ಬೆಂಗಳೂರು: ಬಸವರಾಜ್ ಹೊರಟ್ಟಿ ಅವರು 45 ವರ್ಷದಿಂದ ವಿಧಾನಪರಿಷತ್ ಸದಸ್ಯರಾಗಿ ಸಭಾಪತಿಗಳಾಗಿ, ಮಂತ್ರಿಗಳಾಗಿ, ಅಪಾರವಾದ ಅನುಭವ ಇರುವ ಒಬ್ಬ ಹಿರಿಯ ನಾಯಕ. ಅವರು ತಮ್ಮದೆ ಆದ ಶಕ್ತಿಯನ್ನು ವಿಶೇಷವಾಗಿ ಕಾಲೇಜು, ಹೈಸ್ಕೂಲ್ ಶಿಕ್ಷಕರನ್ನ ಸಂಘಟನೆ ಮಾಡಿ ಅವರ ಸಮಸ್ಯೆಯನ್ನು ನಿರಂತರ ಬಗೆಹರಿಸಿಕೊಂಡು ಬಂದವರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬಸವರಾಜ ಹೊರಟ್ಟಿ ಅವರು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರಟ್ಟಿ ಅವರು ದೊಡ್ಡ ಹೋರಾಟಗಾರರು. ಅವರು ನಮ್ಮ ಪಕ್ಷಕ್ಕೆ ಸೇರಬೇಕು ಅನ್ನುವ ತೀರ್ಮಾನ ಮಾಡಿ, ನಾಯಕರಾದ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಎಲ್ಲ ಪ್ರಕ್ರಿಯೆ ಈಗ ಮುಗಿದಿದೆ. ಸಭಾಪತಿ ಸ್ಥಾನಕ್ಕೆ,ಪರಿಷತ್ ಸ್ಥಾನಕ್ಕೆ ರಾಜೀನಾಮೆ ಅಂಗೀಕಾರವಾದ ಮೇಲೆ ಅಧಿಕೃತವಾಗಿ ಬಿಜೆಪಿಗೆ ಸೇರಿದ್ದಾರೆ ಎಂದರು.
ಇದನ್ನೂ ಓದಿ:ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಶೀಘ್ರ ಪರಿಹಾರ: ಸಚಿವ ಕೆ.ಗೋಪಾಲಯ್ಯ
ಹುಬ್ಬಳ್ಳಿಯಲ್ಲಿ ಬೃಹತ್ ಕಾರ್ಯಕ್ರಮ ಮಾಡಿ, ಆ ಭಾಗದಲ್ಲಿ ಪಕ್ಷಕ್ಕೆ ಸ್ವಾಗತ ಮಾಡುತ್ತೇವೆ ಅವರು ಬಿಜೆಪಿಗೆ ಬಂದಿರುವುದು ಪಕ್ಷಕ್ಕೆ ಆನೆ ಬಲ ಬಂದಿದೆ. ಬಹಳ ಸುದೀರ್ಘ ಸಾರ್ವಜನಿಕ ಜೀವನ ಅವರದ್ದು, ಇಷ್ಟು ನಿರಂತರವಾಗಿ ವಿಧಾನಪರಿಷತ್ ಪ್ರತಿನಿಧಿಯಾಗಿ ದಾಖಲೆ ಇದೆ. ಆದರೆ ದೇಶದಲ್ಲಿ ಆ ರೀತಿಯ ದಾಖಲೆ ಇಲ್ಲ. ಒಬ್ಬ ಹಿರಿಯ ನಾಯಕರನ್ನು ಬರಮಾಡಿಕೊಂಡಿರುವುದು ಬಹಳ ಸಂತೋಷ ಆಗಿದೆ ಎಂದರು.
ಹೊರಟ್ಟಿ ಅವರಿಗೆ ಎಲ್ಲ ವರ್ಗದ ಜನ ಸಂಪರ್ಕ ಇದೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗಕ್ಕೆ ಶಕ್ತಿ ಬಂದಿದೆ. ಅವರಿಗೆ ಎಲ್ಲಾ ಅವಕಾಶ ಮಾಡಿಕೊಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.