ನವದೆಹಲಿ: ಕೋವಿಡ್ 19 ಸೋಂಕಿನ ವಿರುದ್ಧದ ಭಾರತದ ಹೋರಾಟಕ್ಕೆ ಮತ್ತಷ್ಟು ಉತ್ತೇಜನಕಾರಿ ಬೆಳವಣಿಗೆ ನಡೆದಿದ್ದು, 2ರಿಂದ 18 ವರ್ಷದ ನಡುವಿನ ಮಕ್ಕಳಿಗೆ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ನೀಡಲು ಡಿಸಿಜಿಐ(ಭಾರತೀಯ ಔಷಧೀಯ ನಿಯಂತ್ರಣ ಪ್ರಾಧಿಕಾರ) ಮಂಗಳವಾರ ಒಪ್ಪಿಗೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ದೆಹಲಿ ಲಕ್ಷ್ಮಿ ನಗರದಲ್ಲಿ ಪಾಕಿಸ್ತಾನಿ ಭಯೋತ್ಪಾದಕನ ಬಂಧನ, ಎಕೆ 47, ಗ್ರೆನೇಡ್ ವಶಕ್ಕೆ
ಕೋವ್ಯಾಕ್ಸಿನ್ ಮುಖ್ಯವಾಗಿ ಮಕ್ಕಳಿಗೆ ನೀಡಬಹುದಾದ ದೇಶದ ಮೊದಲ ಕೋವಿಡ್ 19 ಲಸಿಕೆಯಾಗಿದೆ. ಏತನ್ಮಧ್ಯೆ ಈ ಕುರಿತು ಅಧಿಕೃತ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ ಎಂದು ವರದಿ ಹೇಳಿದೆ.
18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಬಳಸುವ ನಿಟ್ಟಿನಲ್ಲಿ ಭಾರತ್ ಬಯೋಟೆಕ್ 2 ಮತ್ತು 3ನೇ ಹಂತದ ಪ್ರಯೋಗವನ್ನು ಪೂರ್ಣಗೊಳಿಸಿದ ಬಳಿಕ, ಅದರ ವರದಿಯನ್ನು ಡಿಸಿಜಿಐಗೆ ಸಲ್ಲಿಸಿತ್ತು. ನಂತರ ಈ ಬೆಳವಣಿಗೆ ನಡೆದಿರುವುದಾಗಿ ವರದಿ ಹೇಳಿದೆ.
ಈ ಹಿನ್ನೆಲೆಯಲ್ಲಿ 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆಯನ್ನು ತುರ್ತು ಬಳಕೆ ಮಾಡಲು ಡಿಸಿಜಿಐ ಹಸಿರು ನಿಶಾನೆ ತೋರಿಸಿದೆ. ಅಷ್ಟೇ ಅಲ್ಲ ಇತರ ಕಂಪನಿಗಳು ಕೂಡಾ ಮಕ್ಕಳಿಗೆ ನೀಡುವ ಲಸಿಕೆ ಕುರಿತು ವೈದ್ಯಕೀಯ ಸಂಶೋಧನೆಯ ಪ್ರಯೋಗದಲ್ಲಿ ತೊಡಗಿವೆ ಎಂದು ವರದಿ ತಿಳಿಸಿದೆ.