ಟೆಲ್ ಅವೀವ್: ಶಿಶುವಿಗೆ ವಿಮಾನ ಟಿಕೆಟ್ ಖರೀದಿಸಲು ನಿರಾಕರಿಸಿದ ದಂಪತಿ, ಶಿಶುವನ್ನೇ ಚೆಕ್ ಇನ್ ಪಾಯಿಂಟ್‌ನಲ್ಲೇ ಬಿಟ್ಟು ತೆರಳಿದ ಆಶ್ಚರ್ಯಕರ ಘಟನೆ ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿ ನಡೆದಿದೆ.
ದಂಪತಿಯು ರಯಾನ್‌ಏರ್ ವಿಮಾನದ ಮೂಲಕ ಟೆಲ್ ಅವೀವ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದಿಂದ ಬ್ರುಸೆಲ್ಸ್‌ಗೆ ತೆರಳುತ್ತಿದ್ದರು. ದಂಪತಿ ಮಾತ್ರ ಟೆಕೆಟ್ ಖರೀದಿಸಿದ್ದರು. ಆದರೆ ಶಿಶುವಿಗೆ ಟಿಕೆಟ್ ಖರೀದಿಸಿರಲಿಲ್ಲ. ಹೀಗಾಗಿ ಶಿಶುವಿನ ಟಿಕೆಟ್ ಶುಲ್ಕ ಪಾವತಿಸುವಂತೆ ವಿಮಾನಯಾನ ಸಂಸ್ಥೆ ಹೇಳಿದೆ. ಆದರೆ ಇದಕ್ಕೆ ದಂಪತಿ ಒಪ್ಪಲಿಲ್ಲ. ಕೊನೆಗೆ ಶಿಶುವನ್ನು ಚೆಕ್ ಇನ್ ಪಾಯಿಂಟ್‌ನಲ್ಲೇ ಬಿಟ್ಟು, ದಂಪತಿ ಮಾತ್ರ ವಿಮಾನ ಹತ್ತಿ ಹೋಗಿದ್ದಾರೆ.
ಈ ಸಂಬಂಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ರಯಾನ್‌ಏರ್ ವಿಮಾನಯಾನ ಸಂಸ್ಥೆಯು ಶಿಶುಗಳಿಗೆ 27 ಅಮೆರಿನ್ ಡಾಲರ್ ಟಿಕೆಟ್ ಶುಲ್ಕ ವಿಧಿಸುತ್ತದೆ. ಪೋಷಕರು ಮಗುವನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಂಡು ಪ್ರಯಾಣಿಸಬಹುದಾಗಿದೆ.