ಇತ್ತೀಚೆಗಷ್ಟೇ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ| ಸೌಮ್ಯಾ ಸ್ವಾಮಿನಾಥನ್ ಅವರು, ಭಾರತದಲ್ಲಿ ಕೊರೊನಾ ಎಂಡೆಮಿಕ್ ಹಂತಕ್ಕೆ ತಲುಪಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇವರು ಹೇಳಿದ ಅರ್ಥದ ಪ್ರಕಾರ, ಮುಂದಿನ ದಿನಗಳಲ್ಲಿ ಕೊರೊನಾ ಸಂಪೂರ್ಣವಾಗಿ ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಅದು ಜತೆಯಾಗಿಯೇ ಇರುತ್ತದೆ. ಜನರೂ ಅದರೊಂದಿಗೆ ಬದುಕುವುದನ್ನು ಕಲಿಯುತ್ತಾರೆ. ಇತರ ರೋಗಗಳಂತೆಯೇ ಇದು ಅದರಲ್ಲಿ ಒಂದಾಗುತ್ತದೆ.
ಹಾಗಾದರೆ, ಎಂಡೆಮಿಸಿಟಿ ಎಂದರೇನು? :
ಎಂಡೆಮಿಕ್ ಎಂದರೆ ಒಂದು ರೋಗ. ಇದು ನಿರ್ದಿಷ್ಟ ಪ್ರದೇಶದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುತ್ತದೆ. ಎಂಡೆಮಿಕ್ ಅಂದರೆ ಋತುಮಾನಕ್ಕೆ ತಕ್ಕಂತೆ ಜನರಲ್ಲಿ ಕೆಲವೊಂದು ಜ್ವರದಂಥ ವ್ಯಾಧಿಗಳು ಆಗಾಗ್ಗೆ ಕಾಣಿಸಿಕೊಂಡು, ನಂತರ ಉಪಶಮನವಾಗುವುದು. ಡಾ| ಸೌಮ್ಯಾ ಸ್ವಾಮಿನಾಥನ್ ಹೇಳುವಂತೆ, ಜನರು ವೈರಸ್‌ನೊಂದಿಗೆ ಬದುಕುವುದನ್ನು ಕಲಿಯುತ್ತಾರೆ.
ಪೆಂಡೆಮಿಕ್ ವರ್ಸಸ್ ಎಂಡೆಮಿಕ್ :
2020ರ ಮಾರ್ಚ್‌ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಸೋಂಕನ್ನು ಸಾಂಕ್ರಾಮಿಕ(ಪೆಂಡೆಮಿಕ್) ರೋಗ ಎಂದು ಕರೆದಿತ್ತು. ಅಂದರೆ ಇದು ಜಗತ್ತಿನಾದ್ಯಂತ ಹಬ್ಬುತ್ತಿರುವ ಹೊಸ ರೋಗ ಎಂದಿತ್ತು. ಹಾಗೆಯೇ ಎಂಡೆಮಿಕ್ ಅಂದರೆ, ಒಂದು ರೀತಿಯಲ್ಲಿ ಮಲೇರಿಯಾ, ಚಿಕನ್ ಫಾಕ್ಸ್ ಇದ್ದಂತೆ. ಆದರೆ ಎಲ್ಲ ಕಡೆ ಬರುವುದಿಲ್ಲ. ಒಂದು ನಿರ್ದಿಷ್ಟ ಪ್ರದೇಶದಲ್ಲಿ ಕಾಣಿಸಿಕೊಂಡು ಹೋಗುತ್ತದೆ.
ಕೊರೊನಾ ಸಂಪೂರ್ಣವಾಗಿ ಹೋಗುತ್ತದೆಯೇ? :
ಈ ಬಗ್ಗೆ ಹೇಳುವುದು ಕಷ್ಟ. ಚೀನದಲ್ಲಿ ಝೀರೋ ಕೊರೊನಾ ಎಂದು ಹೇಳಲಾಗಿತ್ತಾದರೂ ಮತ್ತೆ ರೂಪಾಂತರದಿಂದಾಗಿ ಪ್ರಕರಣಗಳು ಕಾಣಿಸಿಕೊಂಡಿವೆ. ಆಸ್ಟ್ರೇಲಿಯದಲ್ಲೂ ಕೊರೊನಾ ಸಂಪೂರ್ಣವಾಗಿ ಹೋಗಿದೆ ಎಂದೇ ಹೇಳಲಾಗಿತ್ತು. ಅಲ್ಲೂ ಮತ್ತೆ ಪ್ರಕರಣ ಕಾಣಿಸಿಕೊಂಡಿದ್ದು, ಈ ಮೂಲಕ ಕೊರೊನಾ ಸಂಪೂರ್ಣವಾಗಿ ಹೋಗುವುದಿಲ್ಲ ಎಂದೇ ಹೇಳಲಾಗುತ್ತಿದೆ.
ಹಾಗಾದರೆ, ಲಸಿಕೆ ಕಥೆ ಏನು? :
ಇಂದಿಗೂ ಕೊರೊನಾ ವಿರುದ್ಧ ಹೋರಾಟದಲ್ಲಿ ಲಸಿಕೆ ಪರಿಣಾಮಕಾರಿ. ಆದರೆ ಎಷ್ಟು ದಿನಗಳ ವರೆಗೆ ಇದರ ಪರಿಣಾಮಕತ್ವ ಇರುತ್ತದೆ? ಬೂಸ್ಟರ್ ಡೋಸ್ ಬೇಕಾ ಎಂಬ ಬಗ್ಗೆ ಮುಂದೆ ನೋಡಬೇಕಾಗಿದೆ.