Advertisement

ಕ್ಷೌರಿಕರ ತುತ್ತಿಗೂ ಕತ್ತರಿ ಹಾಕಿದ ಕೋವಿಡ್-19

11:36 PM Apr 22, 2020 | Sriram |

ವಿಶೇಷ ವರದಿ-ಮಂಗಳೂರು: ಕೋವಿಡ್-19 ಲಾಕ್‌ಡೌನ್‌ ಕ್ಷೌರಿಕರ ಬದುಕನ್ನು ಕೂಡ ಸಂಕಷ್ಟಕ್ಕೆ ದೂಡಿದೆ. ಒಂದು ತಿಂಗಳಿನಿಂದ ತಮ್ಮ ಸೆಲೂನ್‌ಗಳನ್ನು ಮುಚ್ಚಿರುವ ಕ್ಷೌರಿಕರು ದಿನಕಳೆಯಲು ಪರದಾಡು ವಂತಾಗಿದೆ. ದ.ಕ. ಜಿಲ್ಲೆಯಲ್ಲಿ ಸುಮಾರು 3,000 ಹಾಗೂ ಉಡುಪಿ ಜಿಲ್ಲೆಯಲ್ಲಿ ಸುಮಾರು 1,500 ಸೆಲೂನ್‌ಗಳಿದ್ದು ಉಭಯ ಜಿಲ್ಲೆಗಳಲ್ಲಿ ಒಟ್ಟು ಸುಮಾರು 4,500 ಮಂದಿ ಕ್ಷೌರಿಕರಿದ್ದು ಅವರಿಗೆ ದಿಕ್ಕು ಇಲ್ಲದಂತಾಗಿದೆ. ಇದರಲ್ಲಿ ಇತರ ಜಿಲ್ಲೆ, ರಾಜ್ಯಗಳ ಕಾರ್ಮಿಕರೂ ಇದ್ದಾರೆ.

Advertisement

ನಿರಂತರ ಕರೆ,ಒತ್ತಡ
ಕ್ಷೌರಿಕರು ಸರಕಾರದ ಆದೇಶಕ್ಕೆ ಬೆಲೆ ಕೊಟ್ಟು ಮನೆಯಲ್ಲೇ ಉಳಿದು ಕೊಂಡಿ ದ್ದರೂ ಸಾರ್ವಜನಿಕರ ಬೇಡಿಕೆ ಮಾತ್ರ ನಿಂತಿಲ್ಲ. ಲಾಕ್‌ಡೌನ್‌ ಆದ ಮೊದಲ ವಾರದಲ್ಲಿ ಅಷ್ಟಾಗಿ ಯಾರು ಕೂಡ ಕ್ಷೌರದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ದಿನಗಳು ಕಳೆಯುತ್ತಿರುವಂತೆ ತಮ್ಮ ಊರಿನ, ಪರಿಚಯದ, ಮಾಮೂಲಾಗಿ ಹೋಗುತ್ತಿದ್ದ ಸೆಲೂನ್‌ನ ಕ್ಷೌರಿಕರಿಗೆ ಗ್ರಾಹಕರಿಂದ ಕರೆಗಳು ಬರಲು ಆರಂಭವಾದವು. ಇಂತಹ ಕರೆಗಳಿಂದ ತಪ್ಪಿಸಿಕೊಳ್ಳುವುದೇ ಕ್ಷೌರಿಕರಿಗೆ ದೊಡ್ಡ ಕೆಲಸವಾಗಿದೆ. ಮಾಮೂಲು ಗಿರಾಕಿಗಳನ್ನು ಬಿಡುವಂತೆಯೂ ಇಲ್ಲ. ಲಾಕ್‌ಡೌನ್‌ ಉಲ್ಲಂಘನೆ ಮಾಡುವಂತೆಯೂ ಇಲ್ಲ ಎಂಬ ಸ್ಥಿತಿ ಉಂಟಾಗಿದೆ.

