ಪಡುಬಿದ್ರಿ: ಠಾಣಾ ವ್ಯಾಪ್ತಿಯಲ್ಲಿ 2020ರಲ್ಲಿ ನಡೆದಿದ್ದ ಪೋಕ್ಸೋ ಪ್ರಕರಣದ ಆರೋಪಿ ಹೆಜಮಾಡಿ ನಿವಾಸಿ ಉಮೇಶ್ ಬಂಗೇರ(48)ನಿಗೆ ಉಡುಪಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಅವರು ಫೆ. 4ರಂದು ತೀರ್ಪನ್ನಿತ್ತಿದ್ದು ಆರೋಪಿಗೆ ಒಟ್ಟು 22 ವರ್ಷಗಳ ಸಜೆಯನ್ನು ವಿಧಿಸಿ ಅವುಗಳನ್ನು ಏಕಕಾಲದಲ್ಲಿ ಅನುಭವಿಸುವಂತೆ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗೆ 22,000ರೂ. ದಂಡವನ್ನೂ ವಿಧಿಸಲಾಗಿದೆ.
ಆರೋಪಿಯು ಕರಾಟೆ ಶಿಕ್ಷಕನಾಗಿ ಈ ಅಪರಾಧವೆಸಗಿದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಲಂ 6ರ ಪೋಕ್ಸೋ ಕಾಯಿದೆ ಅಡಿಯಲ್ಲಿ 10 ವರ್ಷ ಕಠಿಣ ಸಜೆ ಮತ್ತು 10,000 ರೂ. ದಂಡ ಹಾಗೂ ಕಲಂ -8ರ ಪೋಕ್ಸೋ ಕಾಯಿದೆ ಅಡಿಯಲ್ಲಿ 1ವರ್ಷ ಸಾಧಾರಣ ಸಜೆ ಮತ್ತು 1000 ರೂ. ದಂಡ, ಕಲಂ 376 ಐಪಿಸಿ ಅಡಿಯಲ್ಲಿ 10 ವರ್ಷ ಕಠಿಣ ಸಜೆ ಮತ್ತು 10,000 ರೂ. ದಂಡ, ಕಲಂ 506 ಐಪಿಸಿ ಅಡಿಯಲ್ಲಿ 1 ವರ್ಷ ಸಾಧಾರಣ ಸಜೆ ಮತ್ತು 1000 ರೂ. ದಂಡಗಳನ್ನು ಆರೋಪಿ ಉಮೇಶ್ ಬಂಗೇರನಿಗೆ ವಿಧಿಸಲಾಗಿದೆ.
ದಂಡದ ಮೊತ್ತದಲ್ಲಿ 17,000ರೂ. ಗಳನ್ನು ಸಂತ್ರಸ್ತೆಗೆ ನೀಡುವಂತೆಯೂ, ಸರಕಾರದ ವತಿಯಿಂದ 1ಲಕ್ಷ ರೂ. ಗಳನ್ನು ಸಂತ್ರಸ್ತೆಗೆ ಪಾವತಿಸಬೇಕಾಗಿಯೂ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದಾರೆ. ಪ್ರಕರಣ ತನಿಖೆಯನ್ನು ಆಗಿನ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ ಅವರು ನಡೆಸಿದ್ದರು. ನ್ಯಾಯಾಲಯದಲ್ಲಿ ಅಭಿಯೋಜನೆ ಪರವಾಗಿ ವಿಶೇಷ ಅಭಿಯೋಜಕ ವೈ. ಟಿ. ರಾಘವೇಂದ್ರ ಅವರು ವಾದಿಸಿದ್ದರು.
Related Articles
ಇದನ್ನೂ ಓದಿ: ಪಠಾಣ್ ನಿಜವಾದ ಕಲೆಕ್ಷನ್ ಎಷ್ಟು?; ನೆಟಿಜನ್ ಗಳಿಗೆ ತಿರುಗೇಟು ಕೊಟ್ಟ ಶಾರುಖ್