸ್ಥಿತಿ ಇದೆ. ಪರಿಣಾಮ ಮುಂದಿನ ದಿನಗಳಲ್ಲಿ ಬೇರೆ ರೀತಿಯ ಗಂಭೀರ ಸಮಸ್ಯೆಗಳು ಸೃಷ್ಟಿಯಾಗುವ ಭೀತಿ ಇದೆ. ಸಂತಾನೋತ್ಪತ್ತಿ ಪ್ರಮಾಣ ಹಾಗೂ ಹೆರಿಗೆ ಸಂದರ್ಭದಲ್ಲಿ ಸೂಕ್ತ ಆರೋಗ್ಯ ಸಹಾಯ ಸಿಗದೆ ಸಾಯುತ್ತಿರುವವರ ಸಂಖ್ಯೆಯೂ ಹೆಚ್ಚಾಗುವ ಆತಂಕವಿದೆ.

ಶಾಂತಿ ನೆಲೆಸಲು ದೊಡ್ಡ ಸವಾಲು
ಗ್ರೇಟ್‌ ಲೇಕ್ಸ್‌ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೂ ಕೋವಿಡ್ ಹಿನ್ನಡೆ ಉಂಟು ಮಾಡುತ್ತಿದೆ ಎಂದು ಈಗಾಗಲೇ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ವಿಶೇಷ ರಾಯಭಾರಿ ಹುವಾಂಗ್‌ ಕ್ಸಿಯಾ ಅವರು ಎ. 22ರಂದು ನಡೆದಿದ್ದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭದ್ರತಾ ಮಂಡಳಿಗೆ ತಿಳಿಸಿದ್ದರು.

ದಕ್ಷಿಣ ಸುಡಾನ್‌ ತನ್ನ ಆಂತರಿಕ ಸಂಘರ್ಷದಿಂದ ಹೊರಬಂದು ಶಾಂತಿ ಒಪ್ಪಂದಕ್ಕೆ ಸಿದ್ಧವಾಗುತ್ತಿತ್ತು. ಈಗ ಒಪ್ಪಂದ ವಿಳಂಬವಾಗುವ ಸಾಧ್ಯತೆಯಿದೆ. ಅಲ್ಲದೆ ಅಲ್ಲಿನ ಲಿಂಗ ಅಸಮಾನತೆ ಹೆಚ್ಚಾಗುವ ಅಪಾಯವಿದೆ. ಈಗಾಗಲೇ ಇಲ್ಲಿ ವಿವಿಧ ಕಾರಣಗಳಿಂದ ಸ್ಥಳಾಂತರಗೊಂಡಿರುವ 1.5 ಮಿಲಿಯನ್‌ ನಿರಾಶ್ರಿತರು ಶಿಬಿರಗಳಲ್ಲಿದ್ದಾರೆ.

Advertisement

ಪೂರ್ವದ ಸೊಮಾಲಿಯಾದಿಂದ ಪಶ್ಚಿಮದ ನೈಜೀರಿಯಾದವರೆಗೆ ಉಗ್ರಗಾಮಿಗಳ ಉಪಟಳ ಇರುವ ಪ್ರದೇಶದವರಿಗೆ ಸ್ವಸಹಾಯ ಸಂಘಟನೆಗಳು ಸಹಾಯಹಸ್ತ ನೀಡಲೂ ಪರದಾಡುವಂತಾಗಿದೆ.

ಜನರನ್ನು ಬಲವಂತವಾಗಿ ಸ್ಥಳಾಂತರ
ಪಶ್ಚಿಮ ಮತ್ತು ಮಧ್ಯ ಆಫ್ರಿಕಾದ ಸುಮಾರು 21 ದೇಶಗಳಲ್ಲಿ ಲಕ್ಷಾಂತರ ಮಂದಿ ತೀವ್ರ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಸುಮಾರು 9 ಮಿಲಿಯನ್‌ಗೂ ಹೆಚ್ಚು ಜನರನ್ನು ಬಲವಂತವಾಗಿ ಸ್ಥಳಾಂತರಿಸಲಾಗಿದೆ ಎನ್ನಲಾಗುತ್ತಿದೆ. ಲಕ್ಷಾಂತರ ಮಂದಿ ಹಸಿವಿನಿಂದ ಬಳಲುವಂತಾಗಿದೆ ಎಂದು ಆಲ್‌ ಆಫ್ರಿಕಾ ಸುದ್ದಿ ಜಾಲ ವರದಿ ಮಾಡಿದೆ.

ಹಿಂಸೆಯಿಂದ ತತ್ತರಿಸಿರುವ ಈ ಖಂಡದಲ್ಲಿ ಈಗ ವಿವಿಧ ಸಂಘಟನೆ ಹಾಗೂ ಸಂಸ್ಥೆಯವರು ರೇಡಿಯೋ ಸಂದೇಶದ ಮೂಲಕ ನೈರ್ಮಲ್ಯ ಮತ್ತು ಆರೋಗ್ಯ ಜಾಗೃತಿ ಮೂಡಿಸುತ್ತಿದ್ದಾರೆ. ಮಹಿಳೆಯರಿಗೆ ಕೋವಿಡ್‌-19 ಸಂಬಂಧಿ ಸಮಸ್ಯೆಗಳಿಂದ ಸುರಕ್ಷತೆ ಪಡೆಯಲು ದೊಡ್ಡ ಪ್ರಮಾಣದ ನಿಧಿಗಳನ್ನೂ ಮೀಸಲಿರಿಸಲಾಗುತ್ತಿದೆ. ಬಾಲ್ಯ ವಿವಾಹ, ಅಗತ್ಯ ಅಂತರವಿಲ್ಲದ ಗರ್ಭಧಾರಣೆ, ಅಕಾಲಿಕ ಸಾವಿನ ಪ್ರಮಾಣ ಹೆಚ್ಚಳ ಮುಂತಾದ ಸಮಸ್ಯೆಗಳನ್ನು ನಿಭಾಯಿಸಲು ಹೆಣ್ಣುಮಕ್ಕಳಲ್ಲಿ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next