Advertisement

ಖಾಸಗಿತನ ಎತ್ತಿಹಿಡಿದ ಕೋರ್ಟ್‌;ಹಲವು ಬದಲಾವಣೆಗಳು ಎದುರಾಗಲಿವೆಯೇ? 

06:15 AM Aug 25, 2017 | |

ಯಾರ ಜತೆಗೆ ಬದುಕಬೇಕು, ಏನು ತಿನ್ನಬೇಕು ಎನ್ನುವುದನ್ನೆಲ್ಲ ಇನ್ಮುಂದೆ ನ್ಯಾಯಾಲಯವಾಗಲಿ, ಸರಕಾರವಾಗಲಿ ತೀರ್ಮಾನಿಸುವಂತಿಲ್ಲ. 

Advertisement

ಖಾಸಗಿತನ ಸಂವಿಧಾನದತ್ತವಾಗಿರುವ ಮೂಲಭೂತ ಹಕ್ಕು ಎಂದು ತೀರ್ಮಾನಿಸುವುದರೊಂದಿಗೆ ಈ ಕುರಿತು ದಶಕಗಳಿಂದ ಇದ್ದ ಗೊಂದಲಗಳಿಗೆ ಸುಪ್ರೀಂ ಕೋರ್ಟ್‌ ಪೂರ್ಣ ವಿರಾಮ ಹಾಕಿದೆ. ಎರಡು ದಿನಗಳ ಹಿಂದೆಯಷ್ಟೇ ತ್ರಿವಳಿ ತಲಾಖ್‌ ರದ್ದುಪಡಿಸಿ ಐತಿಹಾಸಿಕ ತೀರ್ಪು ನೀಡಿದ್ದ ಸರ್ವೋಚ್ಚ ನ್ಯಾಯಾಲಯ ಇದೀಗ ಇನ್ನೊಂದು ಮಹತ್ವದ ತೀರ್ಪು ನೀಡುವುದರೊಂದಿಗೆ ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗಕ್ಕಿರುವ ಮಹತ್ವವನ್ನು ಸಾರಿ ಹೇಳಿದೆ. 

ಖಾಸಗಿತನ ಎನ್ನುವುದು ಸಂವಿಧಾನದ 21ನೇ ಪರಿಚ್ಛೇದದಡಿಯಲ್ಲಿ ನಾಗರಿಕರಿಗೆ ನೀಡಿರುವ ಮೂಲಭೂತ ಹಕ್ಕುಗಳ ಅಂಗವಾಗಿದೆ. ಬದುಕುವ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕಿನ ಭಾಗವಾಗಿ ಖಾಸಗಿತನದ ಹಕ್ಕು ಬರುತ್ತದೆ ಎಂದು ಒಂಬತ್ತು ನ್ಯಾಯಮೂರ್ತಿಗಳಿದ್ದ ಸಂವಿಧಾನ ಪೀಠ ಸರ್ವಾನುಮತದ ತೀರ್ಪು ನೀಡಿದೆ. ಇದು ಸಾಮಾಜಿಕವಾಗಿ ಹತ್ತಾರು ಪರಿಣಾಮಗಳನ್ನು ಬೀರುವುದರ ಜತೆಗೆ ಜನರ ಹಲವು ನಿಯಮಗಳ ಬದಲಾವಣೆಗೆ ಕಾರಣವಾಗಬಲ್ಲ ತೀರ್ಪು ಎಂಬ ಕಾರಣಕ್ಕೆ ಮಹತ್ವದ್ದು. ಆಧಾರ್‌, ಸಲಿಂಗಕಾಮ, ಗರ್ಭಪಾತ, ಗೋ ಹತ್ಯೆ ನಿಷೇಧ, ದತ್ತಾಂಶ ಸುರಕ್ಷತೆ, ಟೆಲಿ ಮಾರ್ಕೆಟಿಂಗ್‌, ದೇಶದ ಭದ್ರತೆ, ಫೋನ್‌ ಕದ್ದಾಲಿಕೆ ಹೀಗೆ ಹತ್ತಾರು ಆಯಾಮಗಳಲ್ಲಿ ತೀರ್ಪು ವಿಶ್ಲೇಷಣೆಗೊಳಪಡಬಲ್ಲಂಥದು. 

