ಸುರತ್ಕಲ್: ನಾನಾ ಕಾರಣದಿಂದ ನನೆಗುದಿಗೆ ಬಿದ್ದಿದ್ದ ಕೇಂದ್ರ, ರಾಜ್ಯ ಸರಕಾರ, ಎನ್ ಎಂಪಿಟಿ ಪಾಲುದಾರಿಕೆಯಲ್ಲಿ ನಿರ್ಮಾಣಗೊಳ್ಳಲಿರುವ ಕುಳಾಯಿ ಹೈಟೆಕ್ ಮೀನುಗಾರಿಕೆ ಜೆಟ್ಟಿ ನಿರ್ಮಾಣಕ್ಕೆ ಇದ್ದ ಕಾನೂನು ಹೋರಾಟ ಅಂತ್ಯಗೊಂಡಿದ್ದು ನಿರ್ಮಾಣವಾಗಲಿದೆ ಎನ್ನುವಾಗಲೇ ಗುತ್ತಿಗೆದಾರ ರೋರ್ವರು ಮತ್ತೆ ನ್ಯಾಯಾಲಯದಿಂದ ತಡೆ ತಂದಿದ್ದಾರೆ.
2019ರಲ್ಲಿ ಬ್ರೇಕ್ ವಾಟರ್ ಕಾಮಗಾರಿ ಪ್ರಥಮ ಹಂತದಲ್ಲಿ ನಡೆಯುತ್ತದೆ ಎನ್ನುವಾಗಲೇ ಕಾಮಗಾರಿ ಪ್ರಶ್ನಿಸಿ ಕೋರ್ಟ್‌ನಿಂದ ತಡೆಯಾಜ್ಞೆ ಬಂದಿತ್ತು. ಹೀಗಾಗಿ ಮತ್ತೆ 2 ವರ್ಷ ವಿಳಂಬವಾಯಿತು. ಇದೀಗ ಮತ್ತೆ ಗುತ್ತಿಗೆ ನೀಡಿರುವ ನಿಯಮ ಪ್ರಶ್ನಿಸಿ ಮತ್ತೆ ನ್ಯಾಯಲಯ ಮೊರೆ ಹೋಗಲಾಗಿದೆ. ಮೇ 26ರ ವರೆಗೆ ಯಾವುದೇ ಕಾಮಗಾರಿ ನಡೆಸದಂತೆ ತಡೆ ನೀಡಿದೆ. ಈ ಬಗ್ಗೆ ಎನ್‌ಎಂಪಿಎ ಮೂಲಗಳು ಕೂಡ ನ್ಯಾಯಾಲಯದ ತಡೆ ನೀಡಿರುವುದನ್ನು ಖಚಿತ ಪಡಿಸಿದೆ. ಮೀನುಗಾರರ ಬಹು ವರ್ಷದ ಬೇಡಿಕೆ ನನಸಾಗುತ್ತದೆ ಎನ್ನುವಾಗಲೇ ಮತ್ತೆ ವಿಳಂಬವಾಗುವ ಲಕ್ಷಣ ಗೋಚರಿಸಿದೆ.
ಅಂದಾಜು 165.6 ಕೋಟಿ ರೂ. (ಈಗಿನ ಹೆಚ್ಚುವರಿ ಮೊತ್ತ ಹೊರತು ಪಡಿಸಿ) ವೆಚ್ಚದಲ್ಲಿ ಕಿರು ಜೆಟ್ಟಿ ನಿರ್ಮಾಣ ಕಾರ್ಯ ಯೋಜನೆ ರೂಪಿಸಲಾಗಿತ್ತು. ಸುಮಾರು 9.75 ಎಕರೆ ಪ್ರದೇಶ ಈ ಜೆಟ್ಟಿ ನಿರ್ಮಾಣಕ್ಕೆ ಅಗತ್ಯವಿದ್ದು, ಮೀನುಗಾರಿಕೆ, ದೋಣಿಗಳ ನಿಲುಗಡೆಗೆ ಸಂಬಂಧಿಸಿದಂತೆ 3 ಮೀಟರ್ ಎತ್ತರ, 70 ಮೀಟರ್ ಉದ್ದ ಇರಲಿದೆ. ಏಲಂ ಸ್ಥಳ, ನೆಟ್ ದುರಸ್ತಿ ಕೇಂದ್ರ, ಮೀನುಗಳನ್ನು ವಾಹನಗಳಿಗೆ ತುಂಬಿಸಲು ಸ್ಥಳಾವಕಾಶ, ದೋಣಿ ದುರಸ್ತಿ, ಶೌಚಾಲಯ, ರೇಡಿಯೋ ಟವರ್ ಮತ್ತಿತರ ಮೂಲ ಸೌಕರ್ಯ ಒಳಗೊಂಡಿದೆ.
ಸರ್ವಋತು ಬಂದರು
ಜೆಟ್ಟಿಯ ದಕ್ಷಿಣ ಭಾಗದಲ್ಲಿ ಅಂದಾಜು 260 ಮೀಟರ್ ಬ್ರೇಕ್ ವಾಟರ್ ವ್ಯವಸ್ಥೆ, ಉತ್ತರ ಭಾಗದಲ್ಲಿ 760 ಮೀ. ಬ್ರೇಕ್ ವಾಟರ್ ವ್ಯವಸ್ಥೆ ಇರಲಿದೆ. ಜೆಟ್ಟಿ ನಿರ್ಮಾಣದಿಂದ ಕನಿಷ್ಠ 350 ದೋಣಿಗಳ ನಿಲುಗಡೆ ಮಾಡಬಹುದಾಗಿದೆ. ಸ್ಥಳೀಯ ದೋಣಿಗಳು ಈ ಭಾಗದ ಬ್ರೇಕ್ ವಾಟರ್ ಮೂಲಕವೇ ಕಡಲಿಗೆ ಇಳಿಯಬಹುದಾಗಿದೆ. ವರ್ಷದ 12 ತಿಂಗಳುಗಳಲ್ಲಿಯೂ ಮೀನುಗಾರಿಕೆ ನಡೆಸುವ ಸರ್ವಋತು ಬಂದರು ಇದಾಗಲಿದ್ದು, ಮತ್ಸ್ಯ ವ್ಯವಹಾರದ ಮೂಲಕ ಆರ್ಥಿಕ ಬೆಳವಣಿಗೆಗೂ ಕೊಡುಗೆ ನೀಡುವ ನಿರೀಕ್ಷೆ ಹೊಂದಲಾಗಿತ್ತು.