ನವದೆಹಲಿ: ಜಗತ್ತಿನಲ್ಲಿ ಅಮೆರಿಕವನ್ನು ಹೊರತು ಪಡಿಸಿದರೆ ಭಾರತದಲ್ಲಿಯೇ ಅತಿಹೆಚ್ಚು ಕಿಮೀ ದೂರದ ರಸ್ತೆ ಜಾಲವನ್ನು ಹೊಂದಿದೆ. ಹೀಗೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಪ್ರಕಟಿಸಿದ್ದಾರೆ. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಶೇ.59ರಷ್ಟು ರಸ್ತೆಯ ಜಾಲ ವಿಸ್ತಾರಗೊಂಡಿದೆ. ರಾಷ್ಟ್ರೀಯ ಹೆದ್ದಾರಿಗಳೂ ಸೇರಿದಂತೆ ದೇಶದಲ್ಲಿ 63, 71,847 ಕಿಮೀ ರಸ್ತೆ ಜಾಲ ಇದೆ ಎಂದು ಹೇಳಿದ್ದಾರೆ. ಕೆಲವು ವರ್ಷಗಳ ಹಿಂದೆ ಚೀನಾ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚಿನ ರಸ್ತೆ ಜಾಲ ಹೊಂದಿದ ದೇಶವಾಗಿತ್ತು.
ಮೋದಿ ಸರ್ಕಾರದ 9 ವರ್ಷಗಳ ಸಾಧನೆಗಳ ಬಗ್ಗೆ ಮಂಗಳವಾರ ನವದೆಹಲಿಯಲ್ಲಿ ಸಚಿವ ನಿತಿನ್ ಗಡ್ಕರಿ ಮಾತನಾಡಿದ ವೇಳೆ ಈ ಮಾಹಿತಿ ನೀಡಿದ್ದಾರೆ.
“ಮೋದಿ ಸರ್ಕಾರದ ಆಡಳಿತದ ಅವಧಿಯಲ್ಲಿ ರಸ್ತೆ ನಿರ್ಮಾಣ ಕ್ಷೇತ್ರದಲ್ಲಿ ಒಂಭತ್ತು ವರ್ಷಗಳಲ್ಲಿ ಏಳು ವಿಶ್ವದಾಖಲೆಗಳನ್ನು ನಿರ್ಮಿಸಿದ್ದೇವೆ. ಸದ್ಯ ಅಮೆರಿಕವನ್ನು ಹೊರತುಪಡಿಸಿದರೆ ಜಗತ್ತಿನಲ್ಲಿ ಭಾರತದಲ್ಲಿಯೇ 2ನೇ ಅತ್ಯಂತ ದೊಡ್ಡ ರಸ್ತೆ ಜಾಲ ಹೊಂದಿರುವ ದೇಶವಾಗಿದೆ’ ಎಂದರು
ಟೋಲ್ ಮೂಲಕ ಸಂಗ್ರಹವಾಗಿರುವ ಆದಾಯ 2013-14ರಲ್ಲಿ 4, 770 ಕೋಟಿ ರೂ. ಇದ್ದದ್ದು ಪ್ರಕೃತ 41, 342 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಸಚಿವ ಗಡ್ಕರಿ ವಿವರಿಸಿದ್ದಾರೆ. 2030ರ ಒಳಗಾಗಿ ಟೋಲ್ ಮೂಲಕ ಸಂಗ್ರಹವಾಗುವ ಆದಾಯ 1,30,000 ಕೋಟಿ ರೂ.ಗೆ ವೃದ್ಧಿಸುವ ಗುರಿ ಹೊಂದಿದೆ ಎಂದರು. ಫಾಸ್ಟಾಗ್‌ನಿಂದಾಗಿ ಸುಂಕ ಸಂಗ್ರಹ ಸಮಯ ಮಿತಿ 47 ಸೆಕೆಂಡ್‌ಗೆ ಇಳಿಕೆಯಾಗಿದೆ. ಅದನ್ನು 32 ಸೆಕೆಂಡ್‌ಗೆ ಇಳಿಸಲು ಯತ್ನಿಸಲಾಗುತ್ತದೆ ಎಂದು ಗಡ್ಕರಿ ವಿವರಿಸಿದರು.
68,03,479 ಕಿಮೀ- ಅಮೆರಿಕ ಹೊಂದಿರುವ ರಸ್ತೆ ಜಾಲ
63, 71,847 ಕಿಮೀ- ದೇಶ ಹೊಂದಿರುವ ರಸ್ತೆ ಜಾಲ
91, 287 ಕಿಮೀ- 2013-14ರಲ್ಲಿ ಇದ್ದ ರಾಷ್ಟ್ರೀಯ ಹೆದ್ದಾರಿ
1,45, 240 ಕಿಮೀ- ಸದ್ಯ ದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿ
58.8 ಲಕ್ಷ ಕಿಮೀ- ಚೀನಾದಲ್ಲಿರುವ ರಸ್ತೆ ಜಾಲ