ಸಂವಿಧಾನದಲ್ಲಿ ಖಾಸಗಿತನದ ಕುರಿತು ಪ್ರತ್ಯೇಕವಾದ ಉಲ್ಲೇಖ ಇಲ್ಲದಿರುವ ಕಾರಣ ಸರಕಾರಗಳು ಖಾಸಗಿತನ ಎನ್ನುವುದು ಜನರ ಪರಿಪೂರ್ಣ ಹಕ್ಕು ಅಲ್ಲ ಎಂದು ವಾದಿಸುತ್ತಿದ್ದವು. ಆದರೆ ಸಂದರ್ಭಕ್ಕೆ ತಕ್ಕ ಹಾಗೆ ಸರಕಾರದ ವಾದಗಳು ಬದಲಾಗುತ್ತಿದ್ದವು. ಉದಾಹರಣೆಗೆ, ವಾಟ್ಸ್‌ಆ್ಯಪ್‌ ಪ್ರಕರಣದಲ್ಲಿ ಸರಕಾರವೇ ಖಾಸಗಿತನ 21ನೇ ಪರಿಚ್ಛೇದದ ಅವಿಭಾಜ್ಯ ಅಂಗ ಎಂದು ಹೇಳಿದರೆ ಆಧಾರ್‌ ಕೇಸಿನಲ್ಲಿ ಇದಕ್ಕೆ ತದ್ವಿರುದ್ಧವಾಗಿ ಖಾಸಗಿತನ ಸಂವಿಧಾನದಿಂದ ಬಳುವಳಿಯಾಗಿ ಬಂದಿರುವ ಹಕ್ಕು ಅಲ್ಲ, ಖಾಸಗಿತನವನ್ನು ಆಯಾಯ ಪ್ರಕರಣಗಳ ಆಧಾರದಲ್ಲಿ ನಿಷ್ಕರ್ಷೆಗೊಳಪಡಿಸಬೇಕೆಂಬ ವಾದ ಮಂಡಿಸಿತ್ತು. ಖಾಸಗಿತನಕ್ಕೆ ಸಮರ್ಪಕವಾದ ವ್ಯಾಖ್ಯಾನ ಇಲ್ಲದ ಕಾರಣ ಜನರು ತಮಗೆ ಬೇಕಾದಂತೆ ಅದನ್ನು ಅರ್ಥೈಸಿಕೊಳ್ಳುತ್ತಿದ್ದರು. ಇದೀಗ ಖಾಸಗಿತನ ಸಂವಿಧಾನದತ್ತವಾದ ಹಕ್ಕು ಎಂದು ತೀರ್ಮಾನವಾಗುವುದರೊಂದಿಗೆ ಜನರಿಗೆ ತಮ್ಮ ಖಾಸಗಿತನವನ್ನು ಸಂರಕ್ಷಿಸಲು ಬಲವಾದ ಅಸ್ತ್ರವೊಂದು ಸಿಕ್ಕಿದಂತಾಗಿದೆ.  

ಖಾಸಗಿತನ ಮೂಲಭೂತ ಹಕ್ಕು ಆಗಿರುವುದರಿಂದ ಸರಕಾರದ ವಿರುದ್ಧ ಧ್ವನಿಯೆತ್ತಲು ಜನರಿಗೆ ಹೆಚ್ಚಿನ ಬಲ ಬಂದಂತಾಗಿದೆ. ಖಾಸಗಿತನವನ್ನು ಉಲ್ಲಂ ಸುವ ಸರಕಾರದ ಯಾವುದೇ ಕ್ರಮವನ್ನು ಇನ್ನು ಜನರು ನ್ಯಾಯಾಲಯಗಳಲ್ಲಿ ಸಂವಿಧಾನದ 32 ಮತ್ತು 226ನೇ ಪರಿಚ್ಛೇದಗಳಡಿಯಲ್ಲಿ ಪ್ರಶ್ನಿಸಬಹುದು. ತೀರ್ಪಿನ ಮೊದಲ ಪರಿಣಾಮವಾಗುವುದು ಆಧಾರ್‌ ಮೇಲೆ ಎನ್ನಲಾಗುತ್ತಿದೆ. ಪಡಿತರ ಪಡೆಯುವುದರಿಂದ ಹಿಡಿದು ಮದುವೆ ನೋಂದಣಿ, ಆಸ್ತಿ ನೋಂದಣಿ ತನಕ ಹತ್ತಾರು ಯೋಜನೆಗಳಿಗೆ ಸರಕಾರ ಆಧಾರ್‌ ಕಡ್ಡಾಯಗೊಳಿಸಿದೆ. ಜನರ ಬೆರಳಚ್ಚು ಮತ್ತು ಕಣ್ಣಿನ ರೆಟಿನಾದ ಪಡಿಯಚ್ಚು ಸೇರಿದಂತೆ ಎಲ್ಲ ಖಾಸಗಿ ಮಾಹಿತಿಗಳು ಆಧಾರ್‌ಗೆ ಜೋಡಣೆಯಾಗಿವೆ. 