ಅಸಂಘಟಿತ ವಲಯದ ಕಾರ್ಮಿಕರು
“ನಮಗೆ ನಿರಂತರವಾಗಿ ಕರೆ, ಮೆಸೇಜ್‌ಗಳು ಬರುತ್ತಿವೆ. ಆದರೂ ಗ್ರಾಹಕರ ಬಳಿ ತೆರಳಲಿಲ್ಲ. ಕ್ಷೌರಿಕರು ಗರಿಷ್ಠ ಪ್ರಮಾಣದಲ್ಲಿ ಜಿಲ್ಲಾಡಳಿತದ ಜತೆಗೆ ಸಹಕರಿಸಿದ್ದಾರೆ. ಕೆಲವು ಗ್ರಾಹಕರ ಜತೆ ತಲೆಮಾರುಗಳ ಅನ್ಯೋನ್ಯ ಸಂಬಂಧವಿರುತ್ತದೆ. ಅಂತಹ ಮನೆಗಳಿಗೆ ಹೋಗಲೇಬೇಕಿರುವುದರಿಂದ ಇತ್ತೀಚಿನ ಎರಡು ವಾರಗಳಿಂದ ಕೆಲವು ಮಂದಿ ಕ್ಷೌರಿಕರು ಮಾತ್ರ ಇಂತಹ ಗ್ರಾಹಕರ ಕ್ಷೌರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ನಗರದ ಕೆಲವೇ ಐಷಾರಾಮಿ ಸೆಲೂನ್‌ಗಳನ್ನು ನೋಡಿ ಎಲ್ಲ ಸೆಲೂನ್‌ನವರು ಸ್ಥಿತಿವಂತರು ಎಂದು ಜನಪ್ರತಿನಿಧಿಗಳು, ಅಧಿಕಾರಿಗಳು ಅಂದಾಜಿಸಬಾರದು. ಸೆಲೂನ್‌ ಕಾರ್ಮಿಕರು ದಿನಕೂಲಿಯಂತೆ ಇರುವವರು. ಅಸಂಘಟಿತ ಕಾರ್ಮಿಕರಿಗೆ ಸಿಗುವ ಸವಲತ್ತುಗಳು ಅವರಿಗೂ ಸಿಗಬೇಕು. ಸೆಲೂನ್‌ಗಳನ್ನು ತೆರೆಯಲು ಶೀಘ್ರ ಅನುಮತಿ ನೀಡುವಂತೆ ಜಿಲ್ಲಾ ಧಿಕಾರಿಯವರಿಗೆ ಪದೇ ಪದೆ ಮನವಿ ಮಾಡಿಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಉಡುಪಿ ಜಿಲ್ಲಾ ಸವಿತಾ ಸಮಾಜದ ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಅವರು.

ಸ್ವಯಂಪ್ರೇರಿತ ಸಹಕಾರ
ಲಾಕ್‌ಡೌನ್‌ಗಿಂತ ಮೊದಲು ಕೆಲವು ದಿನ ದ.ಕ. ಮತ್ತು ಉಡುಪಿ ಜಿಲ್ಲೆಯ ಹೆಚ್ಚಿನ ಸೆಲೂನ್‌ಗಳಲ್ಲಿ ಮಾಸ್ಕ್ ಬಳಕೆ ಮಾಡಲಾಗಿತ್ತು. ಅಲ್ಲದೆ ಲಾಕ್‌ಡೌನ್‌ಗಿಂತ ಮೊದಲು ಮೂರು ದಿನ ಕ್ಷೌರಿಕರೇ ಸ್ವಯಂಪ್ರೇರಿತರಾಗಿ ಸೆಲೂನ್‌ ಬಂದ್‌ ಮಾಡಿದ್ದರು. ಒಟ್ಟಾರೆ ಒಂದು ತಿಂಗಳುಗಳಿಂದ ಕೆಲಸವನ್ನೇ ಮಾಡಿಲ್ಲ.

ಷರತ್ತು ವಿಧಿಸಿ ಅವಕಾಶ ಕೊಡಿ
ಕ್ಷೌರಿಕರು ತೀರಾ ಸಂಕಷ್ಟದಲ್ಲಿದ್ದಾರೆ. ಈ ವಾರದಲ್ಲಾದರೂ ಸೆಲೂನ್‌ಗಳನ್ನು ತೆರೆಯಲು ಅವಕಾಶ ನೀಡಬೇಕು. ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ ಬಳಕೆ, ಅಂಗಡಿಯೊಳಗೆ ಓರ್ವ ಗ್ರಾಹಕನಿಗೆ ಮಾತ್ರ ಪ್ರವೇಶ ಮೊದಲಾದ ಷರತ್ತುಗಳನ್ನು ವಿಧಿಸಿ ಅವಕಾಶ ನೀಡಬೇಕು. ಬೆಳಗ್ಗೆ 7ರಿಂದ 11 ಗಂಟೆಯವರೆಗಾದರೂ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಈಗಾಗಲೇ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದೇವೆ.
 - ವಸಂತ್‌ ಬೆಳ್ಳೂರ್‌,
ಪ್ರಧಾನ ಕಾರ್ಯದರ್ಶಿ, ದ.ಕ. ಜಿಲ್ಲಾ ಸವಿತಾ ಸಮಾಜ

Advertisement
Advertisement

Udayavani is now on Telegram. Click here to join our channel and stay updated with the latest news.

Next