ಚಿಕ್ಕಮಗಳೂರು: ನಗರದ ಮನೆಯೊಂದ ರಲ್ಲಿ ದಂಪತಿಯ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ಆರೋಪ ಹೊತ್ತಿರುವ ಸಹಾಯಕ ಠಾಣಾಧಿಕಾರಿ ಯತೀಶ್ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಖಚಿತ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಹರೀಶ್ ಪಾಂಡೆ ಸ್ಪಷ್ಟಪಡಿಸಿದರು. ಎಎಸ್‌ಐ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಜಯನಗರ ಬಡಾವಣೆ ನಿವಾಸಿಗಳು ಬುಧ ವಾರ ಸಲ್ಲಿಸಿದ ಮನವಿ ಸ್ವೀಕರಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಎಎಸ್‌ಐ ತೆಗೆದಿದ್ದಾರೆ ಎನ್ನಲಾದ ವಿಡಿಯೋ ತುಣುಕು ತಮ್ಮ ಬಳಿ ಇದೆ. ಅದನ್ನು ಡಿಲೀಟ್ ಮಾಡಲಾಗಿದೆ ಎನ್ನುತ್ತಿರುವುದು ತಪ್ಪು. ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಆಸ್ಪತ್ರೆಯಿಂದ ಬಿಡುಗಡೆಯಾದ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ದಂಪತಿ, ಸೆ.21ರ ರಾತ್ರಿ ತಮ್ಮ ಮನೆ ಬಳಿ ಬಂದು ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸುತ್ತಿರುವುದನ್ನು ಗಮನಿಸಿ ಕಳ್ಳನಿರಬೇಕೆಂದು ಭಾವಿಸಿ ಹೊರಗೆ ಬಂದು ಕೂಗಿದೆವು. ಆಗ ಜನ ಸಹ ಸೇರಿದರು. ನಂತರ ಮನೆಯ ಪಕ್ಕದಲ್ಲೇ ವಾಸಿಸುವ ಯತೀಶ್ ಈ ಕೆಲಸ ಮಾಡುತ್ತಿರುವುದು ಕಂಡುಬಂದಿತು. ಕೂಡಲೇ, ಆತನನ್ನು ಹಿಡಿದು ಮೊಬೈಲ್ ಪರಿಶೀಲಿಸಿದಾಗ ಖಾಸಗಿ ದೃಶ್ಯ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು ಖಚಿತವಾಯಿತು ಎಂದು ಹೇಳಿದರು.
ಈ ದಂಪತಿ ಹಾಗೂ ಜಯನಗರ ಬಡಾವಣೆ ನಿವಾಸಿಗಳು ನಗರಸಭೆ ಮಾಜಿ ಅಧ್ಯಕ್ಷ ದೇವರಾಜ ಶೆಟ್ಟಿ ನೇತೃತ್ವದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ಕಚೇರಿಗೆ ತೆರ ಳಿ ಎಸ್ಪಿಯವರನ್ನು ಭೇಟಿ ಮಾಡಿದ್ದಾರೆ. ಆರೋಪಿ ಎಎಸ್‌ಐ ಅವರ ಪತ್ನಿ ತನ್ನ ಪತಿಯ ಮೇಲೆ ಹಲ್ಲೆ ಆಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಯತೀಶ್ ಪ್ರಜ್ಞಾಹೀನನಂತೆ ನಟಿಸುತ್ತಿದ್ದಾರೆ.
ಜನ ಅವರನ್ನು ಈ ಕೃತ್ಯ ಎಸಗುವಾಗ ಹಿಡಿದ ತಕ್ಷಣವೇ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದು, ಈಗ ಹಿಡಿದುಕೊಟ್ಟವರ ಮೇಲೆಯೇ ಕೊಲೆ ಯತ್ನದ ಆರೋಪ ಹೊರಿಸಿದ್ದಾರೆ. ಅಲ್ಲದೇ, ಬಡಾವಣೆಯ ವಿನೋದ್, ಸುಧೀರ್, ವಸಂತ್‌ಕುಮಾರ್, ಅನಿಲ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಕ್ಷಣ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.