Advertisement

ಅಕ್ರಮ ತಪ್ಪಿಸಲು ಆಧಾರ್‌ ಬಳಕೆ ಉತ್ತಮ ಸಾಧನ ಎನ್ನುವುದು ನಿಜವಾಗಿದ್ದರೂ, ಜನರ ಖಾಸಗಿ ಮಾಹಿತಿಗಳನ್ನು ಸರಕಾರ ತನಗಿಷ್ಟ ಬಂದಂತೆ ಬಳಸಿಕೊಳ್ಳುವುದು ಕಳವಳಕ್ಕೆ ಕಾರಣವಾಗಿತ್ತು. ಇಡೀ ಆಧಾರ್‌ ಪ್ರಕ್ರಿಯೆ ಖಾಸಗಿಯವರ ಕೈಯಲ್ಲಿರುವುದರಿಂದ ಮಾಹಿತಿ ಸುರಕ್ಷತೆಯ ಗಂಭೀರ ಪ್ರಶ್ನೆಯೂ ಎದುರಾಗಿತ್ತು. ಕೆಲ ಸಮಯದ ಹಿಂದೆ ಲಕ್ಷಗಟ್ಟಲೆ ಆಧಾರ್‌ ಮಾಹಿತಿ ಸೋರಿಕೆಯಾಗಿರುವುದು ಬೆಳಕಿಗೆ ಬಂದಿರುವುದು ಖಾಸಗಿತನದ ವಾದಕ್ಕೆ ಬಲ ತಂದಿತ್ತು.  ಸಲಿಂಗಕಾಮಿಗಳ ಬದುಕು ಇನ್ನು ನಿರಾಳವಾಗಬಹುದು. ಮದುವೆ, ಕಾಮ, ಆಹಾರ, ಗರ್ಭಪಾತಕ್ಕೆಲ್ಲ ಖಾಸಗಿತನದ ಹಕ್ಕು ಇಲ್ಲ ಎಂದು ಅವಕಾಶ ನಿರಾಕರಿಸಲಾಗಿತ್ತು. ಯಾರ ಜತೆಗೆ ಬದುಕಬೇಕು, ಏನು ತಿನ್ನಬೇಕು ಎನ್ನುವುದನ್ನೆಲ್ಲ ಇನ್ಮುಂದೆ ನ್ಯಾಯಾಲಯವಾಗಲಿ, ಸರಕಾರವಾಗಲಿ ತೀರ್ಮಾನಿಸುವಂತಿಲ್ಲ. ಅಂತೆಯೇ ಬೇಡದ ಗರ್ಭವನ್ನು ತೆಗೆಸುವ ಹಕ್ಕು ಸಿಗಬಹುದು. ಫೇಸ್‌ಬುಕ್‌, ವಾಟ್ಸಪ್‌, ಟ್ವಿಟ್ಟರ್‌ ಸೇರಿದಂತೆ ಹತ್ತಾರು ಸಾಮಾಜಿಕ ಮಾಧ್ಯಮಗಳಲ್ಲಿ ವಿನಿಮಯಿಸಿಕೊಳ್ಳುವ ಮಾಹಿತಿಗಳಿಗೆ ರಕ್ಷಣೆ ಸಿಗಲಿದೆ ಎನ್ನುವುದು ಕೂಡ ಗಮನಾರ್ಹ ಅಂಶ.

Advertisement

Udayavani is now on Telegram. Click here to join our channel and stay updated with the latest news.

Next